ಮೈಸೂರು: ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Blast in Bengaluru) ಸಂಭವಿಸಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಟ್ಟೆಚ್ಚರ (High Alert in Mysore) ವಹಿಸಲಾಗಿದೆ. ಮೈಸೂರಿನ ಕೆಫೆಗಳಲ್ಲಿ ತೀವ್ರ ತಪಾಸಣೆ ನಡೆಯಲಿದೆ.
ಬಾಂಬ್ ಪತ್ತೆ ದಳದ ಪ್ರಕಾಶ್, ಅಮರ್, ಜಗದೀಶ್ ತಂಡದ ನೇತೃತ್ವದಲ್ಲಿ ಮೈಸೂರಿನ ಎಲ್ಲ ಜಾಗಗಳಲ್ಲಿ ತಪಾಸಣೆ ನಡೆಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ. ರೂಢಿ ಎಂಬ ಶ್ವಾನದ ಮೂಲಕ ಕೆಫೆಗಳಲ್ಲಿ ತಪಾಸಣೆ ನಡೆಸಲಾಗಿದೆ.
ರೈಲು ನಿಲ್ದಾಣ, ಮೃಗಾಲಯ (Mysore zoo), ಅರಮನೆ ಆವರಣ (Mysore Palace) ಮತ್ತು ಪ್ರಮುಖ ಸ್ಥಳಗಳಲ್ಲಿ ಇಂಚಿಂಚೂ ಬಿಡದೆ ಶೋಧ ನಡೆಸಿದ್ದಾರೆ ಮೈಸೂರು ಪೊಲೀಸರು.
ಅರಮನೆ, ಚಾಮುಂಡಿಬೆಟ್ಟ, ಬೃಂದಾವನ ಗಾರ್ಡನ್, ನ್ಯಾಯಾಲಯದ ಆವರಣ, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗಿದೆ. ಅನುಮಾನ ಬಂದ ವ್ಯಕ್ತಿ, ವಸ್ತುಗಳ ತೀವ್ರ ತಪಾಸಣೆ, ವಿಚಾರಣೆಯೂ ನಡೆದಿದೆ.
ಬೆಂಗಳೂರು, ಮಂಗಳೂರು, ಸೇರಿ ಬೇರೆ ಬೇರೆ ಕಡೆಯಿಂದ ಬಂದ ರೈಲುಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಹೊರ ರಾಜ್ಯ, ಹೊರ ದೇಶ, ಹೊರ ಜಿಲ್ಲೆಯ ಪ್ರವಾಸಿಗರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೆಲವೊಂದು ವ್ಯಕ್ತಿಗಳನ್ನು ನಿಲ್ಲಿಸಿ ಗುರುತಿನ ಪತ್ರ ಕೇಳಲಾಗುತ್ತಿದೆ. ಇಲ್ಲದವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಅನುಮಾನಾಸ್ಪದ ವಸ್ತುಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ ಪೊಲೀಸರು. ಅನಾಮಧೇಯ ಬ್ಯಾಗ್ ಗಳ ತೀವ್ರ ತಪಾಸಣೆ. ನಡೆದಿದೆ.
ಇದನ್ನೂ ಓದಿ :Blast in Bengaluru : ಬರೀ 9 ನಿಮಿಷದಲ್ಲಿ ಎಲ್ಲ ಮುಗಿಸಿದ್ದ ಕಿರಾತಕ, ರಾಮೇಶ್ವರಂ ಕೆಫೆ ಸ್ಫೋಟಕ ಮಾಹಿತಿ
ಮೈಸೂರಿನಲ್ಲಿ ಯಾಕಿಷ್ಟು ತಪಾಸಣೆ? ಕಟ್ಟೆಚ್ಚರ?
ಬೆಂಗಳೂರಿನಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಾಕಿಷ್ಟು ತಪಾಸಣೆ ನಡೆಸಲಾಗಿದೆ ಎಂದರೆ ಬೆಂಗಳೂರಿನಲ್ಲಿ ಈ ಸ್ಫೋಟ ನಡೆಸಿರುವುದು ರಾಜಧಾನಿಯ ಹೆಸರು ಕೆಡಿಸುವ ಉದ್ದೇಶದಿಂದ ಎನ್ನಲಾಗಿದೆ. ಅದೇ ರೀತಿಯ ಸಾಂಸ್ಕೃತಿಕ ಮತ್ತು ಪಾರಂಪರಿಕ ರಾಜಧಾನಿಯಲ್ಲೂ ಅಂತಹುದೇ ಕುಕೃತ್ಯ ನಡೆಸಬಹುದು ಎಂಬ ಸಂಶಯವಿದೆ.
ಅದರ ಜತೆಗೆ 2016 ರಲ್ಲಿ ಮೈಸೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲಾಗಿತ್ತು. ರೈಲಿನ ಮೂಲಕ ಬಂದಿದ್ದ ಉಗ್ರರು ಕೋರ್ಟ್ ಆವರಣದಲ್ಲಿ ಬಾಂಬ್ ಇರಿಸಿದ್ದರು. ಜತೆಗೆ ಕಳೆದ ವರ್ಷ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ್ದವ ಮೈಸೂರಲ್ಲಿ ವಾಸವಿದ್ದ. ಈ ಕಾರಣಕ್ಕೆ ಮೈಸೂರು ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.