Site icon Vistara News

Yoga Day 2022 | ಮೈಸೂರಿಗೆ ಯೋಗ ವಿವಿ ಘೋಷಣೆ; ಹುಸಿಯಾದ ನಿರೀಕ್ಷೆ

Yoga Day 2022

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮ ಯೋಗ ನಗರಿ ಮೈಸೂರಿನಲ್ಲಿ ಸಾಂಗವಾಗಿ ನೆರವೇರಿದೆ. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿಗೆ ಹಿಂದಿರುಗಿತ್ತಾರೆ. ಆದರೆ ಯೋಗ ದಿನಾಚರಣೆಯ ಅಂಗವಾಗಿ ಅವರು ಮೈಸೂರು ಭೇಟಿ ನೀಡಿದ ಸಂದರ್ಭದಲ್ಲಿ ನಗರಕ್ಕೆ ಯೋಗ ವಿಶ್ವವಿದ್ಯಾಲಯ ಘೋಷಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಯೋಗ ಪ್ರೇಮಿಗಳಿಗೆ ನಿರಾಸೆಯಾಗಿದೆ.

ಯೋಗ ವಿವಿ ಸ್ಥಾಪನೆಗೆ ಪ್ರಧಾನಿ ಕಾರ್ಯಾಲಯಕ್ಕೂ ಮನವಿ ಸಲ್ಲಿಸಲಾಗಿತ್ತು. ಹೀಗಾಗಿಯೇ ಮೋದಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಘೋಷಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿತ್ತು. ಸಾಮಾನ್ಯವಾಗಿ ನರೇಂದ್ರ ಮೋದಿ ವಿಶೇಷ ಸಂದರ್ಭಗಳಲ್ಲಿ ಭೇಟಿ ನೀಡುವ ಸಂದರ್ಭ ಸ್ಥಳೀಯ ಅಗತ್ಯಕ್ಕೆ ಪೂರಕವಾಗಿ ಯಾವುದಾದರು ಕೊಡುಗೆ ನೀಡುವ ಸಂಪ್ರದಾಯವಿದೆ. ಈ ಹಿಂದೆ ಮೈಸೂರಿಗೆ ಭೇಟಿ ನೀಡಿದ ಸಂದರ್ಭ ಮೈಸೂರು-ಬೆಂಗಳೂರು ನಡುವೆ ದಶಪಥ ರಾಷ್ಟ್ರೀಯ ಹೆದ್ದಾರಿ ಘೋಷಣೆ ಮಾಡಿದ್ದರು. ಹೀಗಾಗಿ ಯೋಗ ವಿವಿಯ ಘೋಷಣೆ ಕುರಿತು ನಿರೀಕ್ಷೆ ಹೆಚ್ಚಿತ್ತು.

ಮೈಸೂರಿನಲ್ಲಿ ಯೋಗ ತರಬೇತಿಯ ದೊಡ್ಡ ಪರಂಪರೆಯೇ ಇದೆ. ಹೀಗಾಗಿ ಇಲ್ಲಿಯ ಯೋಗ ಶಿಕ್ಷಣಕ್ಕೆ ಅಕಾಡೆಮಿಕ್‌ ಮಾನ್ಯತೆ ದೊರೆಯಬೇಕಾದರೆ ಯೋಗ ವಿಶ್ವವಿದ್ಯಾನಿಲಯದ ಅಗತ್ಯವಿದೆ ಎಂದು ಸ್ಥಳೀಯ ಯೋಗ ಸಂಸ್ಥೆಗಳು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿವೆ.

ಸದ್ಯ ಯೋಗ ನಗರಿಯಲ್ಲಿ ೨೦೦ಕ್ಕೂ ಹೆಚ್ಚು ಯೋಗ ಕಲಿಸುವ ಕೇಂದ್ರಗಳಿವೆ. ಇವುಗಳಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿತ್ಯ ಯೋಗ ಕಲಿಯುತ್ತಿದ್ದಾರೆ. ಅನೇಕ ಕೇಂದ್ರಗಳು ಪಾರಂಪರಿಕಾ ಪದ್ಧತಿಯಲ್ಲಿಯೇ ಯೋಗವನ್ನು ಹೇಳಿಕೊಡುತ್ತಿವೆ. ಇಲ್ಲಿ ಕಲಿತವರು ಯೋಗ ಶಿಕ್ಷಕರಾಗಿ ಹೊರಹೊಮ್ಮುತ್ತಿದ್ದಾರೆ. ಆದರೆ ಅವರಿಗೆ ಶೈಕ್ಷಣಿಕವಾಗಿ ಮಾನ್ಯತೆ ದೊರೆಯಬೇಕಾದರೆ ಅಂಗೀಕೃತ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಈಗ ಯೋಗ ತರಬೇತಿ ಸಂಸ್ಥೆಗಳು ಪ್ರಮಾಣ ಪತ್ರ ನೀಡುತ್ತಿವೆಯಾದರೂ ಇದಕ್ಕೆ ಹೆಚ್ಚಿನ ಮಾನ್ಯತೆ ಇಲ್ಲ ಎಂಬುದು ಯೋಗಪಟುಗಳ ಅಭಿಪ್ರಾಯವಾಗಿದೆ.

ಮೈಸೂರಿನಲ್ಲಿ ವಿಶ್ವವಿದ್ಯಾಲಯ ಪ್ರಾರಂಭವಾದರೆ ಇಲ್ಲಿಯ ತರಬೇತಿ ಕೇಂದ್ರಗಳು ಮಾನ್ಯತೆ ಪಡೆದುಕೊಳ್ಳಲಿದ್ದು,ಆಗ ಇಲ್ಲಿಗೆ ತರಬೇತಿ ಪಡೆದುಕೊಳ್ಳಲು ದೇಶ-ವಿದೇಶಗಳಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರಲಿದ್ದಾರೆ ಎಂದು ಯೋಗ ತರಬೇತಿದಾರರ ಒಕ್ಕೂಟ ಹೇಳಿದೆ. ಈ ವಿಶ್ವವಿದ್ಯಾಲಯದ ಕೇಂದ್ರಗಳನ್ನು ದೇಶದಲ್ಲಿ ಮತ್ತು ವಿದೇಶಗಳಲ್ಲಿಯೂ ತೆರೆಯಲು ಅವಕಾಶವಿದೆ. ಯೋಗ ವಿವಿ ಸ್ಥಾಪನೆಯಿಂದ ಇಲ್ಲಿಯ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯಲಿದೆ ಎಂದು ಯೋಗಾಸಕ್ತರು ಗಮನ ಸೆಳೆಯುತ್ತಲೇ ಬಂದಿದ್ದಾರೆ.

ಈಗಾಗಲೇ ಮೈಸೂರಿನಲ್ಲಿ ಮೈಸೂರು ವಿವಿ, ರಾಜ್ಯ ಮುಕ್ತ ವಿವಿ ಹಾಗೂ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ವಿವಿಗಳಿವೆ. ಈ ಸಾಲಿನಲ್ಲಿ ಯೋಗ ವಿವಿ ಕೂಡ ಸೇರ್ಪಡೆಯಾದರೆ ಮೈಸೂರಿನ ಹಿರಿಮೆ ಇನ್ನಷ್ಟು ಹೆಚ್ಚುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಇದನ್ನೂ ಓದಿ |Yoga Day 2022 | ಯೋಗ ದಿನ ಯಶಸ್ವಿಗೊಳಿಸಿ ದೆಹಲಿಗೆ ತೆರಳಿದ ಮೋದಿ

Exit mobile version