Site icon Vistara News

Yathindra Siddaramaiah : ಲಿಸ್ಟ್‌ ಫೈನಲ್‌ ಮುಜುಗರ; ಯತೀಂದ್ರ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ

CM Siddaramaiah Yathindra Siddaramaiah

ಬೆಂಗಳೂರು: ʻನನ್ನದೇ ಲಿಸ್ಟ್‌ ಫೈನಲ್‌ ಮಾಡಬೇಕುʼ ಎಂದು ನೇರ ಆದೇಶ ನೀಡುವ ಮೂಲಕ ಸುದ್ದಿಯಲ್ಲಿರುವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರ ಮೇಲೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಗರಂ ಆಗಿದ್ದಾರೆ.

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್‌ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಲಿಸ್ಟ್‌ ಬಗ್ಗೆ ಮಾತನಾಡಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರು ಮಾಡಿದ ಕರೆಗೆ ಪ್ರತ್ಯುತ್ತರ ನೀಡಿದ ಯತೀಂದ್ರ ಅವರು, ಸಿಎಂ ಅವರ ವಿಶೇಷಾಧಿಕಾರಿ ಮಹದೇವ್‌ ನೀಡಿದ ಪಟ್ಟಿಯಲ್ಲಿ ವಿವೇಕಾನಂದ ಎಂಬ ಹೆಸರು ಹೇಗೆ ಸೇರಿಕೊಂಡಿತು ಎಂದು ಕೇಳಿದ್ದಾರೆ. ಸಿದ್ದರಾಮಯ್ಯ ಅವರ ಕೈಯಿಂದ ಮಹದೇವ್‌ ಅವರಿಗೆ ಫೋನ್‌ ಕೊಡಿಸಿ ʼಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಸೂಚಿಸಿರುವ ವಿಡಿಯೊ ಈಗ ವೈರಲ್‌ ಆಗಿದೆ.

ಇದು ವರ್ಗಾವಣೆಗೆ ಸಂಬಂಧಿಸಿದ ಪಟ್ಟಿ ಎಂದು ಸುದ್ದಿಯಾಗಿದೆ. ಯತೀಂದ್ರ ಸಿದ್ದರಾಮಯ್ಯ ಅವರು ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಗಳಿಗೂ ಈ ವಿಡಿಯೊಗೂ ತಾಳೆ ಹಾಕಲಾಗುತ್ತಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಕಾವೇರಿಯಲ್ಲಿ ಜತೆಯಾಗಿರುವ ಸಿದ್ದರಾಮಯ್ಯ, ಪುತ್ರ ಯತೀಂದ್ರ

ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಈ ಘಟನೆಯ ವಿಡಿಯೊ ಗುರುವಾರ ವೈರಲ್‌ ಆಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಬ್ರೇಕ್‌ ಆದಾಗ ಸಿದ್ದರಾಮಯ್ಯ ಮತ್ತು ಯತೀಂದ್ರ ಅವರು ಕಾವೇರಿ ನಿವಾಸದಲ್ಲೇ ಇದ್ದರು. ಅಲ್ಲಿ ಅವರಿಬ್ಬರು ಮುಖಾಮುಖಿಯಾದಾಗ ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಸುದ್ದಿ ಪ್ರಸ್ತಾಪಿಸಿ ಏನಿದು ಎಂದು ಸಿದ್ದರಾಮಯ್ಯ ಗರಂ ಆದರೆನ್ನಲಾಗಿದೆ.

ಇದನ್ನೂ ಓದಿ: Yathindra Siddaramaih : ಯತೀಂದ್ರ ವರ್ಗಾವಣೆ ದಂಧೆಗೆ ಸಾಕ್ಷಿ; ಸಿಎಂ ರಾಜೀನಾಮೆಗೆ HDK ಆಗ್ರಹ

ಇದಕ್ಕೆ ಯತೀಂದ್ರ ಕೊಟ್ಟ ಸ್ಪಷ್ಟನೆ ಏನು?

ʻʻಅದು ಕ್ಷೇತ್ರ ಮತ್ತು ಜಿಲ್ಲೆಯ ಕೆಲಸಗಳ ಪಟ್ಟಿಯನ್ನು ನಾನು ಕೊಟ್ಟಿದ್ದೆ. ನಾನು ಕೊಟ್ಟಿದ್ದು ಮಾಡಿ ಎಂದು ನಿಮ್ಮ ಜತೆ ಮಾತನಾಡಿದ್ದು. ಆದರೆ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಬರ್ತಿದೆʼʼ ಎಂದು ಯತೀಂದ್ರ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ʻʻನೀವು ಮಹದೇವ್‌ ಅವರು ಪಟ್ಟಿ ಫೈನಲ್ ಮಾಡಿದ್ದಕ್ಕೆ ನನಗೆ ಬೇಸರ ಆಗಿತ್ತು. ಕ್ಷೇತ್ರದ ಕೆಲಸಕ್ಕಾಗಿ ಜಿಲ್ಲೆಯ ಕಾರ್ಯಕರ್ತರನ್ನು ಪರಿಗಣಿಸುವ ಸಲುವಾಗಿ ನನ್ನ ಪಟ್ಟಿ ಫೈನಲ್ ಮಾಡಿ ಎಂದು ಹೇಳಿದ್ದೆʼʼ ಎಂದು ಯತೀಂದ್ರ ಸಮಜಾಯಿಷಿ ನೀಡಿದರು ಎನ್ನಲಾಗಿದೆ.

ಆದರೆ, ಅದನ್ನೆಲ್ಲ ಸಾರ್ವಜನಿಕ ಸಭೆಯಲ್ಲಿ ಹೇಳ್ತಾರಾ? ಎಲ್ಲಿ ಏನು ಮಾತನಾಡಬೇಕು ಅಂತ ಗೊತ್ತಾಗಲ್ವಾ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಕಾವೇರಿ ನಿವಾಸಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್‌

ಇವೆಲ್ಲ ಬೆಳವಣಿಗೆಗಳ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ. ಅಲ್ಲಿ ಹಲವು ವಿಚಾರಗಳ ಚರ್ಚೆ ನಡೆಯಲಿದೆ.

Exit mobile version