ಮೈಸೂರು: ಐತಿಹಾಸಿಕ 413ನೇ ದಸರಾ ಮಹೋತ್ಸವದ (Mysore Dasara) ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಂದಿ ಪೂಜೆಯನ್ನು (Nandi Pooja) ನೆರವೇರಿಸುವುದರ ಮೂಲಕ ವಿಜಯ ದಶಮಿ ಮೆರವಣಿಗೆಗೆ (Vijayadashami procession) ಮುನ್ನುಡಿ ಬರೆದರು. ಹಿಂದೂ ಸಂಪ್ರದಾಯದಲ್ಲಿ (Hindu tradition) ಪ್ರಥಮ ಪೂಜಕ ಗಣೇಶನಾದರೂ, ಜಂಬೂ ಸವಾರಿಯಲ್ಲಿ (Jumboo Savari) ನಂದಿಗೆ ಅಗ್ರ ಪೂಜೆ ಸಲ್ಲಿಕೆಯಾಗುತ್ತದೆ. ಅದರಂತೆ ಮಂಗಳವಾರ (ಅಕ್ಟೋಬರ್ 24) ಮಧ್ಯಾಹ್ನ 1.46ರಿಂದ 2.08ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ಇರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರು, ಜಂಬೂ ಸವಾರಿಗೆ ಅಧಿಕೃತ ಚಾಲನೆಯನ್ನು ನೀಡಿದರು. ಈ ವೇಳೆ ವೀರಗಾಸೆ ತಂಡದವರು ಭಾಗಿಯಾಗಿದ್ದರು. ದಶಕಗಳಿಂದ ಉಡಿಗಾಲ ಮಹದೇವಸ್ವಾಮಿ ನೇತೃತ್ವದ ಈ ತಂಡ ಭಾಗಿಯಾಗುತ್ತಲೇ ಬಂದಿದ್ದು, ದಸರೆಗೆ ಕಳೆಕಟ್ಟಿಕೊಟ್ಟಿದೆ.
ಇದನ್ನೂ ಓದಿ: Mysore Dasara : ಕಾವೇರಿ ಸಂಕಷ್ಟ, ಬರದ ಮಧ್ಯೆ ಅದ್ಧೂರಿ ದಸರಾ ವಿರೋಧಿಸಿ ರೈತರ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯಗೆ ಇದು ಆರನೇ ಅವಕಾಶ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರೇ ಆಗಿದ್ದಾರೆ. ಮುಖ್ಯಮಂತ್ರಿಯಾಗಿ ಆರನೇ ಬಾರಿ ಜಂಬೂಸವಾರಿಗೆ ಚಾಲನೆ ನೀಡುವ ಅವಕಾಶವನ್ನು ಸಿದ್ದರಾಮಯ್ಯ ಅವರು ಈ ಮೂಲಕ ಪಡೆದಂತಾಗಿದೆ. ಇನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಇದು 3ನೇ ದಸರಾ ಸಂಭ್ರಮ ಆಗಿದೆ.
ಜಂಬೂ ಸವಾರಿ ಆರಂಭ
ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ಪೂಜೆ ನಡೆದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಇನ್ನಿತರ ಸಚಿವರು ತೆರೆದ ವಾಹನದಲ್ಲಿ ಅರಮನೆ ಮುಂಭಾಗ ಬಂದರು. ಅಲ್ಲದೆ, ನಂದಿ ಪೂಜೆಯೊಂದಿಗೆ ಜಂಬೂ ಸವಾರಿ ಮೆರವಣಿಗೆಗೂ ಚಾಲನೆ ದೊರೆತಿದೆ. ಈ ಮೂಲಕ ನಂದಿ ಧ್ವಜದ ಹಿಂದೆ ನಿಶಾನೆ ಆನೆ, ಇನ್ನುಳಿದ ಕಲಾತಂಡಗಳು, ಸ್ತಬ್ಧಚಿತ್ರಗಳ ಪಯಣವೂ ಪ್ರಾರಂಭವಾದಂತೆ ಆಗಿದೆ.
ಮೀನ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ
ಸಂಜೆ 4.40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Mysore Dasara : ಅರಮನೆಯಲ್ಲಿ ವಿಜಯದಶಮಿಗೆ ತೆರೆ, ಕಂಕಣ ಬಿಚ್ಚಿದ ಯದುವೀರ್; ಶೀಘ್ರ ಜಂಬೂ ಸವಾರಿ ಶುರು
ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತಿದ್ದಂತೆ ಅರಮನೆ ಮಾರ್ಗವಾಗಿ ಜಂಬೂ ಸವಾರಿ ಹೊರಡುತ್ತದೆ. ಗಜಪಡೆಗಳ ಹಿಂದೆ 49 ಸ್ತಬ್ಧ ಚಿತ್ರಗಳು, 50 ಕಲಾತಂಡಗಳು ಸೇರಿ 150 ಪ್ರಾಕಾರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.