ಮೈಸೂರು: ಲೋಕಸಭೆ ಚುನಾವಣೆಯ (Parliament Elections 2024) ಅಭ್ಯರ್ಥಿಗಳ ಆಯ್ಕೆಯ ಚರ್ಚೆ ನಡೆಯುತ್ತಿರುವ ನಡುವೆಯೇ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ. ಮಹದೇವಪ್ಪ (Dr. HC Mahadevappa) ಅವರು ತಮ್ಮ ಪುತ್ರ ಸುನಿಲ್ ಬೋಸ್ (Sunil bose) ಪರ ವಾದ ಮಂಡನೆಗೆ ಶುರು ಮಾಡಿದ್ದಾರೆ. ಚಾಮರಾಜನಗರ (Chamaraja Nagara), ಮೈಸೂರು- ಕೊಡಗು ಕ್ಷೇತ್ರಗಳಲ್ಲಿ (Mysore-Kodagu Constituency) ಒಂದನ್ನು ಪಡೆದುಕೊಳ್ಳುವ ಯೋಚನೆ ಅವರ ಮಾತಿನಲ್ಲಿ ವ್ಯಕ್ತವಾಗಿದೆ.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಸಚಿವ ಎಚ್.ಸಿ. ಮಹದೇವಪ್ಪ ಅವರು, ಚಾಮರಾಜನಗರ, ಮೈಸೂರು- ಕೊಡಗು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಆಯ್ಕೆ ಆಗಿಲ್ಲ. ನಾನು ನನ್ನ ಮಗ ಸುನೀಲ್ ಬೋಸ್ ಪರ ಮಾತನಾಡುತ್ತಿಲ್ಲ. ಆದರೆ, ಅವರೂ ಸಮರ್ಥರಿದ್ದಾರೆ ಎಂದರು.
ʻʻಪಕ್ಷದ ಸದಸ್ಯತ್ವ ಪಡೆಯದವರೇ ಶಾಸಕರಾಗಿದ್ದಾರೆ. ರಾಜಕೀಯದಲ್ಲಿ ಅಂಥ ಸನ್ನಿವೇಶಗಳು ಬಂದು ಬಿಡುತ್ತವೆ. ನಂಜನಗೂಡು ಉಪಚುನಾವಣೆಯಲ್ಲೇ ಸುನೀಲ್ ಬೋಸ್ ಅಭ್ಯರ್ಥಿ ಆಗಬೇಕಿತ್ತು. ಆಗಿನಿಂದಲೇ ಸಂಘಟನೆ ಮಾಡಿದ್ದಾನೆ. ಮೂರು ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ. ಅದಾಗ್ಯೂ ಮುನಿಸಿಕೊಳ್ಳದೆ ಪಕ್ಷದ ಪರ ಕೆಲಸ ಮಾಡಿದ್ದಾನೆ. ಅಭ್ಯರ್ಥಿ ಆಯ್ಕೆಗಾಗಿ ವೀಕ್ಷಕರು ಬಂದು ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆʼʼ ಎಂದು ಮಹದೇವಪ್ಪ ಹೇಳಿದರು.
ಸೋಮಣ್ಣ ಭೇಟಿಯಾದಾಗ ಮಾತನಾಡದೆ ಇರುತ್ತೇವಾ?
ಬಿಜೆಪಿ ನಾಯಕ ವಿ. ಸೋಮಣ್ಣ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಯ ಬಗ್ಗೆ ಕೇಳಿದಾಗ, ʻʻವಿ.ಸೋಮಣ್ಣ ಮತ್ತು ನಾನು ಹುಣಸೂರಿನಲ್ಲಿ ಭೇಟಿ ಆಗಿದ್ದೆವು. ಇಬ್ಬರೂ ಭೇಟಿಯಾದಾಗ ಮಾತನಾಡದೇ ಇರೋಕೆ ಆಗುತ್ತದೆಯೇ? ಹಾಗಾಗಿ ಮಾತನಾಡಿದ್ದೇವೆ. ನಾನು ಲೋಕಸಭೆ ಟಿಕೆಟ್ ಕೊಡುವುದಾದರೆ ಸೋಮಣ್ಣಗೆ ಕೊಡುತ್ತೇನೆ. ಅದು ನನ್ನೊಬ್ಬನ ತೀರ್ಮಾನ ಅಲ್ಲ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತʼʼʼ ಎಂದು ಹೇಳಿದರು.
