Site icon Vistara News

Drowned in River : ಕಾವೇರಿ ನದಿಯಲ್ಲಿ ಈಜಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

Drowned in water

ಮೈಸೂರು: ನೀರಿನಲ್ಲಿ ಮುಳುಗಿ ಯುವಕನೊಬ್ಬ (Drowned in River) ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ತಿ. ನರಸೀಪುರ ತಾಲೂಕಿನ ಮರಡೀಪುರ ಗ್ರಾಮದಲ್ಲಿ ನಡೆದಿದೆ. ರಾಹುಲ್ (17) ಮೃತ ದುರ್ದೈವಿ.

ಸ್ನೇಹಿತರ ಜತೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ರಾಹುಲ್‌ ನೀರಿನಿಂದ ಹೊರಬರಲು ಆಗದೆ ಮುಳುಗಿ ಮೃತಪಟ್ಟಿದ್ದಾನೆ. ಜತೆಯಲ್ಲಿದ್ದ ಸ್ನೇಹಿತರು ರಕ್ಷಣೆಗೆ ತೆರಳಿದ್ದಾರೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ರಾಹುಲ್‌ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಮಹದೇಶ್ವರ ದೇವಸ್ಥಾನದ ಬಳಿ ಇರುವ ಹೊಳೆಯಲ್ಲಿ ನೀರಿಗೆ ಇಳಿದು ಆಟ ಆಡುವಾಗ ನೀರಿನಲ್ಲಿ ಮುಳುಗಿದ್ದಾನೆ. ವಿಷಯ ತಿಳಿದ ಕೂಡಲೇ ಹೊಳೆ ಬಳಿ ಬಂದ ಪೋಷಕರು ನೀರಿನಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident: ಎಲೆಕ್ಷನ್‌ ಡ್ಯೂಟಿಗೆ ಹೋಗುತ್ತಿದ್ದಾಗ ತಮಿಳುನಾಡಲ್ಲಿ ಅಪಘಾತ; ಕರ್ನಾಟಕ ಪೊಲೀಸ್‌ ಸೇರಿ ಇಬ್ಬರ ಸಾವು

ಬಿಸಿಲ ತಾಪದಿಂದ ಹೊಳೆಗೆ ಸ್ನಾನಕ್ಕೆ ಹೋದವ ನೀರು ಪಾಲು

ಕೊಡಗು (Kodagu News): ಹೆರೂರು ಬಳಿ‌ಯ ಹಾರಂಗಿ ಹಿನ್ನೀರಿನಲ್ಲಿ (Harangi Backwater) ಈಜಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ. ವಿರಾಜಪೇಟೆ ತಾಲೂಕಿನ ಕೊಳಕೇರಿ ಬಳಿಯ ಕುವಲೆಕ್ಕಾಡು ಗ್ರಾಮದ ಕುಪ್ಪೋಟು ಹೊಳೆಗೆ ಸ್ನಾನಕ್ಕೆ ಹೋದವರು ನೀರುಪಾಲಾಗಿದ್ದಾರೆ.

ಕಕ್ಕಬ್ಬೆ ಕುಂಜಿಲ ವಾಟೆಕ್ಕಾಡು ಗ್ರಾಮದ ದೇವಯ್ಯ (38) ಮೃತ ದುರ್ದೈವಿ. ಬಿಸಿಲ ಬೇಗೆ ಹಿನ್ನೆಲೆ‌ಯಲ್ಲಿ ಅವರು ನೀರಿಗಿಳಿದಿದ್ದರು ಎನ್ನಲಾಗಿದೆ. ಆದರೆ, ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಇವರು ಕುವಲೆಕ್ಕಾಡು ಗ್ರಾಮದ ಕುಪ್ಪೋಟು ಹೊಳೆಗೆ ಸ್ನಾನಕ್ಕೆ ತೆರಳಿದಾಗ ಘಟನೆ ನಡೆದಿದೆ.

ತಮ್ಮನೊಂದಿಗೆ ತೋಟದ ಕೆಲಸಕ್ಕೆ ತೆರಳಿದ್ದ ದೇವಯ್ಯ ಅವರು ಬಿಸಿಲಿನ ತಾಪದಿಂದ ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಈಜುವಾಗ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Air Gun: ಏರ್ ಗನ್‌ ಜತೆ ಬಾಲಕನ ಆಟ; ಮಿಸ್ ಫೈರ್ ಆಗಿ ಸಾವು

ಈಜಲು ಹೋದವ ಮೀನಿನ ಬಲೆಗೆ ಸಿಲುಕಿ ಸಾವು!

ಹೆರೂರು ಬಳಿ‌ಯ ಹಾರಂಗಿ ಹಿನ್ನೀರಿನಲ್ಲಿ (Harangi Backwater) ಏಪ್ರಿಲ್‌ 6ರಂದು ಈಜಲು ತೆರಳಿದ ವ್ಯಕ್ತಿ ನೀರು (Drowned in water) ಪಾಲಾಗಿದ್ದರು. ಬಾಳುಗೋಡು ನಿವಾಸಿ ಬಾಲು (40) ಮೃತ ದುರ್ದೈವಿ. ಬಾಲು ಸಂಬಂಧಿಕರ ಮನೆಗೆ ಬಂದಿದ್ದರು. ಜಾನುವಾರುಗಳಿಗೆ ನೀರು ಕೊಟ್ಟು ನದಿಯತ್ತ ತೆರಳಿದ ಇವರು, ಬಿಸಿಲ‌ ಬೇಗೆಗೆ ಬೇಸತ್ತು ನೀರಿಗಿಳಿದು ಈಜಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಈ ವೇಳೆ ಕಾಲಿಗೆ ಮೀನಿನ ಬಲೆ ಸಿಲುಕಿ ನಿರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.

ಹಾರಂಗಿ ಹಿನ್ನೀರಿನಲ್ಲಿ ಕೆಲವರು ಮೀನು ಹಿಡಿಯಲು ಬಲೆಗಳನ್ನು ಹಾಕಿಡುತ್ತಿದ್ದಾರೆ. ಆದರೆ, ಈ ಬಗ್ಗೆ ಅರಿವು ಇಲ್ಲದ ಬಾಲು ನೀರಿಗೆ ಈಜಲು ಇಳಿದಿದ್ದರಿಂದ ಕಾಲಿಗೆ ಬಲೆ ಸಿಲುಕಿದೆ. ಹೀಗಾಗಿ ಅವರಿಗೆ ಕಾಲನ್ನು ಬಡಿಯಲಾಗದೆ ನೀರಿನೊಳಗೆ ಮುಳುಗಿದ್ದಾರೆ. ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ನಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version