Site icon Vistara News

Karnataka Budget : ಆಯವ್ಯಯದಲ್ಲಿ ಅಂಗವಿಕಲರಿಗೆ ವಿಶೇಷ ಯೋಜನೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

karnataka-budget-will give more schemes to disabled says karnataka cm basavaraj bommai

#image_title

ನಂಜನಗೂಡು: ಮುಂದಿನ ಆಯವ್ಯಯದಲ್ಲಿ ಅಂಗವಿಕಲರಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ನಂಜನಗೂಡಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (ದಿವ್ಯಾಂಗಜನ್), ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನ್ಯು ಫ್ಯಾಕ್ಟರಿಂಗ್ ಕಾರ್ಪೋರೇಶನ ಆಫ್ ಇಂಡಿಯಾ ವತಿಯಿಂದ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ ಸಾಮಾಜಿಕ ಅಧಿಕಾರಿತಾ ಶಿಬಿರ” ಹಾಗೂ ಕೇಂದ್ರ ಸರ್ಕಾರದ ವಿಶೇಷ ಅಡಿಪ್ (ಎಡಿಐಪಿ) ಯೋಜನೆಯಡಿ “ ಉಚಿತ ಸಾಧನ ಸಲಕರಣೆಗಳ ವಿತರಣೆ” ಮಾಡಿ ಮಾತನಾಡಿದರು.

ಕೇಂದ್ರದ ಮಾಜಿ ಸಚಿವ, ಹಿರಿಯ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರು ಮಾನವೀಯತೆ ಮೆರೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಅರ್ಹ ಜನರಿಗೆ ತಲುಪಿಸುವ ಕೆಲಸವನ್ನು ಸಾಮಾನ್ಯವಾಗಿ ಯುವ ನಾಯಕರು ಮಾಡುತ್ತಾರೆ. ಆದರೆ ಹಿರಿಯ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರು ಸ್ವಂತ ಆಸಕ್ತಿಯಿಂದ ಕ್ಯಾಂಪ್ ಗಳನ್ನು ಆಯೋಜಿಸಿ, ಅಂಗವಿಕಲರನ್ನು ಗುರುತಿಸಿ ಅವರಿಗೆ ಸಾಧನ – ಸಲಕರಣೆಗಳನ್ನು ಒದಗಿಸಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದರು.

ಅಂಗವಿಕಲತೆ ಮನಸಿನ ಪೀಡೆಯಾಗಬಾರದು. ದೇವರು ಒಂದು ಅಂಗದಲ್ಲಿ ಸ್ವಲ್ಪ ವಿಕಲತೆ, ಕೊರತೆ ಕೊಟ್ಟರೆ, ಇನ್ನೊಂದರಲ್ಲಿ ತುಂಬಿ ಕೊಡುತ್ತಾನೆ. ನಾವೆಲ್ಲ ಕಣ್ಣಿದ್ದವರು ದೃಷ್ಟಿ ಹಾಯಿಸುವವರೆಗೆ ನೋಡಬಹುದು. ಕಣ್ಣಿಲ್ಲದವರು ನಮ್ಮನ್ನೂ ಮೀರಿಸಿ ಇಡೀ ಜಗತ್ತನ್ನು ನೋಡುವ ದಿವ್ಯದೃಷ್ಟಿ ಹೊಂದಿರುತ್ತಾರೆ. ನಮಗೆ ಒಳಗಣ್ಣು ಇಲ್ಲ, ದಿವ್ಯ ದೃಷ್ಟಿ ಇಲ್ಲ. ಈಗ ಯಾರು ಅಂಗವಿಕಲರೆಂದು ನೀವು ತೀರ್ಮಾನ ಮಾಡಿ ಎಂದು ಮಾರ್ಮಿಕವಾಗಿ ನುಡಿದರು.
ನಿಮ್ಮ ಹೃದಯ ಯಾವ ರೀತಿ ಮಿಡಿಯುತ್ತದೆ. ಭಾವನೆಗಳು ಯಾವ ರೀತಿ ಇರುತ್ತದೆ. ಮಾನವೀಯತೆ ಇದೆಯೆಂಬುದನ್ನು ಪರೀಕ್ಷೆ ಮಾಡಲು ಅಂಗವಿಕಲತೆಯನ್ನು ಕೊಟ್ಟಿರುತ್ತಾನೆ. ಇದು ಅವರ ಪರೀಕ್ಷೆ ಅಲ್ಲ, ನಮ್ಮ ಪರೀಕ್ಷೆ. ಅವರು ದೇವರ ಮಕ್ಕಳು. ಆದ್ದರಿಂದ ಅಂಗವಿಕಲರು ಯಾವುದೇ ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ ಎಂದು ನುಡಿದರು.

