ಮೈಸೂರು: ಪ್ರತಾಪ್ ಸಿಂಹ (MP Pratap Simha) ಅವರು 10 ವರ್ಷ ಸಂಸದರಾಗಿದ್ದರು. ಅವರಿಗೇ ಟಿಕೆಟ್ ಸಿಗುತ್ತೆ ಅಂತ ನಾನೂ ಅಂದುಕೊಂಡಿದ್ದೆ. ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಬೇಕು ಅಂತ ಪಟ್ಟು ಹಿಡಿದು ಟಿಕೆಟ್ ತೆಗೆದುಕೊಂಡು ಬಂದೆ. ಆದ್ರೆ ಪ್ರತಾಪ್ ಸಿಂಹ ಅವರಿಗೆ ಅವರೇ ಔಟ್ ಆಗಿಬಿಟ್ರು-ಹೀಗೆ ಹೇಳಿದ್ದಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ (Lok sabha Election 2024) ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ (Congress Candidate M. Lakshman)
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಅಭ್ಯರ್ಥಿ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿದರು. ಅವರ ಜತೆ ಜಿಲ್ಲಾ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ನಗರ ಅಧ್ಯಕ್ಷ ಆರ್.ಮೂರ್ತಿ ಸೇರಿ ಸ್ಥಳೀಯ ನಾಯಕರು ಭಾಗಿಯಾಗಿದ್ದರು.
ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ ಘಟನೆ ಉಲ್ಲೇಖಿಸಿದ ಲಕ್ಷ್ಮಣ್ ಅವರು, ʻʻಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದು ಯಾಕೆ? ಕಾರಣ ಏನು ಅಂತ ಬಿಜೆಪಿಯವರು ಹೇಳಬೇಕು. ಪ್ರತಾಪ್ ಸಿಂಹ ವಿರುದ್ಧ ಆಡಿಯೋ, ವಿಡಿಯೋ ಇತ್ತ? ಏನಾದರೂ ದಾಖಲೆಗಳಿದ್ದವೇ ಅಥವಾ ವರಿಷ್ಠರು ಕರೆದು ಹೇಳಿದ್ರ? ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲು ಕಾರಣ ಏನು ಅಂತ ಇನ್ನೂ ಗೊತ್ತಾಗಿಲ್ಲ ಎಂದು ಕುಹಕವಾಡಿದರು. ಆದರೆ, ಪ್ರತಾಪ್ ಸಿಂಹ ಅವರ ಮೇಲೆ ನನಗೆ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಸಾಮಾನ್ಯ ವ್ಯಕ್ತಿ ವರ್ಸಸ್ ರಾಜರ ನಡುವಿನ ಚುನಾವಣೆ ಎಂದ ಲಕ್ಷ್ಮಣ್
ʻʻನನ್ನ ಮತ್ತು ವಿಜಯ್ ಕುಮಾರ್ ಹೆಸರು ಹೈಕಮಾಂಡ್‌ಗೆ ತಲುಪಿತ್ತು. ಇಬ್ಬರಲ್ಲಿ ನನಗೆ ಅವಕಾಶ ಸಿಕ್ಕಿದೆ. ನಾನು ಒಬ್ಬ ಬಡ ರೈತ ಕುಟುಂಬದಿಂದ ಬಂದವನು. ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ಕೆಪಿಸಿಸಿ ವಕ್ತಾರನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ನನ್ನದು ಅಳಿಲು ಸೇವೆಯಿದೆ.ʼʼ ಎಂದು ಲಕ್ಷ್ಮಣ್ ಹೇಳಿದರು.
ʻʻಮೈಸೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಕ್ಕಲಿಗ ಸಮುದಾಯದ ಮತ ಹೆಚ್ಚಿವೆ. ಹಾಗಂತ ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದೇನೆ. ಕಳೆದ ಹತ್ತು ವರ್ಷದಿಂದ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿ ಆಯ್ಕೆಯಾಗಿದ್ದರು. ಈ ಬಾರಿ ಪ್ರತಾಪ್ ಸಿಂಹರೇ ಅಭ್ಯರ್ಥಿಯಾಗ್ತೀನಿ ಅನ್ನುವ ವಿಶ್ವಾಸ ಅವರಿಗೂ ಇತ್ತು. ಪ್ರತಾಪ್ ಸಿಂಹಗೆ ಯಾಕೆ ಟಿಕೆಟ್ ತಪ್ಪಿತು ಅಂತ ಅವರದರೂ ಹೇಳಬೇಕು, ಇಲ್ಲ ಪಕ್ಷ ಹೇಳಬೇಕು. ಪ್ರತಾಪ್ ಸಿಂಹ ಅಭ್ಯರ್ಥಿಯಾಗ್ತಾರೆ ಎಂದು ನಾನು ನಮ್ಮ ನಾಯಕರ ಬಳಿ ಮನವಿ ಮಾಡಿದ್ದೆ.
ನಾನು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು. ಈಗ ರಾಜಮನೆತನದ ಯದುವೀರ್ ಮತ್ತು ಸಾಮಾನ್ಯನಾದ ನನ್ನ ನಡುವೆ ಸ್ಪರ್ಧೆ ಏರ್ಪಟ್ಟಿದೆ.ʼʼ ಎಂದು ಲಕ್ಷ್ಮಣ್ ಹೇಳಿದರು.
ʻʻರಾಜ ಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತಂದವರು. ಮೀಸಲಾತಿ ವಿರುದ್ಧವಿರುವ ಬಿಜೆಪಿ ಪಕ್ಷದಿಂದ ಯದುವೀರ್ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರೆ ನಾವು ಟಿಕೆಟ್ ಕೊಡಿಸುತ್ತಿದ್ದೆವು. ಯದುವೀರ್ ಮೇಲೆ ಒತ್ತಡ ಹಾಕಿ ಚುನಾವಣೆಗೆ ಕರೆ ತಂದಿದ್ದು ಯಾರೆಂದು ಪ್ರತಾಪ್ ಸಿಂಹ ತಿಳಿಸಲಿ.ʼʼ ಎಂದು ಲಕ್ಷ್ಮಣ್ ಹೇಳಿದರು. ʻʻʻಜನಸಾಮಾನ್ಯರ ಬಳಿಗೆ ಬರುವ ವ್ಯಕ್ತಿ ಬೇಕಾ? ನಾವೇ ಅವರ ಮನೆ ಬಳಿಗೆ ಹೋಗುವ ವ್ಯಕ್ತಿ ಬೇಕಾ?ʼʼ ಎಂದು ಕೇಳಿದರು.
ಇದನ್ನೂ ಓದಿ : MP Pratap Simha : ಒಂದೇ ವೇದಿಕೆಯಲ್ಲಿ ಪ್ರತಾಪ್ ಸಿಂಹ- ಯದುವೀರ್ ; ಪಕ್ಕದವರಿಗೂ ದ್ರೋಹ ಮಾಡಲ್ಲ ಎಂದ ಸಿಂಹ
Lok sabha Election 2024 ಸಿದ್ದರಾಮಯ್ಯನವರ ಕೊಡುಗೆ ನೋಡಿ, ಅವಮಾನ ಮಾಡಬೇಡಿ
ʻಮೈಸೂರು ನಗರಕ್ಕೆ ಸಿದ್ದರಾಮಯ್ಯ ಕೊಟ್ಟ ಕೊಡುಗೆಗಳು ನಮ್ಮ ಕಣ್ಣ ಮುಂದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 8 ತಿಂಗಳಾಗಿದೆ 1500 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಮೈಸೂರು ಕೊಡಗು ಕ್ಷೇತ್ರದ ಜನತೆಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಿದ್ದರಾಮಯ್ಯನವರಿಗೆ ಅವಮಾನ ಮಾಡಬೇಡಿ. ಇಷ್ಟೆಲ್ಲ ಅಭಿವೃದ್ಧಿ ಮಾಡಿದ್ದರೂ ಭಾವನಾತ್ಮಕ ವಿಚಾರದಿಂದ ನಮಗೆ ಸೋಲಾಗುತ್ತಿವೆʼʼ ಎಂದು ಹೇಳಿದರು ಲಕ್ಷ್ಮಣ್.
