Site icon Vistara News

Rohini Sindhuri : IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ; ಇಲಾಖಾ ತನಿಖೆಗೆ ಸರ್ಕಾರ ಆದೇಶ

Rohini sindhuri

ಬೆಂಗಳೂರು: ಕೆಲವು ತಿಂಗಳ ಕೆಳಗೆ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರ ಜತೆಗಿನ ಖಾಸಗಿ ಜಗಳದಿಂದ ಸುದ್ದಿಯಾಗಿ ಬಳಿಕ ತಣ್ಣಗಾಗಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತೆ ಸುದ್ದಿಗೆ ಬಂದಿದ್ದಾರೆ. ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ (Mysore District Commissioner) ಕೇಳಿ ಬಂದ ಹಣಕಾಸು ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ಪ್ರಕರಣಗಳ ಇಲಾಖಾವಾರು (Departmental Enquiry) ತನಿಖೆಗೆ ರಾಜ್ಯ ಸರ್ಕಾರ ಆದೇಶ (Government order) ನೀಡಿದೆ.

ಮೈಸೂರು ಡಿಸಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘನೆ ಆರೋಪದಲ್ಲಿ ಇಲಾಖಾವಾರು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ, ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಆಗಿದೆ. ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ತರಕ್ಕನ್‌ ಅವರು ಈ ಆದೇಶ ಹೊರಡಿಸಿದ್ದಾರೆ.

ವಿವಾದಕ್ಕೆ ಕಾರಣವಾದ ಈಜುಕೊಳ

ರೋಹಿಣಿ ಸಿಂಧೂರಿ ಅವರ ಮೇಲಿನ ಆರೋಪಗಳೇನು?

  1. ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲಾಧಿಕಾರಿ ನಿವಾಸವನ್ನು ರೋಹಿಣಿ ಅವರು ನವೀಕರಣ ಮಾಡಿದ್ದರು. ಅಲ್ಲಿ ಈಜುಕೊಳ ನಿರ್ಮಾಣ ಮಾಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.
  2. ಮೈಸೂರು ಜಿಲ್ಲಾಧಿಕಾರಿ ನಿವಾಸ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಅದರ ಸೊಬಗಿಗೆ ಮತ್ತು ನಿಯಮಗಳಿಗೆ ಧಕ್ಕೆ ಯಾಗುವಂತೆ ಕಟ್ಟಡದ ವಿನ್ಯಾಸಗಳನ್ನು ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
  3. ಸರ್ಕಾರದ ಸರಕುಗಳ ಭಾಗವಾಗಿ ರೋಹಿಣಿ ಅವರು ಬಟ್ಟೆ ಬ್ಯಾಗ್‌ಗಳನ್ನು ಖರೀದಿಸಿದ್ದರು. ಮಾರುಕಟ್ಟೆಯಲ್ಲಿ ಕೇವಲ 12-13 ರೂಗಳಿಗೆ ಸಿಗುವ ಬ್ಯಾಗ್‌ಗಳನ್ನು 52 ರೂ. ಕೊಟ್ಟು ಖರೀದಿಸಲಾಗಿದೆ ಎಂದು ಅಂದಿನ ಶಾಸಕ ಸಾರಾ ಮಹೇಶ್ ದೂರು ನೀಡಿದ್ದರು.
  4. ಚಾಮರಾಜನಗರ ಆಕ್ಸಿಜನ್​ ದುರಂತ ಪ್ರಕರಣದಲ್ಲಿ ಅಂದು ಮೈಸೂರಿನ ಜಿಲ್ಲಾಧಿಕಾರಿಗಳಾಗಿದ್ದ ರೋಹಿಣಿ ಅವರು ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪವೂ ಅವರ ಮೇಲಿದೆ.
  5. ಯಾವುದೇ ಜಿಲ್ಲಾಧಿಕಾರಿಗೆ ಆಡಳಿತಾತ್ಮಕವಾಗಿ 2 ಕೋಟಿ ರೂಪಾಯಿಗೆ ಅನುಮೋದನೆ ನೀಡಲು ಅವಕಾಶ ಇದೆ. ಆದರೆ ರೋಹಿಣಿ ಅವರು 7 ಕೋಟಿ ರೂಪಾಯಿ ಅಧಿಕ ಮೊತ್ತಕ್ಕೆ ಅನುಮೋದನೆ ನೀಡಿದ್ದಾರೆ ಎಂಬ ಆಪಾದನೆ ಇದೆ.

ಇದನ್ನೂ ಓದಿ : Rohini Sindhuri: ಸಾ.ರಾ. ಮಹೇಶ್‌-ರೋಹಿಣಿ ಸಿಂಧೂರಿ ಸಂಘರ್ಷ ಅಂತ್ಯ; ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲೇನಿದೆ?

ಇವುಗಳಲ್ಲಿ ಬಹುತೇಕ ವಿಷಯಗಳಿಗೆ ಸಂಬಂಧಿಸಿ ಒಂದು ಸುತ್ತಿನ ವಿಚಾರಣೆ, ತನಿಖೆ ನಡೆದಿದೆ. ಅಂದಿನ ವಸತಿ ಇಲಾಖೆ ಕಾರ್ಯದರ್ಶಿಯಾಗಿದ್ದ ಡಾ ಜಿ ರವಿಶಂಕರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಪ್ರಾಥಮಿಕವಾಗಿ ಒಂದು ವರದಿ ಸಲ್ಲಿಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಈ ತನಿಖೆಯ ಸಂದರ್ಭದಲ್ಲಿ ರೋಹಿಣಿ ಅವರು ಸಮರ್ಪಕ ಉತ್ತರ, ಸರಿಯಾಗಿ ಮಾಹಿತಿಯ ದಾಖಲೆಯಗಳು ಕೊಡದೆ ಇರುವ ಕಾರಣ ಮೇಲ್ನೋಟಕ್ಕೆ ಅಕ್ರಮ ನಡೆಸಿದ್ದಾರೆ ಎಂದು ಕಂಡು ಬಂದಿರುವುದಾಗಿ ಸಮಿತಿ ವರದಿಯನ್ನು ಕೊಟ್ಟಿತ್ತು. ಈ ವರದಿಯ ಆಧಾರದ ಮೇಲೆ ಸರ್ಕಾರ ಈಗ ಇಲಾಖಾವಾರು ತನಿಖೆ ನಡೆಸಲು ಸಮಿತಿ ರಚನೆ ಮಾಡಿ ಆದೇಶ ನೀಡಿದೆ.

Exit mobile version