Site icon Vistara News

Gruha lakshmi scheme : ಗೃಹಲಕ್ಷ್ಮಿಯರ ಸಂಭ್ರಮದಿಂದಾಗಿ ಪಿಂಕ್‌ ಆದ ಮೈಸೂರು; ನಾಡಿನೆಲ್ಲೆಡೆ ಕಾರ್ಯಕ್ರಮ

Gruhalakshmi scheme

ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಚಾಲನೆ ನೀಡುವ ಕಾರ್ಯಕ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಬೆಳಗ್ಗಿನಿಂದಲೇ ಕಾರ್ಯಕ್ರಮ ನಡೆಯುವ ಮಹಾರಾಜ ಮೈದಾನದ ಸುತ್ತಮುತ್ತ ಹಬ್ಬದ ವಾತಾವರಣ ಕಂಡುಬಂದಿದ್ದು ಇಡೀ ಮೈಸೂರು ಗೃಹಲಕ್ಷ್ಮಿಯರಿಂದಾಗಿ ಪಿಂಕ್‌ ಬಣ್ಣಕ್ಕೆ ತಿರುಗಿದೆ.

ಅದ್ಧೂರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿ ವಿವಿಧ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಬರೋಬ್ಬರಿ 1 ಲಕ್ಷ ಜನ ಭಾಗವಹಿಸಲಿದ್ದು, ಅವರೆಲ್ಲರೂ ಈಗಾಗಲೇ ಆಗಮಿಸಿದ್ದು ಆಸೀನರಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನರು ಇನ್ನೂ ಆಗಮಿಸುತ್ತಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 80 ಅಡಿ ಉದ್ದ, 60 ಅಡಿ ಅಗಲ, 8 ಅಡಿ ಎತ್ತರದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ವೇದಿಕೆ ಹಿಂಭಾಗ 140 ಅಡಿ ಉದ್ದದ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ. ಹೀಗಾಗಿ ಎಲ್ಲರೂ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ವೇದಿಕೆ ಮುಂಭಾಗದಲ್ಲಿ ಮೈಸೂರು ಅರಮನೆ ಮಾದರಿಯ ಸೆಟ್ ನಿರ್ಮಾಣ ಮಾಡಲಾಗಿದೆ. ಮೈದಾನದಿಂದ ರಾಮಸ್ವಾಮಿ ವೃತ್ತ, ಸರಸ್ವತಿಪುರಂ ತನಕ ರಸ್ತೆಯ ಅಕ್ಕಪಕ್ಕ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಡಿಕೆಶಿವಕುಮಾರ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿ ಹಲವರ ಭಾವಚಿತ್ರ ಇರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಏನೇನು ಪ್ರಧಾನ ಕಾರ್ಯಕ್ರಮ?

ಗೃಹ ಲಕ್ಷ್ಮಿ ಯೋಜನೆಯ ಲೋಗೋ ಅನಾವರಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಬಳಿಕ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮಾತನಾಡುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರಾಸ್ತಾವಿಕ ಮಾತು ಇರಲಿದೆ.

ರಾಹುಲ್‌ ಗಾಂಧಿ ಅವರಿಂದ ಡಿಜಿಟಲ್‌ ಸಂವಾದ

ಮೈಸೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆ, ಬಹುತೇಕ ಎಲ್ಲ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲೂ ಕಾರ್ಯಕ್ರಮಗಳು ಆಯೋಜನೆ ಆಗಲಿದ್ದು, ಅಲ್ಲಿಂದ ಜೂಮ್‌ ಮೂಲಕ ಕನೆಕ್ಟ್‌ ಮಾಡಲಾಗುತ್ತಿದೆ. ಇಲ್ಲಿನ ಉದ್ಘಾಟನಾ ಕಾರ್ಯಕ್ರಮ ಅಲ್ಲಿ ನೇರ ಪ್ರಸಾರವಾಗುವ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ ವೇಳೆ ರಾಹುಲ್‌ ಗಾಂಧಿ

ಫಲಾನುಭವಿಗಳೊಂದಿಗೆ ರಾಹುಲ್ ಗಾಂಧಿ ಅವರು ಡಿಜಿಟಲ್ ಸಂವಾದ ನಡೆಸಲಿದ್ದು, ಇದು ಆನ್‌ಲೈನ್ ಮೂಲಕ ರಾಜ್ಯಾದ್ಯಂತ ನೇರಪ್ರಸಾರವಾಗಲಿದೆ. ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ನೇರ ಪ್ರಸಾರ ವೀಕ್ಷಣೆಗ ವ್ಯವಸ್ಥೆ ಮಾಡಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ.

ಇದನ್ನೂ ಓದಿ : Gruha lakshmi Scheme : ಗೃಹಲಕ್ಷ್ಮಿ ಯೋಜನೆ ಅದ್ಧೂರಿ ಉದ್ಘಾಟನೆಯ ಕ್ಷಣಗಳನ್ನು LIVE ಆಗಿ ಇಲ್ಲಿ ನೋಡಿ

ಮೈಸೂರಿಗೆ 1200 ಬಸ್‌ನಲ್ಲಿ ಬಂದಿದ್ದಾರೆ ಜನರು

ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಿಂದ ಪ್ರತಿ ಗ್ರಾಮಗಳಿಂದ 150 ಮಂದಿ ಫಲಾನುಭವಿಗಳನ್ನು ಕರೆದುಕೊಂಡು ಬರುವ ಹೊಣೆಗಾರಿಕೆಯನ್ನು ಆಯಾ ಪಿಡಿಒಗಳಿಗೆ ವಹಿಸಲಾಗಿದ್ದು, ಅವರು 1200 ಬಸ್‌ಗಳ ಮೂಲಕ ಈಗಾಗಲೇ ಕರೆದುಕೊಂಡು ಬಂದಿದ್ದಾರೆ. ಅವರನ್ನು ಕರೆದುಕೊಂಡು ಬರುವ ಹಂತದಲ್ಲೇ ಅವರ ಊಟೋಪಚಾರದ ವ್ಯವಸ್ಥೆಯನ್ನು ಮಾಡುವಂತೆಯೂ ಸೂಚಿಸಲಾಗಿದೆ.

Exit mobile version