ಮೈಸೂರು: ದಲಿತರನ್ನು ಜಾತಿ ನಿಂದನೆ ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ (Casteist slurs) ಆರೋಪದಲ್ಲಿ ಬಿಜೆಪಿ ಕಾರ್ಯಕರ್ತೆ ಲೀಲಾ ಶೆಣೈ ಹಾಗೂ ಪುತ್ರಿ ಸುಪ್ರಿಯಾ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ.
ಅರವಿಂದ ನಗರದ ನಿವಾಸಿ ಅಭಿಷೇಕ್, ತಂದೆ ಶಿವಸ್ವಾಮಿ, ತಾಯಿ ಲತಾ ಮಂಗೇಶ್ವರ ಹಾಗೂ ಲೀಲಾ ಶೆಣೈ ನಡುವೆ ಶುಕ್ರವಾರ ಬೆಳಗ್ಗೆ ಗಲಾಟೆಯಾಗಿದೆ. ಈ ವೇಳೆ ಲೀಲಾ ಶೆಣೈ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸುಮಾರು 200ಕ್ಕೂ ಹೆಚ್ಚು ಜನರು ಕುವೆಂಪು ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು. ನಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murugha seer case | ಶ್ರೀಗಳ ವಿರುದ್ಧ ಸುಳ್ಳು ಕೇಸಿಗೆ ಪಿತೂರಿ ಆರೋಪ: ಎಸ್.ಕೆ. ಬಸವರಾಜನ್‌ಗೆ ಹೈಕೋರ್ಟ್ ಜಾಮೀನು
ಆಗಿದ್ದೇನು?: ಲೀಲಾ ಶೆಣೈ ಹಾಗೂ ಅಭಿಷೇಕ್ ಕುಟುಂಬದವರು ಅಕ್ಕಪಕ್ಕದ ಮನೆಯ ನಿವಾಸಿಗಳು. ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಅಭಿಷೇಕ್ ತಂದೆ ಶಿವಸ್ವಾಮಿ ಹಾಗೂ ಲೀಲಾ ಶೆಣೈ ನಡುವೆ ಜಗಳ ಶುರುವಾಗಿದೆ. ನನ್ನ ತಂದೆ ಪೂಜೆ ಮಾಡುವಾಗ ಲೀಲಾ ಶೆಣೈ ಮತ್ತು ಪುತ್ರಿ ಸುಪ್ರಿಯಾ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಪ್ರಶ್ನಿಸಲು ಹೋದ ನನ್ನ ಮೇಲೆ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದರು. ಈ ಬಗ್ಗೆ ದೂರು ನೀಡಲು ಕುವೆಂಪುನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ, ಮೊದಲು ಚಿಕಿತ್ಸೆ ಪಡೆಯುವಂತೆ ಸಿಬ್ಬಂದಿ ಸೂಚಿಸಿದರು. ಅದರಂತೆ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸುವಾಗ ಹುಡುಕಿಕೊಂಡು ಬಂದ ಲೀಲಾ ಶೆಣೈ ಕೊಲೆ ಬೆದರಿಕೆ ಹಾಕಿದರು ಎಂದು ಅಭಿಷೇಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅರವಿಂದ ನಗರದಲ್ಲಿ ನಾವು 6 ವರ್ಷಗಳಿಂದ ವಾಸವಾಗಿದ್ದು, ಬೆಳಗ್ಗೆ ಲೀಲಾ ಶೆಣೈ ಹಾಗೂ ಸುಪ್ರಿಯಾ ಶೆಣೈ ಗಲಾಟೆ ಮಾಡಿದ್ದಾರೆ. ನನ್ನ ಮಗ ಅಭಿಷೇಕ್ ಚಿಕಿತ್ಸೆ ಪಡೆಯಲು ಹೋದಾಗ ಪೊಲೀಸ್ ಠಾಣೆಯಲ್ಲೇ ನನಗೆ ಜಾತಿ ನಂದನೆ ಮಾಡಿದ್ದಾರೆ ಎಂದು ಅಭಿಷೇಕ್ ತಾಯಿ ಲತಾ ಮಂಗೇಶ್ವರ ಮತ್ತೊಂದು ದೂರು ನೀಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತೆ ಲೀಲಾ ಶೆಣೈ ಹಾಗೂ ಪುತ್ರಿ ಸುಪ್ರಿಯಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ | Corruption charge | ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ಕೋರ್ಟ್