ಡಿಕೆಶಿ ಮೇಲಿನ ಕೇಸ್ ವಾಪಸ್ ಸರಿಯಾಗಿದೆ ಎಂದ ಮಹದೇವಪ್ಪ
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆದೇಶ ವಾಪಸ್ ಮಾಡಿದ ಸಚಿವ ಸಂಪುಟದ ತೀರ್ಮಾನ ಕಾನೂನಾತ್ಮಕವಾಗಿ ಸರಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮರ್ಥನೆ ಮಾಡಿದರು.
ʻʻಹಿಂದಿನ ಸರ್ಕಾರ ಅಡ್ವೋಕೆಟ್ ಜನರಲ್ ಅಭಿಪ್ರಾಯ ಪಡೆದಿರಲಿಲ್ಲ. ಶಾಸಕರ ವಿರುದ್ಧ ತನಿಖೆ ನಡೆಸಲು ಸ್ಪೀಕರ್ ಅನುಮತಿಯನ್ನೂ ಕೇಳಿರಲಿಲ್ಲ. ಕೇವಲ ರಾಜಕೀಯ ದ್ವೇಷಕ್ಕೆ ಸಿಬಿಐಗೆ ವಹಿಸಿದ್ದರು. ಆ ಆದೇಶವನ್ನು ನಮ್ಮ ಸಚಿವ ಸಂಪುಟ ವಾಪಸ್ ಪಡೆದಿದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ. ಕಾನೂನು ರೀತಿಯಲ್ಲೇ ತೀರ್ಮಾನ ಮಾಡಿದ್ದೇವೆ. ತನಿಖೆಯನ್ನು ಯಾರು ಮುಂದುವರಿಸಬೇಕು ಎಂಬುದನ್ನು ಕಾನೂನು ತೀರ್ಮಾನಿಸಲಿದೆʼʼ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಾತಿ ಗಣತಿ ವರದಿಯೇ ಸಲ್ಲಿಕೆಯಾಗಿಲ್ಲ, ಊಹೆ ಮಾಡೋದ್ಯಾಕೆ?
ʻʻಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೇ ಸಲ್ಲಿಕೆ ಆಗಿಲ್ಲ. ಈಗಲೇ ಊಹೆ ಮಾಡಿ ವಿರೋಧ ಮಾಡಿದರೆ ಹೇಗೆ?ʼʼ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನೆ ಮಾಡಿದರು.
ʻʻಪ್ರತಿಯೊಬ್ಬರಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಗಬೇಕು. ಅದಕ್ಕಾಗಿಯೇ ನಮ್ಮ ಸರ್ಕಾರ ಇದ್ದಾಗ ಸಮೀಕ್ಷೆ ನಡೆಸಲಾಗಿತ್ತು. ನಮ್ಮದೇ ಸರ್ಕಾರವಿದ್ದರೆ ವರದಿ ಸ್ವೀಕಾರ ಆಗುತ್ತಿತ್ತು. ಈಗ ವರದಿ ಸ್ವೀಕಾರ ಆಗಬೇಕಿದೆ. ಅಂತಿಮ ವರದಿ ಸಲ್ಲಿಕೆಗೆ ಸಮಯಾವಕಾಶ ಕೇಳಿದ್ದಾರೆʼʼ ಎಂದು ಹೇಳಿದ ಅವರು, ವರದಿಯಲ್ಲಿ ಏನಿದೆ ಅಂತ ಯಾರೂ ನೋಡಿಲ್ಲ. ಸರ್ಕಾರದ ಕೈಸೇರುವ ಮುನ್ನವೇ ವಿರೋಧ ಮಾಡುತ್ತಿದ್ದಾರೆ. ಅದೆಲ್ಲ ಹೊರಗಿನ ನಿರ್ಧಾರ. ಸಂಪುಟ ತೆಗೆದುಕೊಳ್ಳುವ ತೀರ್ಮಾನ ಮಾತ್ರ ಸರ್ಕಾರದ ನಿರ್ಧಾರʼʼ ಎಂದು ಅವರು ಹೇಳಿದರು.