ಮೈಸೂರು: ಮೈಸೂರು ಜಿಲ್ಲೆಯಲ್ಲಿ ಆನೆ- ಮಾನವ ಸಂಘರ್ಷ (Human-Animal conflict) ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ಒಂಟಿ ಸಲಗದ ದಾಳಿಗೆ (Elephant Attack) ರೈತರೊಬ್ಬರು ಬಲಿಯಾಗಿದ್ದಾರೆ (Farmer dead). ಮುಂಜಾನೆಯೇ ನಡೆದ ದಾಳಿಯಂದ ಗ್ರಾಮಸ್ಥರು ಭಯಗೊಂಡಿದ್ದಾರೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮೊಳೆಯೂರು ಅರಣ್ಯ ವ್ಯಾಪ್ತಿಯ ನಡಹಾಡಿ ಗ್ರಾಮದಲ್ಲಿ ಚಿಕ್ಕೇಗೌಡ (65) ಎಂಬವರ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದು ಹಾಕಿದೆ. ಇದು ಎಚ್.ಡಿ. ಕೋಟೆ ತಾಲೂಕಿನ ಒಂದು ಗ್ರಾಮವಾಗಿದ್ದು, ಆನೆ ದಾಳಿ ನಡೆದು ಸಾವೇ ಸಂಭವಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಡಿವೈಎಸ್ಪಿ ಗೋಪಾಲಕೃಷ್ಣ, ಸರಗೂರು ಠಾಣೆಯ ವೃತ್ತ ನಿರೀಕ್ಷಕರಾದ ಲಕ್ಷ್ಮಿಕಾಂತ್, ಪಿಎಸ್ಐ ನಂದೀಶ್ ಕುಮಾರ್, ರವಿಶಂಕರ್ ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳನ್ನು ಕರೆಸುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.
ಮೈಸೂರು, ಕೊಡಗಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ
ರಾಜ್ಯದಲ್ಲಿ ಆನೆಗಳ ದಾಳಿ ವಿಪರೀತವಾಗಿದ್ದು ಜನರು ಭಯದಿಂದ ನಡುಗುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಮೈಸೂರು, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅಪಾಯ ಮೇರೆ ಮೀರಿದೆ.
ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು. RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು.
ಆಗಸ್ಟ್ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು
ಕಳೆದ ಆಗಸ್ಟ್ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.
ಅಂದು ಮುಂಜಾನೆ ಈರಪ್ಪ ತಮ್ಮ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ. ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!
ಆಗಸ್ಟ್ 20ರಂದು ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೃತ್ಯು
ಕಳೆದ ಆಗಸ್ಟ್ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.
ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.
ಇದನ್ನೂ ಓದಿ: Murder Case: ಹಸುಳೆಯನ್ನೇ ಕೊಲೆಮಾಡಿದ ತಂದೆ, ಎಂಥಾ ಕಲ್ಲು ಹೃದಯ!