Site icon Vistara News

Mysore dasara : ಇದು ನಮ್ಮ ಮೈಸೂರು ದಸರೆಯ ವೈಭೋಗ; ತಿಳಿಯಿರಿ ಇದರ ಇತಿಹಾಸದ ಸೊಬಗ

History of Mysore Dasara

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಇದರ ಸಂಭ್ರಮವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ನವರಾತ್ರಿ (Navratri Festival) ಅಷ್ಟೂ ದಿನ ಹಾಗೂ ವಿಜಯದಶಮಿಯಂದು (Vijayadashami Festival) ಮೈಸೂರು (Mysore City) ಝಗಮಗಿಸಲಿದೆ. ವಿದ್ಯುತ್‌ ದೀಪಾಲಂಕಾರದಿಂದ ಹಿಡಿದು ಇಡೀ ನಗರವೇ ಸಿಂಗಾರಗೊಂಡು ಕಣ್ಮನ ಸೆಳೆಯುತ್ತವೆ. ಇನ್ನು ದಸರೆಯ ಇತಿಹಾಸವನ್ನು ನೋಡುವುದಾದರೆ 1610ರಲ್ಲಿ ಆರಂಭವಾಯಿತು ಎಂದು ಗೊತ್ತಾಗುತ್ತದೆ. ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆಯಲ್ಲಿ ಎಂಬಲ್ಲಿ ದಸರಾಕ್ಕೆ ಚಾಲನೆ ನೀಡಲಾಗಿತ್ತು. ಅಂಬಾರಿ ಹೊರುವ ಪದ್ಧತಿಗೆ ಚಾಲನೆ ಸಿಕ್ಕಿದ್ದೂ ಸಹ ಆಗಿನಿಂದಲೇ ಆಗಿದೆ.

ಮೈಸೂರನ್ನು ಮಹಿಷಾಸುರನಿಂದ ರಕ್ಷಿಸಿ, ಆತನನ್ನು ಸಂಹಾರ ಮಾಡಿದ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾ ಬರಲಾಗಿದ್ದು, ಅಂದು ಜಂಬೂ ಸವಾರಿ ಮೂಲಕ ಆನೆ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು.

ಇದನ್ನೂ ಓದಿ: Mysore Dasara : ಅ. 24ಕ್ಕೆ ಮೈಸೂರು ದಸರೆಗೆ ತೆರೆ; ಕಣ್ಮನ ಸೆಳೆಯಲಿವೆ ಜಂಬೂ ಸವಾರಿ, ಪಂಜಿನ ಕವಾಯತು

Mysore Dasara

ವಿಜಯನಗರ ಸಾಮ್ರಾಜ್ಯದಿಂದ ಬಂತು ಆಚರಣೆ

ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ವಿಜಯದಶಮಿಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಶೌರ್ಯ – ಪರಾಕ್ರಮಗಳ ಪ್ರದರ್ಶನ, ಕಲೆ – ಸಾಹಿತ್ಯಗಳಿಗೆ ವೇದಿಕೆ, ಸಂಗೀತ – ನೃತ್ಯ ಮತ್ತು ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ಸೇರಿದಂತೆ ಹತ್ತು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ನಡೆಸುತ್ತಾ ಬರಲಾಗಿತ್ತು. ಅವರ ತರುವಾಯ ಮೈಸೂರಿನಲ್ಲಿ ರಾಜಾ ಒಡೆಯರ್‌ ಅವರು ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅಂದರೆ 1799ರಲ್ಲಿ ಒಡೆಯರು ತಮ್ಮ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡರು. ನಂತರದ ದಸರಾ ಆಚರಣೆಗಳು ಮೈಸೂರಿನಲ್ಲಿ ಪ್ರಾರಂಭವಾದವು.

Mysore Dasara

ಜಂಬೂ ಸವಾರಿ ಎಂಬ ಆಕರ್ಷಣೆ

ಜಂಬೂ ಸವಾರಿ ಆರಂಭಕ್ಕೆ ಮುನ್ನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತದೆ. ಜಂಬೂಸವಾರಿಯು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ನಡೆಯುತ್ತದೆ.

ವಿದ್ಯುತ್‌ ದೀಪಗಳಿಂದ ಕಂಗೊಳಿಸುವ ಅರಮನೆಯ ವಿಹಂಗಮ ನೋಟ

Mysore Dasara

ಇದನ್ನೂ ಓದಿ: Mysore Dasara : ಜಂಬೂ ಸವಾರಿ ಗಜಪಡೆಗೆ ವಿಮೆ; ಜೀವಹಾನಿಯಾದರೆ 50 ಲಕ್ಷ ರೂ. ಇನ್ಶುರೆನ್ಸ್‌

ಗಮನ ಸೆಳೆಯುವ ಸ್ತಬ್ಧಚಿತ್ರಗಳ ಪ್ರದರ್ಶನ

ಅಂಬಾರಿ ಹೊತ್ತ ಬಲರಾಮನ ಜತೆಗೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳ ವಾದ್ಯ ಕಳೆಗಟ್ಟಲಿದೆ. ಅಲ್ಲದೆ, ಕಂಸಾಳೆ ಕುಣಿತ, ಕಲಾತಂಡಗಳ ನೃತ್ಯ ಪ್ರದರ್ಶನಗಳ ಜತೆಗೆ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತದೆ. ಇದರ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ.

Exit mobile version