ಮೈಸೂರು: ಹೆಣ್ಣೆಂದರೆ ಮರವೊಂದರ ಬೇರು (Women is like root of a tree), ಹೆಣ್ಣೆಂದರೆ ಕಟ್ಟಡವೊಂದರ ಪಂಚಾಂಗ. ಬೇರು ಗಟ್ಟಿಯಾಗಿದ್ದರೆ ಮರ ಎಂಥ ಬಿರುಗಾಳಿಯನ್ನಾದರೂ ಎದುರಿಸುವ ಶಕ್ತಿಯನ್ನು ಪಡೆಯುತ್ತದೆ. ಪಂಚಾಂಗ ಗಟ್ಟಿಯಿದ್ದರೆ ಕಟ್ಟಡ ಬಲಿಷ್ಠವಾಗಿ ನಿಲ್ಲುತ್ತದೆ. ಹೀಗಾಗಿ ನಾವು ನಮ್ಮ ಸಮಾಜದ ಬೇರುಗಳಾಗಿರುವ ಮಹಿಳೆಯರ ಸಬಲೀಕರಣದ ದೊಡ್ಡ ಚಿಂತನೆಯನ್ನು ಮಾಡಿದ್ದೇವೆ. ಅದರ ಫಲವೇ ಗೃಹಲಕ್ಷ್ಮಿ ಸೇರಿದಂತೆ ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು (Gurantee Schemes) ಎಂದು ದೃಢ ಧ್ವನಿಯಲ್ಲಿ ಹೇಳಿದರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (rahul Gandhi).
ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಬುಧವಾರ ನಡೆದ, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. 1.11 ಕೋಟಿ ಮಹಿಳೆಯರ ಖಾತೆಗೆ ಹಣವನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅವರು ಮಾತನಾಡಿದರು.
ಇಲ್ಲಿಂದ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಗ್ಯಾರಂಟಿ
ʻʻಇವತ್ತು ಹೇಗೆ 2000 ರೂ.ಯನ್ನು ನೇರವಾಗಿ ಜಮೆ ಮಾಡಿದ್ದೇವೋ, ಅದೇ ರೀತಿ ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದು ನಾವು ಕೊಡುತ್ತಿರುವ ಗ್ಯಾರಂಟಿʼʼ ಎಂದು ರಾಹುಲ್ ಗಾಂಧಿ ಹೇಳಿದರು.
ʻʻʻಇದೊಂದೇ ಅಲ್ಲ, ನಾವು ಏನೆಲ್ಲ ಭರವಸೆ ಕೊಟ್ಟಿದ್ದೇವೋ ಅದೆಲ್ಲವನ್ನು ಏರಿಸಿದ್ದೇವೆ. ಕರ್ನಾಟಕ ರಾಜ್ಯದ ತಾಯಂದಿರು ರಾಜ್ಯದಲ್ಲಿ ಎಲ್ಲೇ ಪ್ರಯಾಣ ಮಾಡಿದರೂ ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದೆವು. ಅದನ್ನು ಶಕ್ತಿ ಯೋಜನೆಯ ಮೂಲಕ ಸಾಕಾರ ಮಾಡಿದ್ದೇವೆ. ಇವತ್ತು ಯಾವುದೇ ಹೆಣ್ಮಕ್ಕಳು ಬಸ್‌ನಲ್ಲಿ ಟಿಕೆಟ್ ಪಡೆಯಬೇಕಾಗಿಲ್ಲ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ ಎಂದು ಹೇಳಿದ್ದೇವೆ, ಕೊಟ್ಟಿದ್ದೇವೆʼʼ ಎಂದು ಹೆಮ್ಮೆಯಿಂದ ಹೇಳಿದರು ರಾಹುಲ್ ಗಾಂಧಿ.
