Site icon Vistara News

CM Siddaramaiah : ಬೇಡ ಬೇಡ ಎನ್ನುತ್ತಲೇ ಬಂದು ಕುಣಿದ ಸಿದ್ದರಾಮಯ್ಯ; ಡ್ಯಾನ್ಸ್‌ ಮಾಡಲು ಕಾರಣ ಇವರು!

CM Siddaramaiah dance

ವಿಜಯನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಂಪಿಯಲ್ಲಿ ಗುರುವಾರ (ನ. 2) ನಡೆದ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮದ (Karnataka Sambhrama 50 programme) ವೇದಿಕೆಯಲ್ಲಿ ವೀರ ಮಕ್ಕಳ ಕುಣಿತಕ್ಕೆ (Veera Makkala Kunita) ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಈ ಮೂಲಕ ತಮ್ಮ ಮೂಲ ಕಲೆಯನ್ನು ಸಿಎಂ ಮತ್ತೊಮ್ಮೆ ನೆನೆದರು. ಆದರೆ, ನಿಜವಾಗಿಯೂ ಸಿದ್ದರಾಮಯ್ಯ (CM Siddaramaiah) ಅವರು ಡ್ಯಾನ್ಸ್‌ ಮಾಡುವ ಉಮೇದಿನಲ್ಲಿ ಇರಲಿಲ್ಲ. ಸಚಿವ ಜಮೀರ್ ಅಹ್ಮದ್‌ ಖಾನ್‌ (Minister Zameer Ahmed Khan) ಇದಕ್ಕೆ ಕಾರಣರಾದವರು‌.

ವಿಶ್ವ ವಿಖ್ಯಾತ ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ವೀರ ಮಕ್ಕಳ ಕುಣಿತಕ್ಕೆ ಸಾಥ್‌ ನೀಡಿದ್ದು, ಲಯ ತಪ್ಪದೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ಈಗ ಸಖತ್‌ ವೈರಲ್‌ ಆಗಿದೆ.

ಬೇಡ ಎಂದು ಗೋಣಾಡಿಸುತ್ತಲೇ ಬಂದು ಡ್ಯಾನ್ಸ್‌!

ಹಂಪಿಯಲ್ಲಿ ನಡೆದ ‘ಕರ್ನಾಟಕ ಸಂಭ್ರಮ-50’ರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನ ಹುಂಡಿಯ ಮೂಲ ಕಲೆಯಾಗಿ ಬೆಳೆದುಕೊಂಡು ಬಂದಿರುವ ವೀರ ಮಕ್ಕಳ ಕುಣಿತವನ್ನು ಆಯೋಜಿಸಲಾಗಿತ್ತು. ಆ ನೃತ್ಯಕ್ಕೆ ಕಲಾ ತಂಡದವರು ವೇದಿಕೆಗೆ ಬರುತ್ತಿದ್ದಂತೆ, ಕಾರ್ಯಕ್ರಮದ ನಿರೂಪಕರು ಸಿಎಂ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, “ಸರ್‌ ಇದು ನಿಮ್ಮ ಊರಿನ ಕಲೆಯಾಗಿದೆ. ನಿಮಗಾಗಿಯೇ ಈ ಕಾರ್ಯಕ್ರಮದಲ್ಲಿ ವೀರ ಕುಣಿತ ನೃತ್ಯವನ್ನು ಆಯೋಜನೆ ಮಾಡಲಾಗಿದೆ. ಹೀಗಾಗಿ ತಾವು ಬಂದು ಇಲ್ಲಿ ಡ್ಯಾನ್ಸ್‌ ಮಾಡಿ” ಎಂದು ಮನವಿ ಮಾಡಿದರು.