ʻಏರ್ ಪೋರ್ಟ್ ವಿಸ್ತರಣೆ ಬಗ್ಗೆ ಸುಮ್ಮನೆ ಹೇಳ್ತಾನೆ ಇದ್ದಾರೆ. ಎಷ್ಟು ವಿಮಾನಗಳು ಓಡಾಟ ಮಾಡುತ್ತಿವೆ ಎಂದು ನೀವೇ ನೋಡಿ. ನಿಮ್ಮ ಸೇವೆ ಮಾಡಲಿಕ್ಕೆ ನನಗೊಂದು ಅವಕಾಶ ಕೊಡಿʼʼ ಎಂದು ಸುದ್ದಿಗೋಷ್ಠಿಯಲ್ಲಿ ಭಾವನಾತ್ಮಕ ಹೇಳಿಕೆ ನೀಡಿದರು ಮೈಸೂರು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್.
ನಾನು ಸೋತರೆ ಸತ್ತ ಹಾಗೆ… ಎಂದರು ಪಿಎಚ್‌ಡಿ ಪಡೆದ ಎಂ. ಲಕ್ಷ್ಮಣ್
ʻʻನಾನು ನಾಲ್ಕು ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಸುಸ್ತಾಗಿ ಹೋಗಿದ್ದೀನಿ. ಇದು ನನ್ನ ಕೊನೆಯ ಚುನಾವಣೆ.
ದಯವಿಟ್ಟು ನನ್ನ ಕೈಬಿಡಬೇಡಿ. ಹೊಲ ಹುತ್ತು, ಗೊಬ್ಬರ ಹೊಡೆದು ರಾಗಿ ಬೆಳೆದು ಜೀವನ ಮಾಡಿದ್ದೇನೆ. ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್, ಎಂ.ಟೆಕ್, ಪಿಎಚ್‌ಡಿ ಮಾಡಿದ್ದೇನೆ. ನನ್ನ ಹೆಸರಿನ ಮುಂದೆ ಪ್ರಿಫಿಕ್ಸ್, ಸಫಿಕ್ಸ್ ಇಲ್ಲ.
ರಾಜ, ಒಡೆಯರ್ ಅಂತ ಯಾವುದೂ ಇಲ್ಲ. ಕೆಲವರು ಲಕ್ಷ್ಮಣ್ ಗೌಡ ಅಂತ ಮಾಡಿಕೊಳ್ಳಿ ಅಂತ ಸಲಹೆ ಕೊಟ್ರು.
ನನ್ನ ತಂದೆ- ತಾಯಿ ಇಟ್ಟ ಹೆಸರನ್ನು ಚುನಾವಣೆಗಾಗಿ ಬದಲಾವಣೆ ಮಾಡಿಕೊಂಡಿಲ್ಲ. ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ತುಳಸಿದಾಸಪ್ಪ ನಂತರ 47 ವರ್ಷಗಳ ನಂತರ ಕಾಂಗ್ರೆಸ್ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದೆ. ಸಿದ್ದರಾಮಯ್ಯ ಒಕ್ಕಲಿಗ ವಿರೋಧಿ ಅನ್ನುವ ಅಪವಾದ ತೊಡೆದು ಹಾಕಿದ್ದಾರೆ ಎಂದು ಲಕ್ಷ್ಮಣ್ ವಿವರಿಸಿದರು.
ಯದುವೀರ್ ಒಡೆಯರ್ ಅವರನ್ನು ಬೀದಿಗೆ ಕರೆ ತಂದು ನಾಟಕ ಆಡಿಸ್ತಿದ್ದಾರೆ. ಯದುವೀರ್ ಅವರನ್ನು ಬೀದಿಲಿ ಕೂರಿಸಿ ಟೀ ಕುಡಿಸೋದು. ಈ ರೀತಿ ಮಾಡುವ ಮೂಲಕ ನಾಟಕ ಮಾಡಿಸುತ್ತಿದ್ದಾರೆ ಎಂದು ಹೇಳಿದರು.