ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಭರ್ಜರಿ ತಯಾರಿಗಳು ನಡೆಯುತ್ತಿದೆ. ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ 2ನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತಿದೆ. ಈ ಸಂಬಂಧ ಈಗ ರಾಜ್ಯ ಬಿಜೆಪಿ ನಾಯಕರ ಜತೆ ಹೈಕಮಾಂಡ್ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸುತ್ತಿದೆ. ಅಭ್ಯರ್ಥಿಗಳನ್ನು ಫೈನಲ್ ಮಾಡುವ ನಿಟ್ಟಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇನ್ನು ಬಹು ಕುತೂಹಲಕಾರಿ ಕ್ಷೇತ್ರವಾಗಿರುವ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರಕ್ಕೆ (Kodagu Mysore Lok Sabha constituency) ಪ್ರತಾಪ್ ಸಿಂಹ (Pratap Simha) ಜತೆಗೆ ಇನ್ನೊಂದು ಹೆಸರು ಕೇಳಿಬಂದಿದೆ. ಸಿಂಹ ಅವರ ಬದಲಾಗಿ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಅವರನ್ನು ಕಣಕ್ಕಿಳಿಸಿದರೆ ಹೇಗೆ? ಎಂಬ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಮೈಸೂರು ಕ್ಷೇತ್ರಕ್ಕೆ ಹೊಸ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಪ್ರತಾಪ್ ಸಿಂಹ ಹೆಸರಿನ ಜತೆಗೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಹೆಸರು ಮುಂಚೂಣಿಗೆ ಬಂದಿದೆ. ಅವರನ್ನು ರಾಜಕೀಯಕ್ಕೆ ಕರೆತರಲು ಬಿಜೆಪಿ ಆಲೋಚನೆ ಮಾಡುತ್ತಿದೆ.
ಸಭೆಯಲ್ಲಿ ಬುಧವಾರ ಚರ್ಚೆ
ಶತಾಯಗತಾಯ ಮೈಸೂರು ಕ್ಷೇತ್ರಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಕಸರತ್ತು ಮಾಡಲಾಗುತ್ತಿದೆ. ಈ ಮೂಲಕ ಹೊಸ ಮುಖವನ್ನು ಪರಿಚಯಿಸಿದಂತಾಗುತ್ತದೆ ಎಂಬ ನಿಟ್ಟಿನಲ್ಲಿ ಯಧುವೀರ್ ಹೆಸರು ಬುಧವಾರ ನಡೆದ ಸಭೆಯಲ್ಲಿ ಚರ್ಚೆಗೆ ಬಂದಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಿಟ್ಟರೆ ಇವರೇ ಸೂಕ್ತ ಅಭ್ಯರ್ಥಿ ಎಂದು ಮಾತುಕತೆಯನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಾಪ್ ಸಿಂಹ ಬಗ್ಗೆ ಬಿಜೆಪಿಯಲ್ಲೇ ವಿರೋಧ?
ಪ್ರತಾಪ್ ಸಿಂಹಗೆ ಕಾರ್ಯಕರ್ತರು, ಮುಖಂಡರು, ಮಾಜಿ ಶಾಸಕರ ವಿರೋಧ ಇದೆ ಎನ್ನಲಾಗುತ್ತಿದೆ. ಪಕ್ಷದಲ್ಲೇ ಪ್ರತಾಪ್ ಸಿಂಹ ಅವರಿಗೆ ಹೆಚ್ಚು ವಿರೋಧ ವ್ಯಕ್ತವಾಗಿದ್ದು, ಸಮುದಾಯ ಸಹ ನಿಲ್ಲುವುದು ಅನುಮಾನ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಯೋಗ ಮಾಡಬಹುದು ಎಂದ ಬಿಜೆಪಿ ನಾಯಕರು ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲದೆ, ಒಡೆಯರ್‌ಗೆ ಮೈಸೂರು ಟಿಕೆಟ್ ನೀಡಿದರೆ ಮಂಡ್ಯ, ಚಾಮರಾಜನಗರದಲ್ಲೂ ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ಈ ನಿರ್ಧಾರವನ್ನು ಕೈಗೊಂಡರೆ ಹಳೇ ಮೈಸೂರು ಭಾಗದಲ್ಲೂ ಪ್ಲಸ್ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ಬಂದಿದೆ.
ಇದನ್ನೂ ಓದಿ: Vidhana Soudha: ವಿಧಾನಸೌಧದಲ್ಲಿನ್ನು ಪ್ರತಿಯೊಬ್ಬರ ಫೇಸ್ ರೀಡ್; ಸಂಸತ್ ಮಾದರಿ ಭದ್ರತೆ!
ಯುದುವೀರ್ ಒಡೆಯರ್‌ಗೆ ಗಾಳ ಹಾಕಲು ಸಿಎಂ ಯತ್ನ!
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಯತ್ನ ನಡೆಸಿ ಈ ಹಿಂದೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದೆ ಎನ್ನಲಾಗಿದೆ. ಆ ವೇಳೆ ಯದುವೀರ್ ಸಹ ರಾಜಕೀಯಕ್ಕೆ ಬರಲು ಉತ್ಸಾಹ ತೋರಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೇ ಪ್ಲಸ್ ಆಗಿ ಇಟ್ಟುಕೊಂಡಿರುವ ಸಿಎಂ ಸಿದ್ದರಾಮಯ್ಯ, ಅಗತ್ಯ ಬಿದ್ದರೆ ಅವರನ್ನು ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದರೆ ಹೇಗೆ ಎಂಬ ಲೆಕ್ಕಾಚಾರವನ್ನು ಮಾಡಿದ್ದಾರೆ ಎನ್ನಲಾಗಿದೆ. ಅಗತ್ಯಬಿದ್ದರೆ ತಾವೇ ಯದುವೀರ್ ಅವರ ಜತೆಗೆ ಮಾತನಾಡುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಬಿಜೆಪಿ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಶುರು ಮಾಡಿದ್ದು, ಯಾರಿಗೆ ಟಿಕೆಟ್ ಕೊಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.