ಪ್ರಧಾನಮಂತ್ರಿಯವರ ವಿಶೇಷ ಕಾರ್ಯಕ್ರಮದಡಿಯಲ್ಲಿ ಅಂಗವಿಕಲರಿಗೆ ಸಾಧನ-ಸಲಕರಣೆ ನೀಡಿ ಸಾಮಾನ್ಯ ಜನರಂತೆ ಆತ್ಮವಿಶ್ವಾಸದಿಂದ ಬದುಕು ನಡೆಸುವ ಅನುಕೂಲ ಮಾಡಿಕೊಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸವನ್ನು ಎಲ್ಲ ಶಾಸಕರು ಮಾಡಬೇಕೆಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಸರ್ಕಾರ ಅಂಗವಿಕಲರ ಮಾಸಾಶನ ಹೆಚ್ಚಿಸಿತು. ಅದರಲ್ಲಿ ಶೇ. 70ಕ್ಕಿಂತ ಕಡಿಮೆ ವೈಕಲ್ಯ ಇರುವವರಿಗೆ ಕೇವಲ 600 ರೂ. ಗಳಷ್ಟಿದ್ದ ಮಾಸಾಶನವನ್ನು 400 ರೂ. ಗಳಷ್ಟು ಹೆಚ್ಚಿಸಿ ಸಾವಿರ ರೂ. ಗಳಿಗೆ ನಿಗದಿ ಮಾಡಲಾಗಿದೆ. ಅಂಗವಿಕಲರಿಗೆ ಹಲವು ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಅವುಗಳನ್ನು ತಲುಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಸುಮಾರು 1500 ಜನರಿಗೆ ವಿವಿಧ ಸೌಲಭ್ಯ ನೀಡುತ್ತಿರುವುದು ಒಳ್ಳೆಯ ಕೆಲಸ. ಶ್ರೀನಿವಾಸ ಪ್ರಸಾದ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಈ ತರದ ಕ್ಯಾಂಪ್ ಗಳನ್ನು ರಾಜ್ಯ ಸರ್ಕಾರವೇ ಮುತುವರ್ಜಿ ವಹಿಸಿ ಆಯೋಜಿಸಿಲು ಸರ್ಕಾರ ಮುಂಚೂಣಿಯಲ್ಲಿರುತ್ತದೆ. ಮುಂದಿನ ಬಜೆಟ್ ನಲ್ಲಿ ಅಂಗವಿಕಲರಿಗೆ ಇನ್ನಷ್ಟು ಸಹಾಯ ನೀಡುವ ಕಾರ್ಯಕ್ರಮ ಮಾಡಲಾಗುವುದು. ಕಾಕ್ಲಿಯರ್ ಇಂಪ್ಲಾಂಟ್ ಚಿಕಿತ್ಸೆ ಉಚಿತವಾಗಿ ನೀಡಲು 500 ಕೋಟಿ ರೂ. ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ ನಡೆಸುವ ಯೋಜನೆ ಮಾಡಲಾಗಿದೆ.

