ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಅಂತಿಮ ಕ್ಷಣದಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ್ದು, ಎರಡನೇ ಅವಧಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ ಸದಸ್ಯ ಶಿವಕುಮಾರ್ ಅವರು ಮೈಸೂರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಬಿಜೆಪಿಯ ಡಾ. ಜಿ. ರೂಪ ಯೋಗೀಶ್ ಆಯ್ಕೆಯಾಗಿದ್ದಾರೆ.
ಪ್ರಾದೇಶಿಕ ಆಯುಕ್ತ ಡಾ. ಪ್ರಕಾಶ್ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಮೂರೂ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿವಕುಮಾರ್, ಕಾಂಗ್ರೆಸ್‌ನಿಂದ ಸೈಯದ್ ಅಶ್ರತ್ ಉಲ್ಲಾ ಖಾನ್, ಗೋಪಿ ಹಾಗೂ ಜೆಡಿಎಸ್‌ನಿಂದ ಕೆ.ವಿ.ಶ್ರೀಧರ್, ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೋಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ವಿ. ಶ್ರೀಧರ್ ನಾಮಪತ್ರ ಹಿಂಪಡೆದರು.
ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜೆ. ರೂಪಾ, ಕಾಂಗ್ರೆಸ್‌ನಿಂದ ಶೋಭಾ ಸುನೀಲ್ ಹಾಗೂ ಜೆಡಿಎಸ್‌ನಿಂದ ರೇಷ್ಮಾ ಬಾನು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಒಬಿಸಿ ಪ್ರಮಾಣಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ರೇಷ್ಮಾ ಬಾನು ಅವರ ನಾಮಪತ್ರ ತಿರಸ್ಕೃತವಾಯಿತು. ರೇಷ್ಮಾ ಬಾನು ಸಾಮಾನ್ಯ ಕ್ಷೇತ್ರದಿಂದ ಗೆದ್ದುಬಂದಿದ್ದರು ಹಾಗಾಗಿ ಒಬಿಸಿ ಪ್ರಮಾಣಪತ್ರ ಸಲ್ಲಿಸಿರಲಿಲ್ಲ, ಉದ್ದೇಶಪೂರ್ವಕವಾಗಿ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದರು. ಈ ಘಟನೆ ನಂತರ ರೇಷ್ಮಾ ಬಾನು ಕಣ್ಣೀರು ಸುರಿಸಿದರು.
65 ಸದಸ್ಯರ ಪಾಲಿಕೆಯಲ್ಲಿ ಸಂಖ್ಯಾ ಬಲದಲ್ಲಿ ಬಿಜೆಪಿ ಮುಂದಿದೆ. ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್, ಜೆಡಿಎಸ್ ಇದ್ದು, ಈ ಬಾರಿ ಮೂರೂ ಪಕ್ಷಗಳ ನಡುವೆ ಅಧಿಕೃತವಾಗಿ ಯಾವುದೇ ಮೈತ್ರಿ ಏರ್ಪಟ್ಟಿರಲಿಲ್ಲ. ಹಾಗಾಗಿ ಎಲ್ಲ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿಗೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ್ದಾರೆ.
ಚುನಾವಣೆ ನಡೆಯುತ್ತಿರುವಾಗಲೆ ಜೆಡಿಎಸ್ ಸದಸ್ಯರು ಅಡ್ಡಮತದಾನ ಮಾಡಿದರು. ಅಂತಿಮವಾಗಿ ಶಿವಕುಮಾರ್ ಮೇಯರ್ ಸ್ಥಾನ ಹಾಗೂ ಡಾ. ಜಿ. ರೂಪ ಯೋಗೀಶ್ ಉಪಮೇಯರ್ ಆಗಿ ಆಯ್ಕೆಯಾದರು.
ಆಮಿಷಕ್ಕೆ ಬಲಿಯಾದ ಜೆಡಿಎಸ್: ಧೃವನಾರಾಯಣ
ಆಸೆ ಆಮಿಷಕ್ಕೆ ಬಲಿಯಾಗ ಜೆಡಿಎಸ್, ಮೇಯರ್-ಉಪಮೇಯರ್ ಸ್ಥಾನವನ್ನು ಬಿಜೆಪಿಗೆ ಕೊಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು. ಜೆಡಿಎಸ್, ಹೆಸರಿಗೆ ಮಾತ್ರ ಜಾತ್ಯತೀತ. ಅವರು ಜಾತ್ಯತೀತದ ವಿರೋಧಿಗಳು. ಆಸೆ-ಆಮಿಷಕ್ಕೆ ಬಲಿಯಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್ ಉಪಮೇಯರ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಲು ಜೆಡಿಎಸ್ ಅವರೇ ಕಾರಣ. ಷಡ್ಯಂತ್ರ ಮಾಡಿ ನಾಮಪತ್ರ ತಿರಸ್ಕೃತ ಆಗುವಂತೆ ಮಾಡಿದ್ದಾರೆ. ಬಿಜೆಪಿ ಅಪರೇಷನ್ ಮಾಡಲು ಮೊದಲು ಮುಂದಾಗಿತ್ತು. ಇದೀಗ ಜೆಡಿಎಸ್ ಜತೆ ಕೈ ಜೋಡಿಸಿ ಅಧಿಕಾರ ಪಡೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಜನರು ಇದಕ್ಕೆಲ್ಲ ಉತ್ತರ ಕೊಡುತ್ತಾರೆ ಎಂದರು.
