ಮೈಸೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ (Electric shock) ತುಳಿದು ಯುವಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಮೈಸೂರಿನ ಹುಣಸೂರು ತಾಲೂಕಿನ ಹೊಸರಾಮನಹಳ್ಳಿಯಲ್ಲಿ ಘಟನೆ ನಡೆದಿದೆ. ಮಂಚೂನಾಯಕ (18) ಮೃತ ದುರ್ದೈವಿ.
ಮಂಚೂನಾಯಕ ತಮ್ಮ ಜಮೀನಿನಲ್ಲಿ ಬಾಳೆ ಗೊನೆ ಕೊಯ್ಯಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದು ಎರಡು ದಿನ ಕಳೆದರೂ ಇಲಾಖಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಎರಡು ದಿನಗಳಿಂದ ಹಲವು ಬಾರಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯ ಸಂಪರ್ಕ ಕಡಿತಗೊಳಿಸುವಂತೆ ಮನವಿ ಮಾಡಿದ್ದರೂ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದೆ. ಲೈನ್ ಮ್ಯಾನ್ ವಸಂತ್ ಎಂಬಾತನ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾಗಿ ಆರೋಪಿಸಿದ್ದಾರೆ.
ಸ್ಥಳಕ್ಕೆ ವಿದ್ಯುತ್ ಇಲಾಖೆಯ ಎಇ ಜಯರತ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆಯಿಂದ ಪರಿಹಾರ ತಲುಪಿಸುವ ಭರವಸೆ ನೀಡಿದ್ದಾರೆ. ಕುಟುಂಬದ ಒಬ್ಬ ವ್ಯಕ್ತಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಜತೆಗೆ ನಿರ್ಲಕ್ಷ್ಯತೆಗೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಕುಟುಂಬದ ಒಬ್ಬರಿಗೆ ಶಾಶ್ವತ ಕೆಲಸ ಕೊಡಿಸುವಂತೆ ಒತ್ತಾಯಿಸಿದರು.
ಧಾರವಾಡದಲ್ಲಿ ವಿದ್ಯುತ್ ತಂತಿ ತಗುಲಿ ಜಾನುವಾರು ಸಾವು
ವಿದ್ಯುತ್ ತಂತಿ ತಗುಲಿ ಜಾನುವಾರು ಮೃತಪಟ್ಟಿದೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮನಗುಂಡಿ ರೈತ ಮಡಿವಾಳಪ್ಪ ಎಂಬುವವರಿಗೆ ಸೇರಿದ ಒಂದು ಎಮ್ಮೆ ಹಾಗೂ ಎಮ್ಮೆ ಕರು ಮೃತಪಟ್ಟಿದೆ. ಜಾನುವಾರುಗಳನ್ನು ಮೇಯಿಸಲು ಹೋದಾಗ ಬೋರವೆಲ್ ಮೋಟರ್ ಆರಂಭಿಸುವ ವಿದ್ಯುತ್ ತಗುಲಿ ಮೃತಪಟ್ಟಿವೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