Site icon Vistara News

ಜೆಡಿಎಸ್‌ ಪಕ್ಷದಿಂದ ಜಿ.ಟಿ. ದೇವೇಗೌಡ ಔಟ್‌?: ಮೊದಲ ಹೆಜ್ಜೆ ವೆಬ್‌ಸೈಟ್‌

JDS website

ಮೈಸೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ತವರು ಕ್ಷೇತ್ರದಲ್ಲೇ ಸೋಲಿನ ಚಕ್ರವ್ಯೂಹದಲ್ಲಿ ಕೆಡವಲು ದಾಳವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್‌ ಪಕ್ಷದಿಂದ ಹೊರನಡೆಯುವುದು ಬಹುತೇಕ ಖಚಿತವಾಗಿದೆ. ಇದರ ಮೊದಲ ಕುರುಹು, ಜೆಡಿಎಸ್‌ ಹೊಸ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದೆ.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ದೇ ಕೊನೆ. ಜೆಡಿಎಸ್ ಪಕ್ಷದ ಯಾವೊಂದು ಕಾರ್ಯಕ್ರಮದಲ್ಲೂ ಜಿಟಿಡಿ ಕಾಣಿಸಿಕೊಳ್ಳಲಿಲ್ಲ. ಪಕ್ಷ ಸಂಘಟನೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಪಕ್ಷವೂ ಜಿಟಿಡಿ ಅವರನ್ನು ಪರಿಗಣಿಸಲಿಲ್ಲ. ಜಿಟಿಡಿ ಅವರೂ ನಾಜೂಕಾಗಿ ಅಂತರ ಕಾಯ್ದುಕೊಂಡು ‘ತಟಸ್ಥ’ವಾಗಿ ಉಳಿದುಬಿಟ್ಟಿದ್ದರು. ಜಿಟಿಡಿ ಅವರನ್ನು ಸೆಳೆದುಕೊಳ್ಳಲು ಬಿಜೆಪಿ ನಾಯಕರೂ ಪ್ರಯತ್ನಿಸಿದರು, ಕಾಂಗ್ರೆಸ್ ನಾಯಕರೂ ಸಂಪರ್ಕಿಸಿದರು. ಇದೆಲ್ಲದರ ನಡುವೆ ಜುಲೈಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿ, ಪಕ್ಷದಲ್ಲೆ ಇರುವಂತೆ ಮನವೊಲಿಸಿದ್ದರು ಎನ್ನಲಾಗಿತ್ತು.

ಆದರೆ ಇದೀಗ ಹೊಸದಾಗಿ ರೂಪಿಸಲಾಗಿರುವ ಜೆಡಿಎಸ್‌ ವೆಬ್‌ಸೈಟ್‌ www.jds.ind.in ನಲ್ಲಿ ಜಿ.ಟಿ. ದೇವೇಗೌಡ ಅವರ ವಿವರದ ಸಣ್ಣ ಕುರುಹೂ ಇಲ್ಲದಂತೆ ಅಳಿಸಿಹಾಕಲಾಗಿದೆ. ನಮ್ಮ ನಾಯಕರು ಎಂಬ ಶೀರ್ಷಿಕೆಯಲ್ಲಿ, “”ಧೃಢ ಆತ್ಮವಿಶ್ವಾಸ ಹಾಗೂ ಪ್ರಬಲ ಇಚ್ಛಾಶಕ್ತಿ ಇರುವ ನಾಯಕರು ಸಮಾಜದ ಏಳಿಗೆಗೆ ಶ್ರಮಿಸುತ್ತಾರೆ.” ಎಂದು ಹೇಳಿ ಜಯಪ್ರಕಾಶ ನಾರಾಯಣ ಅವರಿಂದ ಬಿ. ಫಾರೂಕ್‌ ವರೆಗೆ 10 ನಾಯಕರ ಫೋಟೊಗಳನ್ನು ನೀಡಲಾಗಿದೆ. ಅದರಲ್ಲಿ ಜಿ.ಟಿ. ದೇವೇಗೌಡ ಹೆಸರಿಲ್ಲ. ಪಕ್ಷದ ಶಾಸಕರ ಪಟ್ಟಿ, ಅವರ ಭಾವಚಿತ್ರ, ವಿಳಾಸಗಳನ್ನು ಮತ್ತೊಂದು ಪುಟದಲ್ಲಿ ನೀಡಲಾಗಿದೆ. ಶಾಸಕರ ಪಟ್ಟಿಯಲ್ಲೂ ಜಿ.ಟಿ. ದೇವೇಗೌಡ ಮಾಹಿತಿ ಇಲ್ಲ.

