ಮೈಸೂರು: ಜೆಡಿಎಸ್‌ನವರಿಗೆ ಬಿಜೆಪಿ ಸೋಲಿಸಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜೆಡಿಎಸ್ ಗೆಲ್ಲುವುದಿಲ್ಲ ಎಂದು ಶ್ರೀಕಂಠೇಗೌಡ ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ. ಅವನ್ಯಾರೋ ಎಚ್.ಕೆ.ರಾಮು ಅನ್ನೋನಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಮುಂಚಿತವಾಗಿ ಮಧು ಜಿ. ಮಾದೇಗೌಡರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ ಎಂದರು.
ಮಧು ಈ ಹಿಂದೆ ಮದ್ದೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದರು. ಅವರ ತಂದೆ ಮಾದೇಗೌಡ ಇಡೀ ನಾಡಿಗೆ ಚಿರಪರಿಚಿತರು. ಆರು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿದ್ದರು. ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದರು. ಕೊನೆಯುಸಿರುವರೆಗೂ ರೈತರ ಬಗ್ಗೆ ಕಾಳಜಿ ಇತ್ತು. ತಂದೆ ಹಾಕಿದ ದಾರಿಯಲ್ಲೇ ಮಧು ಕೂಡ ನಡೆಯುತ್ತಿದ್ದಾರೆ. ಅಂತಹ ಮಾದೇಗೌಡರ ಮಗ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡಬೇಕೆಂದು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಏನಾದರೂ ಅಭಿವೃದ್ದಿ ಆಗಿದ್ದರೆ ಕಾಂಗ್ರೆಸ್‌ನಿಂದ ಮಾತ್ರ. ರಾಜ್ಯದಲ್ಲಿ ಬಡತನ, ಬೆಲೆ ಏರಿಕೆ, ಕೋಮು ಗಲಭೆಗೆ ಬಿಜೆಪಿಯೇ ಕಾರಣ ಎಂದರು.
ಇದನ್ನೂ ಓದಿ| ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ‘ಕೈ’ ರಣತಂತ್ರ: ಇಂದು ಸಭೆ
ಮತದಾರರನ್ನು ಕಾಂಗ್ರೆಸ್ ವೈಯುಕ್ತಿಕವಾಗಿ ಭೇಟಿ ಮಾಡಬೇಕಿದೆ. ಮೈಸೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಬೇಕು. ಮನೆ ಬಾಗಿಲಿಗೆ ಹೋಗಿ ಮತಯಾಚನೆ ಮಾಡಿ ಬಿಜೆಪಿ ವೈಫಲ್ಯಗಳ ಬಗ್ಗೆ ತಿಳಿ ಹೇಳಬೇಕು. ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ಯಾವ ರಾಜ್ಯವೂ ಉದ್ದಾರ ಆಗಲ್ಲ. ಭಾರತದಲ್ಲಿ ಶ್ರೀಲಂಕಾ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಅದು ಆಗಬಾರದು, ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ಶಾಸಕ ಎಚ್.ಪಿ.ಮಂಜುನಾಥ್ ಸೇರಿ ಮತ್ತಿತ್ತರ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ | ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದೆ BJP: ಸಿದ್ದರಾಮಯ್ಯ ವಾಗ್ದಾಳಿ