ಮೈಸೂರು: ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ (Bill Collector) ಆಗಿದ್ದ 21 ವರ್ಷದ ಯುವಕನೊಬ್ಬ ಕೆರೆ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊಳಗಟ್ಟ ಗ್ರಾಮದ ನಿವಾಸಿ ಅರುಣ್ ಕುಮಾರ್(21) ಮೃತ (Young man dead) ದುರ್ದೈವಿ. ಆತನ ಶವ ಬಿಳಿಕೆರೆ ಬಳಿ ಪತ್ತೆಯಾಗಿದೆ. ಅವನು ಹನಿಟ್ರ್ಯಾಪ್ (Honey trap)ನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆಯೇ ಎಂಬ ಸಂಶಯ ಮೂಡಿದೆ.
ಮಂಗಳವಾರ ಅರುಣ್ ಕುಮಾರ್ ಜುಲೈ ನಾಲ್ಕರಂದು ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಆಫೀಸಿಗೆ ಹೋಗಿ ಬರುತ್ತೇನೆ, ಮ್ಯಾನೇಜರ್ ಕರೆಯುತ್ತಿದ್ದಾರೆ ಎಂದು ಹೇಳಿ ಮನೆಯಿಂದ ಹೊರಟವನು ಸಂಜೆಯಾದರೂ ಮರಳಿ ಬಂದಿಲ್ಲ. ಬಳಿಕ ಅವರ ತಾಯಿ ಲತಾ ಮತ್ತು ಸೋದರ ರಾಜು ಎಲ್ಲ ಕಡೆ ಹುಡುಕಿದರೂ ಎಲ್ಲೂ ಸಿಕ್ಕಿರಲಿಲ್ಲ. ಇತರ ಗೆಳೆಯರೂ ಸೇರಿಕೊಂಡರು.
ಈ ನಡುವೆ, ಅರುಣ್ ಕುಮಾರ್ ಬಿಳಿಕೆರೆ ಗ್ರಾಮದ ಕೆರೆ ಬದಿಯಲ್ಲಿ ಶವವಾಗಿ ಬಿದ್ದಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ತಾಯಿ ಮತ್ತು ಸೋದರ ಹೋಗಿ ನೋಡಿದಾಗ ಅದು ಅವನದೇ ಶವ ಎಂದು ಕನ್ಫರ್ಮ್ ಆಗಿತ್ತು.
ಹಣಕ್ಕಾಗಿ ಪೀಡಿಸುತ್ತಿದ್ದ ಯುವತಿ ಯಾರು?
ಅರುಣ್ ಕುಮಾರ್ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದು ಆತ್ಮಹತ್ಯೆಯೇ? ಕೊಲೆಯೇ? ಅರುಣ್ ಕುಮಾರನೇ ನೀರಿಗೆ ಬಿದ್ದು ಸತ್ತನೇ ಎಂಬ ಬಗ್ಗೆ ಹಲವು ಸಂಶಯಗಳಿವೆ. ಅದರಲ್ಲೂ ಮುಖ್ಯವಾಗಿ ಕಾಡುತ್ತಿರುವುದು ಅಮ್ಮನ ಜತೆ ಅರುಣ್ ಕುಮಾರ್ ಹೇಳಿದ ಆ ಮಾತು.
ಇತ್ತೀಚೆಗೆ ಸ್ವಲ್ಪ ಖಿನ್ನನಾಗಿದ್ದ, ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಮತ್ತು ಕೆಲವೊಮ್ಮೆ ಆತಂಕದಲ್ಲಿದ್ದ ಅರುಣ್ ಕುಮಾರ್. ಆಗ ತಾಯಿ ಏನಾಗಿದೆ ನಿನಗೆ ಎಂದು ವಿಚಾರಿಸಿದ್ದರು. ಆಗ ಅವನು ಹುಡುಗಿಯೊಬ್ಬಳಿಗೆ ಹಣ ಕೊಡಬೇಕಾಗಿದೆ ಎಂದು ಹೇಳಿದ್ದ. ಆದರೆ, ಹೆಚ್ಚಿನ ವಿವರಣೆ ಕೊಟ್ಟಿರಲಿಲ್ಲ.
