ಮೈಸೂರು: ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದ ಉದ್ಯಮಿಯೊಬ್ಬರನ್ನು (Businessman from Kerala) ಮಾರ್ಗ ಮಧ್ಯವೇ ಪರಿಚಯ ಮಾಡಿಕೊಂಡು ಅವರನ್ನು ಹನಿ ಟ್ರ್ಯಾಪ್‌ಗೆ (Honey trap) ಬೀಳಿಸಿ 5 ಲಕ್ಷ ರೂ. ದೋಚಿದ ತಂಡವನ್ನು ಮೈಸೂರು ಪೊಲೀಸರು ಬಲೆಗೆ ಕೆಡವಿದ್ದಾರೆ. ಮುಸ್ಲಿಂ ಮಹಿಳೆಯಾಗಿರುವ (Three Arrested including muslim woman) ಮೋನಾ ಈ ಕೃತ್ಯದಲ್ಲಿ ಉದ್ಯಮಿಯನ್ನು ಸೆಳೆಯುವ ಕೆಲಸ ಮಾಡಿದ್ದರೆ, ಫಜಲುಲ್ಲಾ ರೆಹಮಾನ್, ರಿಜ್ವಾನ್ ಉದ್ಯಮಿಯನ್ನು ಬಲೆಗೆ ಕೆಡವಿದವರು. ಈ ತಂಡ ಹೆದ್ದಾರಿಯಲ್ಲಿ ಹೋಗುವವರನ್ನು ಇದೇ ರೀತಿಯಾಗಿ ಬಲೆಗೆ ಬೀಳಿಸಿಕೊಡು ದೋಚುತ್ತಿದೆ ಎಂದು ಹೇಳಲಾಗಿದೆ.
ಕೇರಳದ ತಿರುನೆಲ್ಲಿ ಮೂಲದ ಉದ್ಯಮಿಯಾಗಿರುವ ಸುನ್ನಿ ಎಂಬವರು ಆಗಾಗ ಚೆನ್ನೈಗೆ ಹೋಗಿ ಬರುತ್ತಾ ಇರುತ್ತಾರೆ. ಇತ್ತೀಚೆಗೆ ಅವರು ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿರುವಾಗ ಮಾನಂದವಾಡಿಯಲ್ಲಿ ಹನಿ ಟ್ರ್ಯಾಪ್‌ನ ಮೂವರು ಆರೋಪಿಗಳು ಉದ್ಯಮಿಯನ್ನು ತಡೆದಿದ್ದಾರೆ. ಚೆನ್ನಾಗಿ ಮಾತನಾಡಿದ ಅವರು ಉದ್ಯಮಿಯನ್ನು ಬಲವಂತವಾಗಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಮಹಿಳೆ ಮೋನಾ ಜತೆ ಸುನ್ನಿಯನ್ನು ನಗ್ನವಾಗಿ ಮಲಗಿಸಿದ್ದಾರೆ. ಫೋಟೊ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಸುನ್ನಿ ಮತ್ತು ಮೋನಾಳ ವಿಡಿಯೊವನ್ನು, ಫೋಟೊವನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಆರಂಭದಲ್ಲಿ ಮೋನಾ ಒಬ್ಬಳೇ ಇದ್ದು ಸುನ್ನಿ ಅವರನ್ನು ಸೆಳೆದು ಮನೆಗೆ ಕರೆದುಕೊಂಡು ಹೋದಳೋ, ಅಥವಾ ಎಲ್ಲರೂ ಸೇರಿ ಈ ಕೃತ್ಯ ನಡೆಸಿದರಾ ಎನ್ನುವುದು ಗೊತ್ತಿಲ್ಲ.
ಫೋಟೊ ಮತ್ತು ವಿಡಿಯೊ ತೋರಿಸಿದ ಆರೋಪಿಗಳು ನಮಗೆ 10 ಲಕ್ಷ ರೂ. ಕೊಡಬೇಕು ಇಲ್ಲವಾದರೇ ಈ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ದಾರಿ ಕಾಣದ ಉದ್ಯಮಿ ಸುನ್ನಿ ಅವರು 5 ಲಕ್ಷ ರೂ. ಹಣವನ್ನು ಕೊಟ್ಟಿದ್ದಾರೆ. ಬಳಿಕ ಆರೋಪಿಗಳು ಸುನ್ನಿ ಅವರು ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಪರಾರಿ ಆಗಿದ್ದಾರೆ.
ಬಳಿಕ ಸುನ್ನಿ ಅವರು ತಮ್ಮ ಕಾರಿನ ಬಳಿ ಬಂದು ನೇರವಾಗಿ ಕೇರಳದ ತಮ್ಮ ಮನೆಗೆ ಹೋಗಿದ್ದಾರೆ. ಅಲ್ಲಿ ತಿರುನೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಿರುನೆಲ್ಲಿ ಪೊಲೀಸರು ಮಾಹಿತಿ ಪಡೆದು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ.
ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಈ ಮೂವರು ವಂಚಕರನ್ನು ಬಂಧಿಸಿದ್ದಾರೆ. ಈ ಖತರ್ನಾಕ್ ಕೇಡಿಗಳು ಮಡಿಕೇರಿ ಸೇರಿದಂತೆ ಹಲವು ಕಡೆ ಉದ್ಯಮಿಗಳು, ಶ್ರೀಮಂತರನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ಹಣ ವಸೂಲಿ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಬಂಧಿತರಿಂದ 50 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೇರೆ ದೂರುಗಳು ಬಂದರೆ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳು ಇವೆ.