ಅಂಗವಿಕಲರಿಗೆ ಮೋಟರೈಸ್ಡ್ 3 ವೀಲರುಗಳನ್ನು ಒದಗಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ ಸ್ವಯಂ ಉದ್ಯೋಗ ನೀಡುವ ಜಗಜೀವನರಾಮ್ ಹೆಸರಿನಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಸ್ವಯಂ ಉದ್ಯೋಗ ಕೊಡುವ ಯೋಜನೆಯಡಿ ನೆರವು ನೀಡಲಾಗುವುದು. ಉದ್ಯೋಗದಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಶೇ. 4 ರಷ್ಟು ಹಾಗೂ ಸಿ ಮತ್ತು ಡಿ ಹುದ್ದೆಗಳಿಗೆ ಶಶೇ. 5 ರಷ್ಟು ಮೀಸಲಾತಿ ನೀಡಲಾಗುತ್ತಿದೆ.
ಅವರು ಬದುಕಿನಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಎಲ್ಲ ವರ್ಗದ ಜನರ ಅಭಿವೃದ್ಧಿಯಾಗ ಅಭಿವೃದ್ಧಿಗೆ ಅರ್ಥ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮನಾದ ಹಕ್ಕುಗಳಿವೆ. ಎಲ್ಲರೂ ಹಕ್ಕು ಪಡೆಯುವ ಶಕ್ತಿ ಇರುವುದಿಲ್ಲ. ಸರ್ಕಾರ, ಅಧಿಕಾರಿಗಳು, ಎಲ್ಲರೂ ಈ ಶಕ್ತಿ ನೀಡುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ : Budget 2023: ದಿನಾಂಕ, ಸಮಯ, ನಿರೀಕ್ಷೆಗಳು, ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ

ಎಲ್ಲ ಸಮುದಾಯಗಳ ಸಮುದಾಯ ಭವನದ ಬಗ್ಗೆ, ಎಲ್ಲರಿಗೂ ಸಮನಾದ ಸಮುಚ್ಛಯ ಕಟ್ಟುವ ಶ್ರೀನಿವಾಸ ಪ್ರಸಾದ್ ಅವರ ಕನಸು ಸಾಕಾರಗೊಳಿಸಲು ಕ್ರಮ ಕೈಗೊಳ್ಳುಲಾಗುವುದು ಎಂದು ತಿಳಿಸಿದರು.
ನಂಜನಗೂಡು ಶಾಸಕ ಹರ್ಷವರ್ಧನ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಕ್ಷೇತ್ರಕ್ಕೆ 500 ಕೋಟಿ ರೂ. ಯೋಜನೆಗಳನ್ನು ತಂದಿದ್ದಾರೆ. ತಪ್ಪುಗಳನ್ನು ಕಂಡು ಹಿಡಿಯುವುದು ಸುಲಭ. ಸಾಧನೆ ಮಾಡಿ ಗುರಿ ತಲುಪಲು ಶ್ರಮಿಸುವುದು ಬಹಳ ಶ್ರೇಷ್ಠ ಎಂದು ಹೇಳಿದರು.

ಕೇಂದ್ರದ ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ರೈತ ವಿದ್ಯಾನಿಧಿ, ಕೂಲಿಕಾರರಿಗೆ ವಿದ್ಯಾನಿಧಿ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆ ಹೀಗೆ ಹಲವಾರು ಯೋಜನೆಗಳಡಿಯಲ್ಲಿ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಫಲಾನುಭವಿಗಳು ಇರುತ್ತಾರೆ. ಸರ್ಕಾರದಿಂದ ಪಡೆದ ಸಹಾಯವನ್ನು ಸಮಾಜಕ್ಕೆ ವಾಪಸ್ ಕೊಡಬೇಕು ಎಂಬ ಕೆಲಸ ಮಾಡಿದರೆ, ಸಾಮರಸ್ಯದ, ಅಭಿವೃದ್ಧಿ ಯ ಸಮಾಜ ನಿರ್ಮಾಣವಾಗುತ್ತದೆ. ಸಲಕರಣೆಗಳ ಸದುಪಯೋಗ ಮಾಡಿಕೊಳ್ಳಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದು ತಿಳಿಸಿದರು. ಸಂಸದ ಶ್ರೀನಿವಾಸ ಪ್ರಸಾದ್, ಶಾಸಕ ಹರ್ಷವರ್ಧನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version