ಐದರಲ್ಲಿ ನಾಲ್ಕು ಯೋಜನೆಗಳು ಮಹಿಳೆಯರಿಗೆ
ʻʻನೀವು ನಮ್ಮ ಐದು ಯೋಜನೆಗಳನ್ನು ನೋಡಿ, ಅದರಲ್ಲಿ ಒಂದು ಬಿಟ್ಟರೆ ಉಳಿದ ಎಲ್ಲವೂ ಮಹಿಳೆಯರಿಗಾಗಿಯೇ ಮಾಡಿದ ಯೋಜನೆ. ಯುವನಿಧಿ ಬಿಟ್ಟು ಉಳಿದೆಲ್ಲವೂ ಮಹಿಳೆಯರಿಗಾಗಿಯೇ ರೂಪಿಸಲಾದ ಯೋಜನೆಗಳುʼʼ ಎಂದು ಹೇಳಿದ ರಾಹುಲ್, ಈ ಯೋಜನೆಗಳ ಹಿಂದೆ ಒಂದು ದೊಡ್ಡ ಉದಾತ್ತವಾದ ಯೋಜನೆ ಇದೆ ಎಂದು ಹೇಳಿದರು.
ಪಂಚಾಂಗ, ಬೇರು ಕಟ್ಟಿಯಾಗಿರಬೇಕು ಎಂಬ ಆಶಯ ನಮ್ಮದು
ʻʻಮಹಿಳೆಯರಿಗೇ ಈ ಯೋಜನೆಗಳನ್ನು ನೀಡಿದ್ದರ ಹಿಂದೆ ಒಂದು ದೊಡ್ಡ ಯೋಚನೆಯಿದೆ. ಎಷ್ಟೇ ದೊಡ್ಡ ಮರವಿರಲಿ, ಬೇರು ಗಟ್ಟಿ ಇಲ್ಲದಿದ್ದರೆ ಅದು ಗಟ್ಟಿಯಾಗಿ ನಿಲ್ಲದು. ಬುಡ ಸದೃಢವಾಗಿದ್ದರೆ ಯಾವುದೇ ಬಿರುಗಾಳಿ ಬಂದರೂ ಅದನ್ನು ಅಲುಗಾಡಿಸಲು ಸಾಧ್ಯವಿಲ್ಲ. ಯಾವುದೇ ಕಟ್ಟಡವೂ ಪಂಚಾಂಗವಿಲ್ಲದೆ ನಿಲ್ಲಲಾರದು. ನಮ್ಮ ಪಂಚಾಂಗ ಎಷ್ಟು ಗಟ್ಟಿ ಇರುತ್ತದೆಯೋ ಕಟ್ಟಡವೂ ಅಷ್ಟೇ ಸದೃಢವಾಗುತ್ತದೆʼʼ ಎಂದು ರಾಹುಲ್ ವಿವರಿಸಿದರು.
ʻʻಭಾರತ್ ಜೋಡೋ ಯಾತ್ರೆಯ ವೇಳೆ ನಾನು ಸಾವಿರಾರು ಮಹಿಳೆಯರ ಜತೆ ಮಾತನಾಡಿದ್ದೇನೆ. ಕರ್ನಾಟಕ ಒಂದರಲ್ಲೇ 600 ಕಿ.ಮೀ. ನಡೆದಿದ್ದೇನೆ. ಆಗ ನಾನು ಕಂಡುಕೊಂಡ ಒಂದು ಅಂಶವೆಂದರೆ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನುವುದು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯ ಏಟು ಬೀಳುವುದು ಮಹಿಳೆಯರ ಮೇಲೆ. ಈ ಬೆಲೆ ಏರಿಕೆಯ ಹೊರೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಈ ಹೊತ್ತಿನಲ್ಲಿ ಕರ್ನಾಟಕದ ಅಡಿಪಾಯವೇ ಮಹಿಳೆಯರು ಎನ್ನುವುದನ್ನು ನಾನು ಅರ್ಥ ಮಾಡಿಕೊಂಡೆ. ಹೇಗೆ ಬೇರಿಲ್ಲದೆ ಮರ ನಿಲ್ಲಲು ಸಾಧ್ಯವಿಲ್ಲವೋ ಹಾಗೆ ಕರ್ನಾಟಕವು ಎದ್ದು ನಿಲ್ಲಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಮರದ ಬುಡ ಹೇಗೆ ಭೂಮಿ ಕೆಳಗಿದ್ದು ಕಾಣಿಸುವುದಿಲ್ಲವೋ ಹಾಗೆಯೇ ನಮ್ಮ ಹೆಣ್ಮಕ್ಕಳು ಮನೆಯಲ್ಲಿದ್ದು, ಮರೆಯಲ್ಲಿದ್ದರೂ ನಮ್ಮ ರಾಜ್ಯದ ಶಕ್ತಿಯಾಗಿದ್ದೀರಿ. ನಿಮ್ಮ ಸಬಲೀಕರಣವೇ ನಮ್ಮ ಉದ್ದೇಶʼʼ ಎಂದು ಹೇಳಿದರು ರಾಹುಲ್ ಗಾಂಧಿ.
ಸರ್ಕಾರಕ್ಕೆ ನೂರು ದಿನ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ
ʻʻಇಂದು ಈ ರಾಜ್ಯದ ಎಲ್ಲ ಕಡೆ ಈ ರಾಜ್ಯದ ಬೇರು ಮತ್ತು ಬುಡವಾದ ಮಹಿಳೆಯರು ನಮ್ಮ ಜತೆ ಬಂದು ನಿಂತಿದ್ದಾರೆ. ಕರ್ನಾಟಕದ 12000 ಕಡೆಗಳಲ್ಲಿ ಈ ಯೋಜನೆಯ ಉದ್ಘಾಟನೆ ನಡೆಯುತ್ತಿದೆ. ಅಲ್ಲಿನ ಮಹಿಳೆಯರು, ತಾಯಂದಿರು ನಮ್ಮ ಜತೆಗೆ ನಿಂತಿದ್ದಾರೆ. ನನಗೆ ಸಂತೋಷವಾಗಿದೆ. ಸರ್ಕಾರ ತನ್ನ ನೂರು ದಿನಗಳ ಅವಧಿಯನ್ನು ಮುಕ್ತಾಯಗೊಳಿಸಿದೆ. ಅದೇ ಹೊತ್ತಿಗೆ ನಾವು ಕೊಟ್ಟ ಭಾಷೆಯನ್ನು ಉಳಿಸಿಕೊಂಡಿದ್ದೇವೆʼʼ ಎಂದು ಖುಷಿಪಟ್ಟರು.
ಇವತ್ತು ಬರುತ್ತಿರುವ ವೇಳೆ ಒಬ್ಬ ಸಹೋದರಿ ನನ್ನ ಕೈಗೆ ರಕ್ಷಾಬಂಧನ ಕಟ್ಟಿದ್ದಾರೆ. ಇದೇ ದಿನದಂದು ನಾವು ನಮ್ಮ ಮಹಿಳೆಯರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು ಖುಷಿಯಾಗಿದೆ ಎಂದು ಹೇಳಿದರು ರಾಹುಲ್ ಗಾಂಧಿ.
ಇವು ಬರೀ ಗ್ಯಾರಂಟಿ ಸ್ಕೀಂಗಳಲ್ಲ, ಅಭಿವೃದ್ಧಿಯ ಮಾದರಿಗಳು
ʻʻದೇಶದಲ್ಲಿ ಇವತ್ತು ಒಂದು ಪ್ರಚಾರವಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗಾಗಿ ಕೆಲಸ ಮಾಡುತ್ತಿದೆ. ಅವರು ಕೆಲಸ ಮಾಡುತ್ತಿರುವುದು ಇಬ್ಬರು ಮೂವರು ಗೆಳೆಯರಿಗೆ. ಎಲ್ಲ ಕಾಮಗಾರಿಗಳನ್ನು ಕೊಡುತ್ತಿರುವುದು ಅವರಿಗೆ ಮಾತ್ರ. ಕರ್ನಾಟಕದಲ್ಲಿ ನಾವು ಕೊಟ್ಟಿರುವ ಐದು ಯೋಜನೆಗಳು ಬರೀ ಸ್ಕೀಂಗಳಲ್ಲ. ಆಡಳಿತದ ಮಾದರಿಗಳುʼʼ ಎಂದು ಹೇಳಿದರು ರಾಹುಲ್ ಗಾಂಧಿ.
ʻʻಸರ್ಕಾರಗಳು ಬಡವರಿಗೆ, ತುಳಿತಕ್ಕೆ ಒಳಗಾದವರಿಗಾಗಿ ಎಂದು ನಮಗೆ ಗೊತ್ತಿತ್ತು. ಯಾರು ಕೂಡಾ ಹಿಂದೆ ಬೀಳಬಾರದು. ಯಾವುದೇ ಜಾತಿ ಇರಬಹುದು, ಧರ್ಮದವರಾಗಿರಬಹುದು, ಯಾವುದೇ ಭಾಷೆಯವರಾಗಿರಬಹುದು ಅವರೆಲ್ಲರನ್ನೂ ಜತೆಗೂಡಿಸಿ ಹೋಗಬೇಕು ಎಂದು ನಾವು ನಿರ್ಧರಿಸಿದೆವು. ಇವತ್ತು ನಾವು ಕೊಟ್ಟಿರುವ ಯೋಜನೆಗಳು ಇಡೀ ದೇಶಕ್ಕೇ ಮಾದರಿ. ಈ ಮೂಲಕ ಇಡೀ ದೇಶಕ್ಕೆ ಮಾರ್ಗದರ್ಶಕವಾಗಿ ನಿಂತಿದೆʼʼ ಎಂದು ನುಡಿದರು.
ಮೋದಿಯವರೇ ನೋಡಿ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ
ʻʻದಿಲ್ಲಿಯ ಕೆಲವು ನಾಯಕರು ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಪ್ರತಿ ಕುಟುಂಬದ ಯಜಮಾನಿಗೆ 2000 ರೂ. ಕೊಡಬೇಕು, ಎಲ್ಲ ಮನೆಗಳಿಗೆ ಉಚಿತ ವಿದ್ಯುತ್ ಕೊಡಬೇಕು, ನಮ್ಮ ಹೆಣ್ಮಕ್ಕಳು ಯಾವುದೇ ಭಯವಿಲ್ಲದೆ ಇಡೀ ರಾಜ್ಯದ ಎಲ್ಲಿ ಬೇಕಾದರೂ ಉಚಿತವಾಗಿ ಓಡಾಡಬಹುದು. ಆದರೆ, ನಾವು ಇದನ್ನು ಘೋಷಣೆ ಮಾಡಿದಾಗ ನಮ್ಮ ವಿರೋಧಿಗಳು ಇದು ಸಾಧ್ಯವಿಲ್ಲ ಎಂದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೂ ಇದೆಲ್ಲ ಈಡೇರಿಸಲಾಗದ ಭರವಸೆ ಎಂದರು. ಆದರೆ, ಇದು ಎಲ್ಲರ ಮುಂದೆ ಸತ್ಯವಿದೆʼʼ ಎಂದು ಹೇಳಿದರು ರಾಹುಲ್ ಗಾಂಧಿ.
