ಮೈಸೂರು: ʼರೋಹಿತ್ ಚಕ್ರತೀರ್ಥ ಯಾರು? ಅವರು ಶಿಕ್ಷಣ ತಜ್ಞ ಅಲ್ಲ, ಸಂಘ ಪರಿವಾರದ ಕಾರ್ಯಕರ್ತ ಅಷ್ಟೇʼ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ರೋಹಿತ್ ಚಕ್ರತೀರ್ಥ ಅವರನ್ನುಅಧ್ಯಕ್ಷರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷ ಅಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ. ರೋಹಿತ್ ಚಕ್ರತೀರ್ಥ ಅವರಿಗೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷರಾಗಲು ಯಾವ ಅರ್ಹತೆಯಿದೆ? ಎಂದು ಪ್ರಶ್ನಿಸಿದ್ದಾರೆ. ರೋಹಿತ್ ಚಕ್ರತೀರ್ಥ ಒಂದೆರಡು ಪುಸ್ತಕ ಬರೆದಿದ್ದಾರೆ, ಪತ್ರಿಕೆಗೆ ಲೇಖನ ಬರೆದಿದ್ದಾರೆ. ಅಂಥವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಆಗಿರೋದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ
ಟಿಪ್ಪು ಸುಲ್ತಾನ್ ಹಾಗೂ ಹೆಡಗೇವಾರ್ ನಡುವೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದ ವಿಶ್ವನಾಥ್, ಟಿಪ್ಪು ಗ್ರೇಟ್. ಟಿಪ್ಪು ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಡಿದ. ಬ್ರಿಟಿಷರ ಎದುರು ಮಂಡಿ ಊರಲಿಲ್ಲ, ಆದರೆ ಹೆಡಗೇವಾರ್ ಏನು ಮಾಡಿದರು? ಎಂದು ಪ್ರಶ್ನಿಸಿದ್ದಾರೆ.
ಶತಾವಧಾನಿ ಗಣೇಶ್ ಅವರು ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಬರೆದಿದ್ದಾರೆ. ಆದರೆ ಈ ಯಜ್ಞಕುಂಡಕ್ಕೂ ನಮ್ಮ ಹಳ್ಳಿಗೂ ಏನೂ ಸಂಬಂಧ? ಆದರೆ ನಾರಾಯಣ ಗುರು ಹಾಗಲ್ಲ. ಅವರು ಸಾಮಾಜಿಕ ಕ್ರಾಂತಿಯನ್ನು ಮಾಡಿದವರು. ಅವರ ಪಠ್ಯವನ್ನು ತೆಗೆಯುವುದು ತಪ್ಪು ಎಂದು ವಿಶ್ವನಾಥ್ ಹೇಳಿದ್ದಾರೆ.
ಪಠ್ಯಪುಸ್ತಕದಲ್ಲಿ ಕೇಸರೀಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ ಎಂದು ವಿಶ್ವನಾಥ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಗತ್ ಸಿಂಗ್ ಪಾಠ ಕೈಬಿಟ್ಟಿದ್ದರೆ ಗಲ್ಲಿಗೆ ಹಾಕಿ: ಸುಧಾಕರ್ ಸವಾಲು