Site icon Vistara News

CM Siddaramaiah : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಜಾರಿ ಬಗ್ಗೆ ಮುಂದೆ ನಿರ್ಧಾರ ಎಂದ ಸಿಎಂ

CM Siddaramaiah

ಮೈಸೂರು: ನವೆಂಬರ್‌ ತಿಂಗಳಿನಲ್ಲಿ ಜಾತಿಗಣತಿ ವರದಿ (Caste Census) ಸಲ್ಲಿಕೆಯಾಗಲಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ನವೆಂಬರ್‌ನಲ್ಲಿ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅದು ಸಲ್ಲಿಕೆಯಾದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಮೈಸೂರಿನಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ʻʻನಮ್ಮದು ಜಾತಿ ವ್ಯವಸ್ಥೆ ಆಧಾರಿತ ಸಮಾಜ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಕೊಡಬೇಕು. ಅದಕ್ಕೆ ಜಾತಿವಾರು ಅಂಕಿ ಅಂಶಗಳು ಬೇಕು. ಅದಕ್ಕಾಗಿ ನಾವು ಜಾತಿಗಣತಿ ಮಾಡಿಸಿದ್ದೆವು. ಜಾತಿ ಗಣತಿ ಆದಾಗ ಕಾಂತರಾಜ್ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದರು.ಕಾಂತರಾಜ್ ವರದಿಯನ್ನು ಆಗ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ತೆಗೆದುಕೊಳ್ಳಲಿಲ್ಲ. ಈಗಿನ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ನವೆಂಬರ್‌ನಲ್ಲಿ ವರದಿ ಕೊಡುತ್ತೇನೆ ಅಂತ ಹೇಳಿದ್ದಾರೆʼʼ ಎಂದು ಸಿದ್ದರಾಮಯ್ಯ ಹೇಳಿದರು. ʻʻವರದಿ ಸರ್ಕಾರದ ಕೈಸೇರಿದ ಮೇಲೆ ತೀರ್ಮಾನ ಮಾಡುತ್ತೇವೆʼʼ ಎಂದರು.

ʻʻಪ್ರಧಾನಿ ಮಾತು ಮಾತಿಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಹೇಳುವುದು ಒಂದು ಮಾಡುವುದು ಮತ್ತೊಂದು. ಆಡುವ ಮಾತಿನಲ್ಲಿ ಸತ್ಯ ಇರಬೇಕುʼʼ ಎಂದು ಹೇಳಿದ ಸಿದ್ದರಾಮಯ್ಯ ಅವರು, ಜಾತಿ ಗಣತಿಯಿಂದ ಸಮಾಜ ವಿಭಜನೆ ಆಗುತ್ತೆ ಅಂತಾರೆ. ಗಣತಿಯಿಂದ ಸಮಾಜ ವಿಭಜನೆ ಆಗುತ್ತೆ ಅನ್ನೋದು ಸುಳ್ಳು ಎಂದರು.

ಹೊಸ ಮದ್ಯದಂಗಡಿ ತೆರೆಯಲ್ಲ: ಸಿಎಂ ಪುನರುಚ್ಚಾರ

ʻʻಗ್ರಾಮ ಪಂಚಾಯಿತಿಗಳಲ್ಲಿ‌ ಮದ್ಯದಂಗಡಿ ತೆರೆಯುವ ವಿಚಾರ ಇಲ್ಲವೇ ಇಲ್ಲʼʼ ಎಂದು ಸ್ಪಷ್ಟಪಡಿಸಿದರು ಸಿದ್ದರಾಮಯ್ಯ. ಈ ನಡುವೆ, ಕುಡಿಯುವವರನ್ನು ತಡೆಯೋದಕ್ಕೆ ಆಗುತ್ತಾ? ಮದ್ಯ ಉದ್ಯಮದಿಂದ ಉದ್ಯೋಗ ಸೃಷ್ಠಿಯಾಗುತ್ತದೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಕೇಳಿದಾಗ, ʻʻಡಿಕೆಶಿ ಅವರು ಹೊಸದಾಗಿ ಮದ್ಯದಂಗಡಿ ತೆರೆಯುತ್ತೇವೆ ಎಂದು ಹೇಳಿದ್ದಾರಾ?ʼʼ ಎಂದು ಪ್ರಶ್ನಿಸಿದರು.

ʻʻಡಿಕೆ ಶಿವಕುಮಾರ್ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಮಗೆ ಸಾರ್ವಜನಿಕರ ಅಭಿಪ್ರಾಯ ಮುಖ್ಯ.. ನನ್ನ ಪ್ರಕಾರ ಆ ಥರ ಯಾವುದೇ ಪ್ರಸ್ತಾಪ ಇಲ್ಲ. ಹೊಸ ಲಿಕ್ಕರ್ ಶಾಪ್ ತೆರೆಯಲು ಅವಕಾಶವಿಲ್ಲ.. ಈ ಬಗ್ಗೆ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಹೇಳಿದರು.

ಇದನ್ನೂ ಓದಿ : Caste Census : ಜಾತಿ ಗಣತಿ ಎಂಬ ಚುನಾವಣಾ ಪೂರ್ವ ಬ್ರಹ್ಮಾಸ್ತ್ರ; ಯಾರ ತಂತ್ರಗಾರಿಕೆ ಏನು?

ಮಹಿಷ ದಸರಾದ ಬಗ್ಗೆ ಜಿಲ್ಲಾಡಳಿತ ತೀರ್ಮಾನ

ಮೈಸೂರಿನಲ್ಲಿ ಮಹಿಷ‌ ದಸರಾ ಆಚರಣೆ ಮಾಡುವ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, ʻʻಈ ಹಿಂದೆಯೂ ಮಹಿಷ ದಸರಾ ಆಚರಣೆ ಮಾಡಿದ್ದಾರೆ. ಮಹಿಷ ದಸರಾ ಆಚರಿಸುವುದನ್ನು ಜಿಲ್ಲಾಡಳಿತ ತೀರ್ಮಾನ ಮಾಡುತ್ತದೆ. ಸರ್ಕಾರ ಯಾವಾಗಲೂ ಮಹಿಷ ದಸರಾ ಮಾಡಿಲ್ಲ. ಮೈಸೂರು‌‌ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದರು.

Exit mobile version