ಕಾರ್ಯಕ್ರಮ ನಿರೂಪಕರು ಮನವಿ ಮಾಡಿದಾಗ ಸಿಎಂ ಸಿದ್ದರಾಮಯ್ಯ ಅವರು, “ಬೇಡ ಬೇಡ ನಾನು ಡ್ಯಾನ್ಸ್‌ ಮಾಡಲಾರೆ” ಎಂದು ತಲೆಯನ್ನು ಅಡ್ಡಡ್ಡ ಆಡಿಸಿದರು. ಆ ವೇಳೆಗಾಗಲೇ ಸಚಿವರಾದ ಶಿವರಾಜ್‌ ತಂಗಡಗಿ ಹಾಗೂ ಜಮೀರ್‌ ಅಹ್ಮದ್‌ ಖಾನ್‌ ಅವರು ಸಿಎಂ ಬಳಿ ಬನ್ನಿ ಡ್ಯಾನ್ಸ್‌ ಮಾಡಿ ಎಂದು ಮನವಿ ಮಾಡಿದರು. ಆಗಲೂ ಸಹ ಗೋಣಾಡಿಸಿದ ಸಿಎಂ ಬರಲಾರೆ ಎಂದು ಕೈ ಅಡ್ಡ ಮಾಡಿದರು. ಕೊನೆಗೆ ಸಚಿವ ಜಮೀರ್‌ ಅವರು ಸಿಎಂ ತೋಳನ್ನು ಹಿಡಿದು, “ನೀವೀಗ ಡ್ಯಾನ್ಸ್‌ ಮಾಡಲು ಬರಲೇಬೇಕು ಎಂದು ಎಳೆದಾಗ, ಸಿಎಂ ಹೆಜ್ಜೆ ಹಾಕುವ ಉತ್ಸಾಹ ತೋರಿದರು. ತಮ್ಮ ಆಸನದಿಂದ ಎದ್ದ ಸಿಎಂ ಕನ್ನಡ ಬಾವುಟದ ಶಾಲು ಸೇರಿದಂತೆ ತಮ್ಮ ಶಾಲನ್ನು ಕೆಳಗಿಟ್ಟು, ತಮ್ಮ ಪಂಚೆಯನ್ನು ಸರಿಪಡಿಸಿಕೊಂಡು ವೇದಿಕೆಯತ್ತ ತೆರಳಿ ಡ್ಯಾನ್ಸ್‌ ಮಾಡಿದರು.

3 ನಿಮಿಷ ಸಿಎಂ ಡ್ಯಾನ್ಸ್

ವೇದಿಕೆಗೆ ಬಂದ ಸಿಎಂ ಸಿದ್ದರಾಮಯ್ಯ ಅವರು ಎಂದಿನಂತೆ ವೀರ ಮಕ್ಕಳ ಕುಣಿತದ ಹೆಜ್ಜೆಯನ್ನು ಹಾಕಿದರು. ಈ ವೇಳೆ ಯಾವುದೇ ರೀತಿಯಾದಂತಹ ಸ್ಟೆಪ್‌ ಅನ್ನು ತಪ್ಪಲಿಲ್ಲ. ಸುಮಾರು 3 ನಿಮಿಷಗಳ ಕಾಲ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇದನ್ನೂ ಓದಿ: Karnataka Weather : ಬೆಂಗಳೂರು ಬಿಟ್ಟು ಈ ಜಿಲ್ಲೆಗಳಲ್ಲಿ ಇನ್ನೊಂದು ವಾರ ಭರ್ಜರಿ ಮಳೆ

ಕರ್ನಾಟಕ ಸಂಭ್ರಮಕ್ಕೆ ಚಾಲನೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹೊಸಪೇಟೆಯ ಹಂಪಿಯಲ್ಲಿ ಗುರುವಾರ ಆಯೋಜಿಸಿದ್ದ “ಕರ್ನಾಟಕ ಸಂಭ್ರಮ- 50” ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಜ್ಯೋತಿ ಬೆಳಗಿಸಿ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ‌ ವರ್ಷವೀಡಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ರಥಯಾತ್ರೆಗೂ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ, ಕರ್ನಾಟಕ ಸಂಭ್ರಮ- 50 ಕ್ಕೆ ಚಾಲನೆ ನೀಡಲಾಗಿದ್ದು, ಇಡೀ ವರ್ಷ ಆಚರಣೆಯಾಗಲಿದೆ. ದೇವರಾಜ ಅರಸು ಅವರು 1973 ರಲ್ಲಿ ಮುಖ್ಯಮಂತ್ರಿಗಳಾಗಿದ್ದರು, ನಾನು 2023 ರಲ್ಲಿ ಮುಖ್ಯಮಂತ್ರಿಯಾಗಿದ್ದೇನೆ. ಕನ್ನಡ ಜ್ಯೋತಿ ರಥಯಾತ್ರೆಗೆ ಅವರೂ ಇಲ್ಲಿಂದಲೇ ಚಾಲನೆ ನೀಡಿದ್ದರು, ನಾನೂ ಇಲ್ಲಿಂದಲೇ ಚಾಲನೆ ನೀಡಿರುವುದು ಕಾಕತಾಳೀಯ ಎಂದು ಹೇಳಿದ್ದರು.

Exit mobile version