ಯಾವ ಮೈತ್ರಿಯೂ ಇರಲಿಲ್ಲ ಎಂದ ಬಿಜೆಪಿ
ಜೆಡಿಎಸ್ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರಾದರೂ ತಾವು ಜೆಡಿಎಸ್ ಜತೆಗೆ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ನಾವು ಜೆಡಿಎಸ್ ಜತೆ ಮಾತನಾಡಿಲ್ಲ. ಮೈತ್ರಿಯನ್ನೂ ಮಾಡಿಕೊಂಡಿಲ್ಲ. ನಮ್ಮ ಅಭ್ಯರ್ಥಿ ಪರವಾಗಿ ಜೆಡಿಎಸ್ನವರು ಬೆಂಬಲ ಸೂಚಿಸಿದ್ದಾರೆ. ಶಿವಕುಮಾರ್ ಮೂರನೇ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎಲ್ಲ ಪಕ್ಷದ ಸದಸ್ಯರೊಂದಿಗೆ ವಿಶ್ವಾಸದಿಂದ ಇದ್ದಾರೆ. ಅವರನ್ನು ಬೆಂಬಲಿಸುವ ಉದ್ದೇಶದಿಂದ ಜೆಡಿಎಸ್ನವರು ವೋಟ್ ಮಾಡಿದ್ದಾರೆ. ಆದ್ದರಿಂದ ಜೆಡಿಎಸ್ನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಚುನಾವಣಾ ಉಸ್ತುವಾರಿ ನಿರ್ಮಲ್‌ಕುಮಾರ್ ಸುರಾನಾ ಮಾತನಾಡಿ, ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಸ್ತಾಪವೇ ಆಗಿಲ್ಲ. ಜೆಡಿಎಸ್ ಜತೆ ನಾವು ಮೈತ್ರಿ ಮಾಡಿಕೊಂಡಿಲ್ಲ. ನಾವು ಆರಂಭದಿಂದಲೂ ಸ್ವಂತ ಬಲದ ಮೇಲೆ ಅಧಿಕಾರ ಪಡೆಯುತ್ತೇವೆ ಎಂದು ಹೇಳಿದ್ದೇವೆ. ಈಗಲೂ ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದೇವೆ. ಜೆಡಿಎಸ್ ಜತೆ ಯಾವುದೇ ರೀತಿಯ ಮೈತ್ರಿ ಮಾತುಕತೆ ನಡೆದಿರಲಿಲ್ಲ ಎಂದಿದ್ದಾರೆ.
ಪರಿಶಶಿಷ್ಟ ಸಮುದಾಯದ ಮೊದಲ ಮೇಯರ್
ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಎಸ್.ಟಿ. ಸಮುದಾಯದ ಮೇಯರ್ ಆಗಿದ್ದು, ಸಂತಸ ತಂದಿದೆ ಎಂದು ನೂತನ ಮೇಯರ್ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ನನಗೆ ಅವಕಾಶ ನೀಡುವ ಮೂಲಕ ಪರಿಶಿಷ್ಟ ಸಮುದಾಯವನ್ನು ಗುರುತಿಸಿದೆ. ನನ್ನ ಆಯ್ಕೆಗೆ ಜಾತಿ ಮಾತ್ರ ಕಾರಣವಲ್ಲ. ಆಯ್ಕೆಗೆ ಕಾರಣರಾದ ಎಲ್ಲ ನಾಯಕರಿಗೂ ನಾನು ಕೃತಜ್ಱತೆ ಸಲ್ಲಿಸುತ್ತೇನೆ. ಜೆಡಿಎಸ್‌ನೊಂದಿಗೆ ನಾವು ಮೈತ್ರಿ ಮಾಡಿಕೊಂಡಿಲ್ಲ. ಆದರೂ ನನಗೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.
ಮೈಸೂರಿನ ರಸ್ತೆಗಳು ಗುಂಡಿ ಬಿದ್ದಿವೆ. ಸ್ವಲ್ಪ ದಿನ ಸಮಯಾವಕಾಶ ಕೊಡಿ. ಖಂಡಿತವಾಗಿಯೂ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕಟೀಲ್, ಸಿಎಂ ಶುಭಾಶಯ
ಮೈಸೂರು ನಗರಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾದ ಶಿವಕುಮಾರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾದ ಡಾ. ಜಿ.ರೂಪ ಯೋಗೀಶ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ.
ಶಿವಕುಮಾರ್ ಅವರು 3 ಬಾರಿ ಕಾರ್ಪೊರೇಟರ್ ಆಗಿ ಅನುಭವ ಹೊಂದಿದ್ದಾರೆ. ಹಿಂದುಳಿದ ವರ್ಗದ ಮುಖಂಡರಾಗಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡವರು. ಹಿಂದುಳಿದ ವರ್ಗಕ್ಕೆ ಸೇರಿದ ಡಾ. ಜಿ.ರೂಪ ಯೋಗೀಶ್ ಅವರು ಡಾಕ್ಟರೇಟ್ ಪದವಿ ಪಡೆದವರು. ಇವರ ನೇತೃತ್ವದಲ್ಲಿ ಮೈಸೂರು ನಗರವು ಸಮಗ್ರ ಅಭಿವೃದ್ಧಿ ಹೊಂದುವಂತಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ | ಜೋಷಿ, ಶೆಟ್ಟರ್ ಎಂಟ್ರಿ: ಹುಬ್ಬಳ್ಳಿ-ಧಾರವಾಡ ಮೇಯರ್, ಉಪಮೇಯರ್ ಹುದ್ದೆ ಬಿಜೆಪಿ ತೆಕ್ಕೆಗೆ?