ಮೈಸೂರು: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಳನೇ ತರಗತಿಯ ಬಾಲಕನೊಬ್ಬನನ್ನು (Boy kidnapped) ಅಪಹರಿಸಿದ (Kidnap Case) ಮತ್ತು ಆ ಬಾಲಕ ಚಾಲಾಕಿತನ ಮೆರೆದು ಅಪಹರಣಕಾರರ ಕೈಯಿಂದ (Boy survived from Kidnappers) ತಪ್ಪಿಸಿಕೊಂಡು ಬಂದ ಸಿನಿಮೀಯ ಘಟನೆಯೊಂದು (Cinematic incident in Mysore) ನಡೆದಿದೆ.
ತಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದ ಬಳಿ ಈ ಘಟನೆ ನಡೆದಿದ್ದು, ಅಭಿಷೇಕ್ (13) ಎಂಬ ಬಾಲಕನೇ ಮುಸುಕುಧಾರಿಗಳಿಂದ ಅಪಹರಣಕ್ಕೆ ಒಳಗಾದರೂ ಬಚಾವಾಗಿ ಮನೆಗೆ ಮರಳಿ ಬಂದ ಬಾಲಕ.
ಪಟ್ಟಣದ ಜಿಎಸ್ಎಫ್ ಕಾಲೋನಿ ನಿವಾಸಿಗಳಾಗಿರುವ ನಂಜಯ್ಯ, ನಂದಿನಿ ದಂಪತಿ ಪುತ್ರ ಅಭಿಷೇಕ್. ಈತ ಪಟ್ಟಣದ ಲಿಟಲ್ ಫ್ಲವರ್ ಕಾನ್ವೆಂಟ್‌ನಲ್ಲಿ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿ.
ಗುರುವಾರ ಈತ ಎಂದಿನಂತೆ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ. ಈ ನಡುವೆ ಆತ ತ್ರಿವೇಣಿನಗರದ ದಿನಸಿ ಅಂಗಡಿ ಬಳಿ ಹೋಗುತ್ತಿದ್ದಾಗ ಒಂದು ಮಾರುತಿ ವ್ಯಾನ್ ಅವನ ಮುಂದೆ ಬಂದು ನಿಂತಿದೆ. ಅದರಲ್ಲಿದ್ದವರು ವಿದ್ಯೋದಯ ಕಾಲೇಜು ವಿಳಾಸ ಕೇಳಿದ್ದಾರೆ. ಬಾಲಕ ಅಭಿಷೇಕ್ ವಿಳಾಸ ತಿಳಿಸುವ ವೇಳೆ ಒಳಗಿದ್ದ ಮುಸುಕುಧಾರಿಗಳು ಹುಡುಗನ ಬಾಯಿ ಮುಚ್ಚಿ ವ್ಯಾನಿಗೆ ಹಾಕಿಕೊಂಡು ಕಾರನ್ನು ವೇಗವಾಗಿ ಓಡಿಸಿದ್ದಾರೆ. ಕ್ಷಣ ಮಾತ್ರದಲ್ಲಿ ಈ ಘಟನೆ ನಡೆದಿದೆ. ನಾಲ್ವರು ಮಂಕಿ ಕ್ಯಾಪ್ ಹಾಕಿದ ವ್ಯಕ್ತಿಗಳು ಮೊದಲು ಹುಡುಗನ ಮೇಲೆ ಮತ್ತು ಬರುವ ಸ್ಪ್ರೇ ಹಾಕಿದ್ದಾರೆ ಎಂದು ಅಭಿಷೇಕ್ ಹೇಳುತ್ತಾನೆ.
ಕಾರು ತ್ರಿವೇಣಿ ನಗರದಿಂದ ತಾಯೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾಗಿದೆ. ಈ ಹುಡುಗನಿಗೆ ಏನು ಮಾಡುವುದು ಎಂದು ತೋಚಲಿಲ್ಲ. ಕೊನೆಗೆ ಹುಡುಗ ಸಮಯ ಪ್ರಜ್ಞೆ ಮೆರೆದಿದ್ದಾನೆ. ನನಗೆ ಮೂತ್ರ ಬರುತ್ತದೆ, ದಯವಿಟ್ಟು ಮೂತ್ರ ವಿಸರ್ಜನೆಗೆ ನಿಲ್ಲಿಸಿ ಎಂದು ಕೂಗಿದ್ದಾನೆ.
ಅಪಹರಣಕಾರರು ವ್ಯಾನ್ ನಿಲ್ಲಿಸಿ ಡೋರ್ ಓಪನ್ ಮಾಡಿದ ತಕ್ಷಣವೇ ಹುಡುಗ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಹುಡುಗ ಈ ರೀತಿ ಓಡುತ್ತಿರುವುದನ್ನು ಅಲ್ಲಿ ಅತ್ತಿತ್ತ ಸಾಗುತ್ತಿದ್ದ ರೈತರು ಗಮನಿಸಿದ್ದಾರೆ. ಅವರೆಲ್ಲರೂ ಸೇರಿ ವಿಷಯ ತಿಳಿದು ಕಾರಿನವರನ್ನು ಬೆನ್ನಟ್ಟುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಅವರು ಪರಾರಿಯಾಗಿದ್ದಾರೆ.
ತಕ್ಷಣ ಪೊಲೀಸ್ ಠಾಣೆಗೆ ಬಂದು ಘಟನೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದಿಷ್ಟು ಬಾಲಕ ಅಭಿಷೇಕ್ ಹೇಳಿರುವ ಕಥೆ. ನಿಜಕ್ಕೂ ಮೈಸೂರಿನಲ್ಲಿ ಈ ರೀತಿ ಮಕ್ಕಳನ್ನು ಅಪಹರಣ ಮಾಡುವ ಜಾಲ ಸಕ್ರಿಯವಾಗಿದೆಯಾ? ಅಥವಾ ಬೇರೆ ಏನಾದರೂ ಘಟನಾವಳಿಗಳೂ ನಡೆದಿರಬಹುದಾ ಎಂಬ ಅಂಶಗಳ ಕಡೆಗೆ ಪೊಲೀಸರು ಗಮನ ಹರಿಸಬೇಕಾಗಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಆಗಾಗ ಮಕ್ಕಳ ಅಪಹರಣದ ಕಥೆಯನ್ನು ಕೇಳುತ್ತೇವೆ. ಆದರೆ, ಆಗೆಲ್ಲ ಪೊಲೀಸರು ಇದು ಅಪಹರಣವಲ್ಲ, ಸುಳ್ಳು ವದಂತಿ ಎಂದು ಸ್ಪಷ್ಟೀಕರಣ ನೀಡುತ್ತಾರೆ. ಈ ಪ್ರಕರಣದಲ್ಲಿ ಒಬ್ಬ 13 ವರ್ಷದ ಬಾಲಕನ ಅಪಹರಣ ಯತ್ನ ನಡೆದಿರುವುದರಿಂದ ಈ ಘಟನೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಪೊಲೀಸರು ಹೊರ ತೆಗೆಯಬೇಕಾಗಿದೆ.
ಟಿ. ನರಸೀಪುರದಲ್ಲಿ ಇಂಥ ಕೆಲವು ಅಪಾಯಕಾರಿ ಘಟನೆಗಳು ನಡೆದಿವೆ ಎಂದು ಸ್ಥಳೀಯರು ಹೇಳುತ್ತಿದ್ದು, ಇದರ ಬಗ್ಗೆ ಪೊಲೀಸರು ಗಮನಿಸಬೇಕಾಗಿದೆ.