Site icon Vistara News

Gruha lakshmi Scheme : ಗೃಹಲಕ್ಷ್ಮಿ ಯೋಜನೆ ಚಾಲನೆಗೆ 1 ಲಕ್ಷ ಜನ, 2000 ಬಸ್‌ ವ್ಯವಸ್ಥೆ ಎಂದ ಡಿಕೆಶಿ

Gruhajyothi Chalane

ಬೆಂಗಳೂರು: ಆಗಸ್ಟ್‌ 30ರಂದು ಮೈಸೂರಿನಲ್ಲಿ ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆ (Gruha lakshmi Scheme) ಚಾಲನೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗವಹಿಸಲಿದ್ದಾರೆ. ಐದು ಜಿಲ್ಲೆಗಳಿಂದ ಫಲಾನುಭವಿಗಳನ್ನು 2000 ಬಸ್‌ಗಳಲ್ಲಿ ಕರೆತರಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ (Mysore Maharaja College Ground) ಸಿದ್ಧವಾಗುತ್ತಿರುವ ಬೃಹತ್ ವೇದಿಕೆ ಪರಿಶೀಲನೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ವಿವರಿಸಿದರು.

ʻʻಗೃಹಲಕ್ಷ್ಮಿ ಯೋಜನೆ ಇಡೀ ದೇಶದಲ್ಲೇ ದೊಡ್ಡ ಕಾರ್ಯಕ್ರಮವಾಗಿದ್ದು, ಈಗಾಗಲೇ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆಗಸ್ಟ್‌ 30ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಒಂದು ಬಟನ್ ಅದಮಿದ ಕೂಡಲೇ ಎಲ್ಲಾ ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತದೆʼʼ ಎಂದು ವಿವರಿಸಿದರು.

Gruhajyothi scheme meeting

ಪಕ್ಷಾತೀತ ಕಾರ್ಯಕ್ರಮ, ಎಲ್ಲರಿಗೂ ಆಹ್ವಾನ

ʻʻಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರು ಹೊರತುಪಡಿಸಿ ಬೇರೆ ಯಾವುದೇ ವ್ಯವಸ್ಥೆ ಇರುವುದಿಲ್ಲ. 140 ಅಡಿ ಸ್ಕ್ರೀನ್ ಅಳವಡಿಸಲಾಗುತ್ತದೆ. ಇದು ಸರ್ಕಾರಿ ಕಾರ್ಯಕ್ರಮ ಆಗಿದ್ದು, ಪಕ್ಷಾತೀತ ಆಗಿರಲಿದೆ. ಎಲ್ಲಾ ಪಕ್ಷಗಳ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಕಾರ್ಯಕ್ರಮ ಸ್ಥಳದಲ್ಲಿ ಒಂದು ಲಕ್ಷ ಚೇರ್ ಅಳವಡಿಸಲಾಗುತ್ತದೆʼʼ ಎಂದು ಡಿ ಕೆ ಶಿವಕುಮಾರ್ ಮಾಹಿತಿ ನೀಡಿದರು.

ಸ್ಥಳ ಪರಿಶೀಲನೆ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಚಲುವರಾಯಸ್ವಾಮಿ, ಶಾಸಕರಾದ ತನ್ವೀರ್ ಸೇಠ್, ನರೇಂದ್ರಸ್ವಾಮಿ, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಡಿ ರವಿಶಂಕರ್, ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,‌ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Gruhajyothi scheme meeting

ಅಧಿಕಾರಿಗಳ ಸಭೆಯಲ್ಲಿ ನಲಪಾಡ್‌ ದರ್ಬಾರ್‌!

ಗೃಹ ಲಕ್ಷ್ಮಿ ಯೋಜನೆ ಸಂಬಂಧ ಮೈಸೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಯುವ ಕಾಂಗ್ರೆಸ್‌ ನಾಯಕ ಮೊಹಮದ್ ನಲಪಾಡ್ ಭಾಗಿ‌ಯಾಗಿರುವುದು ವಿವಾದಕ್ಕೆ ಕಾರಣವಅಗಿದೆ. ಡಿ.ಕೆ. ಶಿವಕುಮಾರ್‌ ಅವರು ಮಾಧ್ಯಮಗಳನ್ನು ಹೊರಗಿಟ್ಟು ಸಭೆ ನಡೆಸುತ್ತಿರುವ ಸಭೆಯಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಸಭೆಯಲ್ಲಿ ಭಾಗಿಯಾಗಿರುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: Operation Hasta : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಎಸ್‌.ಟಿ. ಸೋಮಶೇಖರ್‌ಗೆ ಕಾಂಗ್ರೆಸ್‌ ಆಫರ್!

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಂವಾದ

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ತನ್ವೀರ್ ಸೇಠ್,‌ ನರೇಂದ್ರ ಸ್ವಾಮಿ, ಅನಿಲ್ ಚಿಕ್ಕ ಮಾದು, ಡಿ.ರವಿ ಶಂಕರ್, ಹರೀಶ್ ಗೌಡ, ದರ್ಶನ್ ಧ್ರುವ ನಾರಾಯಣ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version