ಜೆಡಿಎಸ್‌ ಆಯ್ಕೆ ಮುಕ್ತವಾಗಿರಿಸಿದ್ದ ದೇವೇಗೌಡರು

ಪಕ್ಷದಲ್ಲೆ ಮುಂದುವರಿಯುವ ಕುರಿತು ಹೇಳಿಕೆ ನೀಡಿದ್ದ ಎಚ್.ಡಿ. ದೇವೇಗೌಡರು ‘ಚುನಾವಣೆಗೆ ಇನ್ನೂ ಸಮಯವಿದೆ’ ಎನ್ನುವ ಮೂಲಕ ಎಲ್ಲ ಬಾಗಿಲುಗಳನ್ನೂ ತೆರೆದಿಟ್ಟುಕೊಂಡಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ, 2023ರ ಚುನಾವಣೆಯಲ್ಲಿ ಪುತ್ರ ಜಿ.ಡಿ.ಹರೀಶ್ ಗೌಡ ಅವರನ್ನೂ ಎಂಎಲ್‌ಎ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಜೆಡಿಎಸ್ ನಾಯಕರು ತಂದೆ- ಮಗ ಇಬ್ಬರಿಗೂ ಟಿಕೆಟ್ ನೀಡುವ ಭರವಸೆಯನ್ನು ಯಾವ ಪಕ್ಷ ನೀಡುತ್ತದೆಯೋ ಆ ಪಕ್ಷದಿಂದ ಸ್ಪರ್ಧೆ ಎಂದು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಕೆಲವು ಸಮಸ್ಯೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗೆ ಮತ್ತು ಮಗನಿಗೆ ಹುಣಸೂರು, ಕೆ.ಆರ್.ನಗರ, ಚಾಮರಾಜ ಯಾವುದಾದರೂ ಕ್ಷೇತ್ರದಲ್ಲಿ ಟಿಕೆಟ್ ಕೊಡಿ ಎಂಬ ಬೇಡಿಕೆಯನ್ನು ಕಾಂಗ್ರೆಸ್‌ ನಾಯಕರ ಮುಂದೆ ಇಟ್ಟಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು.

ಹುಣಸೂರಿನಲ್ಲಿ ಹಾಲಿ ಶಾಸಕ ಎಚ್.ಪಿ.ಮಂಜುನಾಥ್, ಕೆ.ಆರ್.ನಗರದಲ್ಲಿ ಪರಾಜಿತ ಅಭ್ಯರ್ಥಿ ಡಿ.ರವಿಶಂಕರ್, ಚಾಮರಾಜದಲ್ಲಿ ಮಾಜಿ ಶಾಸಕ ವಾಸು ಮತ್ತು ಮುಖಂಡ ಹರೀಶ್‌ಗೌಡ ಚುನಾವಣಾ ತಯಾರಿ ನಡೆಸಿದ್ದಾರೆ. ಹೀಗಾಗಿ ಜಿಟಿಡಿ ಪುತ್ರ ಹರೀಶ್‌ ಗೌಡಗೆ ‘ಸ್ಥಳಾವಕಾಶ’ ಕಲ್ಪಿಸುವುದು ಸಿದ್ದರಾಮಯ್ಯಗೆ ಕಷ್ಟಸಾಧ್ಯವಾಗಿತ್ತು. ಆದ್ದರಿಂದಲೇ ಎರಡು ಟಿಕೆಟ್ ಬೇಡಿಕೆಗೆ ‘ರಾಜಿ’ ಆಗಿರಲಿಲ್ಲ. ಪರಿಣಾಮ ಜಿಟಿಡಿ ಹಾಗೂ ಸಿದ್ದರಾಮಯ್ಯ ಮಾತುಕತೆ ಮುರಿದುಬಿದ್ದಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಸ್ಪರ್ಧೆಗೆ ಒಪ್ಪಿದ್ದ ಕಾಂಗ್ರೆಸ್ ನಾಯಕರು, ಜಿ.ಡಿ. ಹರೀಶ್‌ ಗೌಡ ಅವರಿಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಭರವಸೆ ನೀಡಿದ್ದರು. ಆದರೆ ಈ ಪ್ರಸ್ತಾವನೆಯನ್ನು ಜಿ.ಟಿ. ದೇವೇಗೌಡ ಒಪ್ಪಿರಲಿಲ್ಲ. ಆದರೆ ಇದೀಗ ಜೆಡಿಎಸ್‌ನಿಂದ ಹೊರಗಿಡಲಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರ ಜತೆಗೆ ಮಾತುಕತೆ ನಡೆದಿರಬಹುದೇ ಎಂಬ ಅನುಮಾನಗಳಿವೆ.

