ಮೈಸೂರು: ʻʻರಾಮನ ಪೇಟೆಂಟ್ (Patent of Srirama) ಅನ್ನು ಬಿಜೆಪಿಗೆ ಕೊಟ್ಟಿದ್ದೇ ಕಾಂಗ್ರೆಸ್. ರಾಮನನ್ನು ಕಾಂಗ್ರೆಸಿಗರೇ ಭಕ್ತಿ ಭಾವದಿಂದ ಪೂಜಿಸಿದ್ದರೆ ಬಿಜೆಪಿಗೆ ಯಾಕೆ ಈ ಪೇಟೆಂಟ್ (Rama patent to BJP) ಸಿಗುತ್ತಿತ್ತು? ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕಾಂಗ್ರೆಸ್‌ಗೆ ರಾಮ ಏನು ಬಿಜೆಪಿ ಪೇಟೆಂಟಾ ಎಂದು ಕೇಳುವ ನೈತಿಕತೆ ಇಲ್ಲ.ʼʼ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ (MP Pratapsimha) ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ʻʻಕಾಂಗ್ರೆಸ್‌ಗೆ ರಾಮ ರಾಜ್ಯದ ಮೇಲೆ ನಂಬಿಕೆ ಇದ್ಯಾ? ರಾವಣ ರಾಜ್ಯದ ಮೇಲೆ ನಂಬಿಕೆ ಇದ್ಯಾ ಅವರನ್ನೇ ಕೇಳಿʼʼ ಎಂದು ಹೇಳಿದರು. ಕಾಂಗ್ರೆಸ್‌ಗೆ ಗಾಂಧೀಜಿಯ ರಾಮ ರಾಜ್ಯದ ಮೇಲೆ ನಂಬಿಕೆ ಇಲ್ಲ ಎಂದು ಅವರು ಹೇಳಿದರು.
ಅಯೋಧ್ಯೆ ಮಂತ್ರಾಕ್ಷತೆಗೆ ಅನ್ನಭಾಗ್ಯ ಅಕ್ಕಿ ಬಳಸುತ್ತಾರೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಗೇಲಿ ಮಾಡಿದ ಅವರು, ʻʻಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈಗಳಿಗೆ ಮಂತ್ರಾಕ್ಷತೆಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ?ʼʼ ಎಂದು ಕೇಳಿದರು.
ಅಕ್ಷತೆ, ಗೋತ್ರದ ಮೇಲೆ ಕಾಂಗ್ರೆಸ್ ಗೆ ಸಿದ್ದರಾಮಯ್ಯಗೆ ನಂಬಿಕೆ ಇಲ್ಲ ಎಂದು ಹೇಳಿದ ಸಂಸದ ಪ್ರತಾಪ್ ಸಿಂಹ ಅವರು, ಅಯೋಧ್ಯೆಗೆ ಹೋಗುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದರು.
ಯತೀಂದ್ರ ಅವರೇ ನ್ಯಾಷನಲ್ ಲೀಡರ್
ಸಿದ್ದರಾಮಯ್ಯ ಟಾರ್ಗೆಟ್ ಮಾಡ್ತಾ ಇದಾರೆ, ಟಾರ್ಗೆಟ್ ಮಾಡ್ತಿದಾರೆ ಎಂದು ಹೇಳುತ್ತಾರಲ್ಲಾ, ಟಾರ್ಗೆಟ್ ಮಾಡಲು ಪ್ರತಾಪ್ ಸಿಂಹ ಏನು ನ್ಯಾಷನಲ್ ಲೀಡರಾ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ʻʻಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ. ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದು ಬರವಣಿಗೆ ಮೂಲಕ ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆʼʼ ಎಂದು ಹೇಳಿದ್ದ ಆಕೆ, ʻʻಅಪ್ಪ ಸಿಎಂ ಆಗಿದ್ದಾಗ ತನ್ನ ಖಾಸಗಿ ಲ್ಯಾಬ್ ಗೆ ಗುತ್ತಿಗೆ ಪಡೆದು ಕೊಳ್ಳುವಂತವರು ನ್ಯಾಷನಲ್ ಲೀಡರ್. ಅಪ್ಪನ ನೆಲೆ ಬಿಡಿಸಿ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್. ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅಂತ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್. ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯʼʼ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.