ಇದು ನಿಮ್ಮ ದುಡ್ಡು, ಹೇಗೆ ಬೇಕಾದರೂ ಬಳಸಿಕೊಳ್ಳಿ
ʻʻಇವತ್ತು ನಾವು ಚಾಲನೆ ನೀಡಿರುವ ನೇರ ನಗದು ಯೋಜನೆ ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆ. ನಾವು ಕೊಟ್ಟಿರುವ ಹಣವನ್ನು ಹೇಗೆ ಬೇಕಾದರೂ ಬಳಸಿ, ನಿಮ್ಮ ದಿನ ಬಳಕೆಗಾದರೂ ಬಳಸಿ, ಮಕ್ಕಳ ಶಿಕ್ಷಣಕ್ಕಾಗಿ ಬೇಕಾದರೂ ಬಳಸಿ. ಇದು ನಿಮಗೆ ಸೇರಿದ್ದು, ಇದನ್ನು ಏನು ಬೇಕಾದರೂ ಮಾಡಿಕೊಳ್ಳಿ, ನಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎನ್ನುವ ಧನ್ಯತೆಯೊಂದೇ ಸಾಕುʼʼ ಎಂದು ರಾಹುಲ್ ಭಾವುಕರಾದರು.
ನಾವು ಸುಳ್ಳು ಆಶ್ವಾಸನೆ ಕೊಡುವುದಿಲ್ಲ, ಹೇಳಿದ್ದು ಮಾಡುತ್ತೇವೆ
ʻʻಕರ್ನಾಟಕದ ಅಕ್ಕತಂಗಿಯರು, ಹೆಣ್ಮಕ್ಕಳಿಗೆ ಒಂದು ಮಾತು ಹೇಳುತ್ತೇನೆ, ಈ ರಾಜ್ಯದ ಅಭಿವೃದ್ಧಿಗೆ ನೀವೇ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ಜತೆಗೆ ಮುಕ್ತವಾಗಿ ಮಾತನಾಡಬಹುದು. ನಾವು ಯಾವತ್ತೂ ಸುಳ್ಳು ಆಶ್ವಾಸನೆ ಕೊಡುವುದಿಲ್ಲ. ಆಗುವುದಿಲ್ಲ ಎಂದಾದರೆ ಅದನ್ನೂ ಹೇಳುತ್ತೇವೆ. ಮಾಡಬಹುದು ಎಂದಾದರೆ ಎಷ್ಟೇ ಕಷ್ಟವಾದರೂ ಮಾಡಿಯೇ ಮಾಡುತ್ತೇನೆʼʼ ಎಂದರು.
ಕಾಂಗ್ರೆಸ್ ನಾಯಕರ ಯೋಜನೆಯಲ್ಲ ಇದು ಎಂದ ರಾಹುಲ್
ಈಗ ಜಾರಿಯಾಗಿರುವ ಯಾವ ಯೋಜನೆಯೂ ಕಾಂಗ್ರೆಸ್‌ನ ಚಿಂತನೆಯಲ್ಲ. ಕಾಂಗ್ರೆಸ್‌ನ ನಾಯಕರ ಚಿಂತನೆಯಲ್ಲ. ಕಾಂಗ್ರೆಸ್‌ನ ಥಿಂಕ್ ಟ್ಯಾಂಕ್ ಮಾಡಿದ್ದಲ್ಲ, ಕಾರ್ಪೊರೇಟ್ ಕಲ್ಪನೆಯಲ್ಲ. ಇದು ಭಾರತ್ ಜೋಡೋ ವೇಳೆ ನೀವೇ ಕೇಳಿದ್ದು. ಇದು ನೀವು ಮಾಡಿದ ಯೋಜನೆʼʼ ಎಂದು ರಾಹುಲ್ ನುಡಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಭಾಷಣವನ್ನು ಸೊಗಸಾಗಿ ಭಾಷಾಂತರಿಸಿದರು. ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.
ಇದನ್ನೂ ಓದಿ: Gruha lakshmi : ಗೃಹ ಲಕ್ಷ್ಮಿ ಯೋಜನೆ ಸಾಕಾರ; 1.28 ಕೋಟಿ ಗೃಹಿಣಿಯರ ಖಾತೆಗೆ ಇನ್ನು ಪ್ರತಿ ತಿಂಗಳು 2,000 ರೂ. ಪಕ್ಕಾ