ಬಿಜೆಪಿ ಪಾಳೆಯದಿಂದ ಆಹ್ವಾನ

ಬಿಜೆಪಿ ವರಿಷ್ಠ ನಾಯಕರು ಹಳೇ ಮೈಸೂರು ಭಾಗದ ಮೇಲೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಪಕ್ಷಕ್ಕೆ ಬಲ ತುಂಬುವ ಸಾಮರ್ಥ್ಯ ಹೊಂದಿರುವ ಜಿ.ಟಿ. ದೇವೇಗೌಡರಿಗೆ ಕಮಲ ಪಾಳಯದ ಪ್ರಮುಖರೇ ಗಾಳ ಹಾಕಿದ್ದಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಯಿಂದ ಇಳಿದ ಬಳಿಕ ರಾಜ್ಯ ಬಿಜೆಪಿಯ ಪ್ರಮುಖ ನಿರ್ಧಾರಗಳು ನವದೆಹಲಿಯಲ್ಲಿ ತೀರ್ಮಾನ ಆಗುತ್ತಿವೆ. ಯಾರನ್ನು ನೆಚ್ಚಿಕೊಂಡು ಬಿಜೆಪಿಗೆ ಹೋಗುವುದು ಎಂಬುದೇ ಜಿಟಿಡಿ ಪಾಲಿಗೆ ಯಕ್ಷ ಪ್ರಶ್ನೆಯಾಗಿತ್ತು. ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ನೀಡುವುದಿಲ್ಲ ಎಂಬ ನಿಯಮವನ್ನು ತಂದರೆ ಪುತ್ರನ ರಾಜಕೀಯ ಭವಿಷ್ಯ ಹಾಳು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕಿದ್ದರು. ಆದರೆ ಬಿಜೆಪಿ ನಾಯಕರು ಮಾತ್ರ ಪ್ರಯತ್ನ ನಿಲ್ಲಿಸಿರಲಿಲ್ಲ.

ಇದೀಗ ಬದಲಾದ ಕಾಲಘಟ್ಟದಲ್ಲಿ ಬಿ.ಎಸ್‌. ಯಡಿಯೂರಪ್ಪ ಮತ್ತೆ ಶಕ್ತಿ ಪಡೆದಿದ್ದಾರೆ. ಕೇಂದ್ರೀಯ ಸಂಸದೀಯ ಮಂಡಳಿ ಜತೆಗೆ ಚುನಾವಣೆ ಸಮಿತಿಯಲ್ಲೀ ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಜತೆಗೆ ಮಾತುಕತೆ ನಡೆದು ಟಿಕೆಟ್‌ಗೆ ಒಪ್ಪಿದರೆ ಅದನ್ನು ನಂಬಲಿ ಜಿ.ಟಿ. ದೇವೇಗೌಡರಿಗೆ ಸಾಕಷ್ಟು ಕಾರಣಗಳಿವೆ. ಹೀಗಾಗಿ ಬಿಜೆಪಿ ನಾಯಕರು ಒಪ್ಪಿದರೆ ಬಿಜೆಪಿ ಧ್ವಜವನ್ನು ಹಿಡಿಯಲು ಜಿ.ಟಿ. ದೇವೇಗೌಡರಿಗೆ ಯಾವುದೇ ಹಿಂಜರಿಕೆ ಇಲ್ಲ.

ಈದನ್ನೂ ಓದಿ | Video: ನಾಟಕದ ಡೈಲಾಗ್‌ ಹೇಳಿ ಕರ್ಣನಾದ ಶಾಸಕ ಜಿ.ಟಿ. ದೇವೇಗೌಡ

Exit mobile version