ಮೈಸೂರು: ಚುನಾವಣೆಗೂ ಮುನ್ನ ಜೋಡೆತ್ತುಗಳಂತೆ ಇದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿ.ಕೆ. ಶಿವಕುಮಾರ್ (DK Shivakumar) ಈಗ ಒಬ್ಬರ ಮೇಲೊಬ್ಬರು ಬಿದ್ದು ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻರಾಜ್ಯ ಸರ್ಕಾರದ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಆರು ತಿಂಗಳಲ್ಲೇ ನಿರಾಸೆ ಮೂಡಿಸಿದೆʼʼ ಎಂದು ಹೇಳಿದರು.
ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತು ರೀತಿ ಇದ್ದರು. ಈಗ ಒಬ್ಬರ ಮೇಲೆ ಒಬ್ಬರು ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ. ಸಿದ್ದರಾಮಯ್ಯ ಕೆಳಗಿಳಿಸಬೇಕು ಅಂತ ಡಿ.ಕೆ.ಶಿವಕುಮಾರ್ ಕಾಯುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಹಣಿಯಲು ಎಷ್ಟು ಉಪಮುಖ್ಯಮಂತ್ರಿ ಮಾಡಬೇಕು ಅಂತ ಸಿದ್ದರಾಮಯ್ಯ ಯೋಚನೆ ಮಾಡುತ್ತಿದ್ದಾರೆ. ಅವರ ಕಿತ್ತಾಟದ ಬಗ್ಗೆ ನನಗೆ ತಕರಾರು ಇಲ್ಲ. ಆದರೆ, ಸರ್ಕಾರ ಬಂದ ಮೇಲೆ ನಿಮ್ಮ ಸಾಧನೆ ಏನು ಎಂದು ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.
ʻʻನಿಮ್ಮದೇ ಶಾಸಕರು ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ. ಬರ ಪರಿಸ್ಥಿತಿ ಬಗ್ಗೆ ಗಮನ ಹರಿಸಿಲ್ಲ. ಇದುವರೆಗೂ ಮೇವು ಸಂಗ್ರಹ ಮಾಡಿಲ್ಲ. ಉಸ್ತುವಾರಿ ಸಚಿವರು ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿಲ್ಲʼʼ ಎಂದು ಹೇಳಿರುವ ಬಿವೈ ವಿಜಯೇಂದ್ರ ಅವರು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದು ಸರ್ಕಾರದ ಏಕೈಕ ಸಾಧನೆ ಎಂದಿದ್ದಾರೆ.
ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತರ ಅನುದಾನಕ್ಕೆ ಕೊಕ್ಕೆ
ʻʻಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಅನುದಾನವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಡಿತ ಮಾಡಲಾಗಿದೆ. ಹೀಗಾಗಿ ಇದು ರೈತ ವಿರೋಧಿ ಸರ್ಕಾರʼʼ ಎಂದು ಹೇಳಿದ ವಿಜಯೇಂದ್ರ, ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರ ಸ್ವಂತ ಜಿಲ್ಲೆಯಲ್ಲೇ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತವಾಗಿವೆ ಎಂದು ಹೇಳಿದರು.
ಜಮೀರ್ ಖಾನ್ ರಾಜೀನಾಮೆಗೆ ಆಗ್ರಹ
ಮುಸ್ಲಿಂ ಸ್ಪೀಕರ್ ಬಂದಾಗ ಎಲ್ಲಾ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಎದ್ದು ನಿಂತು ನಮಸ್ಕಾರ ಸಾಬ್ ಎನ್ನುತ್ತಾರೆ. ಅಂಥ ಶಕ್ತಿಯನ್ನು ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಲ್ಲಿರುವ ವ್ಯಕ್ತಿಗಳು ಮಾತೆತ್ತಿದ್ರೆ ಸಂವಿಧಾನ, ಅಂಭೇಡ್ಕರ್ ಬಗ್ಗೆ ಮಾತನಾಡ್ತಾರೆ. ಆದರೆ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೋಡಿದರೆ ಕಾಂಗ್ರೆಸ್ ಸಚಿವರು ಎಷ್ಟೊಂದು ಪ್ರಜಾಪ್ರಭುತ್ವ ವಿರೋಧಿಗಳು, ದಲಿತ ವಿರೋಧಿಗಳು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ಸಿಎಂ ಆಗಲಿ, ಡಿಸಿಎಂ ಆಗಲಿ ಯಾರು ಸಹ ವಿರೋಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಜಮೀರ್ ಅಹ್ಮದ್ ಖಾನ್ ರ ಬಳಿ ಸಿಎಂ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪರಿಸ್ಥಿತಿ ಹೇಗಾಗುತ್ತದೆ, ಕಾದು ನೋಡಿ
ಬಿಜೆಪಿ ಪರಿಸ್ಥಿತಿ ಕಾದು ನೋಡಿ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಬಿ.ವೈ ವಿಜಯೇಂದ್ರ ಅವರು, ಲೋಕಸಭೆ ಚುನಾವಣೆವರೆಗೆ ಕಾದು ನೋಡಿ, ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಎಂಬುದು ಗೊತ್ತಾಗುತ್ತೆ ಎಂದರು.
ʻʻಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ನಲ್ಲಿ ಕಾಂಗ್ರೆಸ್ ಅಸಮಾಧಾನ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ.
ಆ ಕಾಲ ಬಹಳ ಹತ್ತಿರ ಬಂದಿದೆʼʼ ಎಂದು ಹೇಳಿದ ಅವರು, ʻʻನಮ್ಮ ಪಕ್ಷದಲ್ಲಿ ಒಂದಷ್ಟು ಅಸಾಮಾದಾನ ಇರುವುದು ಸತ್ಯ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ರಾಜ್ಯಾಧ್ಯಕ್ಷನಾಗಿ ನಾನು ಮಾಡ್ತೀನಿ. ಹಿರಿಯ ನಾಯಕರನ್ನು ಭೇಟಿ ಮಾಡುವುದು ನನ್ನ ಜವಾಬ್ದಾರಿ. ಶೀಘ್ರದಲ್ಲೇ ಹೋಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆʼʼ ಎಂದರು.
ಪ್ರಿಯಾಂಕ ಖರ್ಗೆ ಕ್ಷೇತ್ರದಲ್ಲಿ ಗೂಂಡಾಗಿರಿ
ಪ್ರಿಯಾಂಕ ಖರ್ಗೆ ಕ್ಷೇತ್ರದಲ್ಲಿ ಗೂಂಡಾಗಿರಿ ಜೋರಾಗಿದೆ. ರಾಜಕೀಯ ಪುಡಾರಿಗಳನ್ನು ಬಿಟ್ಟು ನಮ್ಮ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ಮಾಡಿಸಿದ್ದಾರೆ. ಸಿಎಂ ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದರು.