ಮೈಸೂರು: ಚುನಾವಣೆ ನಿಮಿತ್ತ ತಪಾಸಣೆ ವೇಳೆ ವಾಹನ ತಡೆದಿದ್ದಕ್ಕೆ ಗಲಾಟೆ (Assault Case) ನಡೆದಿದೆ. ಲೋಕಸಭಾ ಚುನಾವಣೆ (Lok Sabha Election 2024) ರಂಗೇರುತ್ತಿದೆ. ಮಂಡ್ಯದಲ್ಲಿ ಚುನಾವಣೆ ಆರಂಭದಲ್ಲೇ ಹೊಡಿಬಡಿ ನಡೆದಿದೆ. ಬೈಕ್ ತಡೆದು ಪರಿಶೀಲಿಸಲು ಮುಂದಾದ ಸಿಬ್ಬಂದಿಗೆ ಸವಾರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಅಬಕಾರಿ ಇಲಾಖೆ ಪೇದೆ ಸಂತೋಷ್ ಹಲ್ಲೆಗೊಳಗಾದವರು. ತಿಪ್ಪೂರು ಗ್ರಾಮದಲ್ಲಿ ಚುನಾವಣಾ ಕರ್ತವ್ಯಕ್ಕೆ ಸಂತೋಷ್ ಅವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಸಂತೋಷ್ ಬೈಕ್ ತಡೆದು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ತಪಾಸಣೆಗೆ ಸಹಕರಿಸದ ಬೈಕ್ ಸವಾರರು ಗಲಾಟೆ ಮಾಡಿದ್ದಾರೆ.
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಪೇದೆ ಸಂತೋಷ್‌ಗೆ ಮಾರಣಾಂತಿಕ ಹಲ್ಲೆ ಮಾಡಿ ಸವಾರರು ಪರಾರಿ ಆಗಿದ್ದಾರೆ. ಘಟನೆ ಸಂಬಂಧ ಕೆಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಸಂತೋಷ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: 13 ವರ್ಷಗಳ ಬಳಿಕ ಬಿಜೆಪಿ ಕಚೇರಿಗೆ ರೆಡ್ಡಿ ಪತ್ನಿ; ರೇಂಜ್ ರೋವರ್ ಕಾರಲ್ಲಿ ಗ್ರಾಂಡ್ ಎಂಟ್ರಿ!
ಕೋಟಿ ಮೌಲ್ಯದ ಬಿಯರ್ ಬಾಟೆಲ್‌ಗಳು ಜಪ್ತಿ
ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಮೇಲೆ ಅಬಕಾರಿ ಜಂಟಿ ಆಯುಕ್ತರ ತಂಡ ದಾಳಿ ನಡೆಸಿದ್ದು, ಬರೋಬ್ಬರಿ 98.52 ಕೋಟಿ ರೂ. ಮೊತ್ತದ ಬಿಯರ್ ದಾಸ್ತಾನು ಜಪ್ತಿ ಮಾಡಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾರ್ಖಾನೆ ಇದಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಬಿಯರ್ ತಯಾರಿಕಾ ಘಟಕದ ಮೇಲೆ ದಾಳಿ ನಡೆದಿದೆ. ದೂರವಾಣಿ ಮೂಲಕ ಬಂದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ದಾಳಿ ಮಾಡಿದಾಗ, ಸರ್ಕಾರಕ್ಕೆ ತೋರಿಸಿರುವ ದಾಸ್ತಾನು ಲೆಕ್ಕಕ್ಕಿಂತ ಅಧಿಕ ದಾಸ್ತಾನು ಸಂಗ್ರಹ ಪತ್ತೆ ಆಗಿದೆ.
7 ಸಾವಿರ ವಿವಿಧ ಬ್ರಾಂಡಿನ ಪೆಟ್ಟಿಗೆಗಳಲ್ಲಿದ್ದ ಬಿಯರ್ ಬಾಟಲಿಗಳು, ಯುಟಿ ಟ್ಯಾಂಕ್, ಸೈಲೋಸ್ ಟ್ಯಾಂಕ್‌ಗಳಲ್ಲಿರುವ ಕಚ್ಚಾ ವಸ್ತು ಸಮೇತ ಜಪ್ತಿ ಮಾಡಲಾಗಿದೆ. ಈ ಸಂಬಂಧ 17 ಮಂದಿ ವಿರುದ್ಧ ದಾಖಲಾಗಿದ್ದು, ನಾಪತ್ತೆಯಾದವರಿಗಾಗಿ ಅಬಕಾರಿ ಪೊಲೀಸರು ಹುಡುಕುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