ಮಗ ಪದೇಪದೆ ಈ ರೀತಿ ವೇದನೆ ಅನುಭವಿಸುತ್ತಿದ್ದುದನ್ನು ಗಮನಿಸಿದ ತಾಯಿ ಮತ್ತೆ ಮತ್ತೆ ಕೇಳಿದ್ದರು. ಆಗ ಅವನು ಹುಡುಗಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದಿದ್ದ. ಆಗ ತಾಯಿ ತಾನೇ ಹಣ ಹೊಂದಿಸಿ ಕೊಡುವುದಾಗಿ ಭರವಸೆ ನೀಡಿದ್ದರು.
ಹಣ ಹೊಂದಿಸಿ ಕೊಡುವ ಪ್ರಕ್ರಿಯೆಯ ಬಗ್ಗೆ ಚಿಂತಿಸುತ್ತಿರುವಾಗಲೇ ಅರುಣ್ ಕುಮಾರ್ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಹೀಗಾಗಿ ಈ ಕೊಲೆಯ ಬಗ್ಗೆ ತಾಯಿಗೆ ಸಂಶಯ ಬಂದಿದೆ.
ಅರುಣ್ ಕುಮಾರ್‌ನನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಯುವತಿ ಯಾರು ಎನ್ನುವ ಬಗ್ಗೆ ತನಿಖೆ ನಡೆಸಬೇಕು, ಜತೆಗೆ ಇದು ಆತ್ಮಹತ್ಯೆಯಾಗಿರುವ ಸಾಧ್ಯತೆ ಇಲ್ಲ, ಕೊಲೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲು ಮಾಡಿಕೊಂಡಿದ್ದಾರೆ.
ಅರುಣ್ ಕುಮಾರ್ ಸ್ಥಳೀಯವಾಗಿ ಯಾರಾದರೂ ಹುಡುಗಿ ಜತೆ ಸಂಪರ್ಕ ಹೊಂದಿದ್ದನೇ? ಆಕೆ ಅವನ ಯಾವುದೋ ದುರ್ಬಲ ಕ್ಷಣವನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳಾ? ಅವನನ್ನು ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳಾ ಎಂಬ ಪ್ರಶ್ನೆ ಕಾದಿದೆ.
ಇದನ್ನೂ ಓದಿ: Akanksha Murder : ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರೇಯಸಿಯ ಕೊಂದು ಓಡಿದ್ದವ ತಿಂಗಳ ಬಳಿಕ ಸೆರೆ!
ಇದರ ನಡುವೆ ಆತ ಯಾವುದಾದರೂ ಸಾಮಾಜಿಕ ಜಾಲತಾಣದ ಬ್ಲ್ಯಾಕ್ ಮೇಲರ್‌ಗಳ ಬಲೆಗೆ ಬಿದ್ದಿದ್ದಾನಾ? ಸೋಷಿಯಲ್ ಮೀಡಿಯಾದ ಮೂಲಕ ಸಂಪರ್ಕ ಮಾಡುವ ಕೆಲವು ಖತರ್ನಾಕ್‌ಗಳು ಹುಡುಗಿಯ ಹೆಸರಿನಲ್ಲಿ ಹುಡುಗರನ್ನು ಪ್ರಚೋದಿಸಿ ಅವರ ದುರ್ಬಲ ಕ್ಷಣಗಳನ್ನು ವಿಡಿಯೋ ಮಾಡಿ ಹೆದರಿಸುವ ಪ್ರಕ್ರಿಯೆ ನಡೆಯುತ್ತದೆ. ಒಂದೊಮ್ಮೆ ಹಣ ಕೊಡದಿದ್ದರೆ ವಿಡಿಯೊವನ್ನು ವೈರಲ್ ಮಾಡುವ, ಸ್ನೇಹಿತರಿಗೆ ಕಳುಹಿಸುವ ಬೆದರಿಕೆ ಹಾಕಲಾಗುತ್ತದೆ. ಇಂಥ ಯಾವುದಾದರೂ ಜಾಲದ ಕೈಗೆ ಸಿಲುಕಿದ್ದನೇ ಎನ್ನುವುದು ತನಿಖೆಯಲ್ಲಿ ಗೊತ್ತಾಗಬೇಕಾಗಿದೆ.