Site icon Vistara News

Farmer Suicide: ಮರಕ್ಕೆ ಕಟ್ಟಿ ಥಳಿತ, ಅವಮಾನ ತಾಳದೆ ರೈತ ಆತ್ಮಹತ್ಯೆ

gururao bhange faremr suicide

ಮೈಸೂರು: ಜಮೀನು ವಿಚಾರಕ್ಕೆ ಉಂಟಾದ ಗಲಾಟೆಯಲ್ಲಿ ತನಗಾದ ಅವಮಾನವನ್ನು ಸಹಿಸಲಾಗದೆ ರೈತರೊಬ್ಬರು ಆತ್ಮಹತ್ಯೆ (Farmer Suicide) ಮಾಡಿಕೊಂಡ ಮನ ಕಲಕುವ ಘಟನೆ ನಡೆದಿದೆ.

ಹುಣಸೂರು ತಾಲೂಕಿನ ಕುಡಿನೀರಿನ ಮುದ್ದನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗುರುರಾವ್ ಭಾಂಗೆ ಆತ್ಮಹತ್ಯೆ ಮಾಡಿಕೊಂಡ ರೈತ. ಇವರನ್ನು ಮರಕ್ಕೆ ಕಟ್ಟಿ ಚಪ್ಪಲಿಯಿಂದ ಥಳಿಸಲಾಗಿತ್ತು. ಅವಮಾನ ತಾಳಲಾರದೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುಣಸೂರಿನ ತರೀಕಲ್ ಕಾವಲಿ ಗ್ರಾಮದಲ್ಲಿ ಗುರುರಾವ್ ಭಾಂಗೆ ಅವರಿಗೆ ಸೇರಿದ 2 ಎಕರೆ 5 ಗುಂಟೆ ಜಮೀನಿದೆ. ಪಕ್ಕದ ಜಮೀನಿನವರಾದ ಮಹೇಶ್, ಪತ್ನಿ ಸಾಕಮ್ಮ, ಪುತ್ರ ರಂಜನ್ ಜಮೀನು ವಿಚಾರದಲ್ಲಿ ಸದಾ ಕಿರಿಕ್ ಮಾಡುತ್ತಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ನಡುವೆಯೂ ಗುರುರಾವ್ ಭಾಂಗೆ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹೇಶ್‌ ಮತ್ತಿತರರು ಪ್ರಕರಣ ದಾಖಲಿಸಿದ್ದರು. ಇದಕ್ಕೆ ಗುರುರಾವ್ ಭಾಂಗೆ ಸಹ ಪ್ರತಿದೂರು ದಾಖಲಿಸಿದ್ದರು.

ಈ ಬೆಳವಣಿಗೆಯಿಂದ ಕ್ರುದ್ಧರಾದ ಮಹೇಶ್, ಸಾಕಮ್ಮ, ರಂಜನ್ ಆಗಸ್ಟ್ 4ರಂದು ಗುರುರಾವ್ ಭಾಂಗೆ ಅವರನ್ನು ಮರಕ್ಕೆ ಕಟ್ಟಿಹಾಕಿ ಚಪ್ಪಲಿಯಿಂದ ಥಳಿಸಿದ್ದರು. ಇದರಿಂದ ಮನನೊಂದ ಗುರುರಾವ್ ಭಾಂಗೆ ಮಗನಿಗೆ ಫೋನ್ ಮಾಡಿ, ನನ್ನ ಸಾವಿಗೆ ಮಹೇಶ್, ಸಾಕಮ್ಮ, ರಂಜನ್ ಕಾರಣ ಎಂದು ತಿಳಿಸಿ ಜಮೀನಿನಲ್ಲಿ ವಿಷ ಸೇವನೆ ಮಾಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತನನ್ನು ಚಪ್ಪಲಿಯಿಂದ ಥಳಿಸಿದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: Farmer Suicide: ಸಾಲಭಾದೆ ತಾಳದೆ ಇಬ್ಬರು ರೈತರ ಆತ್ಮಹತ್ಯೆ

Exit mobile version