ಮೈಸೂರು : ಮೈಸೂರು-ಕೊಡಗು (Mysore Kodagu Constituency) ಲೋಕಸಭಾ ಕ್ಷೇತ್ರದ (Lok Sabha Election 2024) ಟಿಕೆಟ್ ಮಿಸ್ ಆದ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ, ಬಿಜೆಪಿ ಘೋಷಿಸಿದ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Odeyar) ಅವರ ಭೇಟಿಗೂ ಸಿಗದೆ ಇದ್ದ ಹಾಲಿ ಸಂಸದ ಪ್ರತಾಪ್ ಸಿಂಹ (MP Pratap Simha) ಸೋಮವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಯದುವೀರ್ ಒಡೆಯರ್ ಅವರ ಜತೆ ವೇದಿಕೆ ಹಂಚಿಕೊಂಡಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಮಾಧ್ಯಮ ಸಂವಾದದಲ್ಲಿ ಯದುವೀರ್ ಮತ್ತು ಪ್ರತಾಪ್ ಸಿಂಹ ಅವರ ಮುಖಾಮುಖಿಯಾಗಿದ್ದು, ಇಬ್ಬರೂ ಗೌರವದಿಂದಲೇ ನಡೆದುಕೊಂಡರು. ಅದಕ್ಕಿಂತ ಮೊದಲು ಪಕ್ಷದ ವತಿಯಿಂದ ನಡೆದ ‘ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ’ ಕಾರ್ಯಕ್ರಮದಲ್ಲಿಯೂ ಅವರಿಬ್ಬರೂ ಭೇಟಿಯಾದರು.
ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ
ಸಂವಾದದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನಮ್ಮ ತಂದೆ ನಾಲ್ಕು ಬಾರಿ ಸಂಸದರಾಗಿದ್ದರು. ನಮಗೆ ಎಲ್ಲ ಪಕ್ಷದವರೊಂದಿಗೆ ಉತ್ತಮ ಸಂಬಂಧ ಇದೆ. ನನ್ನ ಪರಿಕಲ್ಪನೆಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಇದೆ ಎಂದು ಹೇಳಿದರು.
ʻʻಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಸಾಮಾನ್ಯ ಸಂಸದನ ರೀತಿಯಲ್ಲಿ ನಾನು ಕೆಲಸ ಮಾಡುತ್ತೇನೆ. ಆಧುನಿಕ ತಂತ್ರಜ್ಞಾನದ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದು. ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆʼʼ ಎಂದು ಅವರು ಹೇಳಿದರು.
ʻʻಜನರಿಗೆ ತುಂಬಾ ದೊಡ್ಡ ನಿರೀಕ್ಷೆ ಇದೆ ಅಂತ ಅನ್ನಿಸುತ್ತಿಲ್ಲ. ನಾನು ರಾಜ ಅಂತ ಹೇಳಿಕೊಂಡು ತಿರುಗುತ್ತಿಲ್ಲ. ಅರಮನೆಗೆ ಒಂದು ಪರಂಪರೆ ಇದೆ. ಅದನ್ನು ಹೊರತುಪಡಿಸಿ ನಾನು ಸಾಮಾನ್ಯನಾಗಿ ಇರುತ್ತೇನೆ. ನನ್ನನ್ನು ಸಂಸದ, ಪ್ರತಿನಿಧಿ ಏನು ಬೇಕಾದರೂ ಕರೆಯಿರಿʼʼ ಎಂದು ಹೇಳಿದ ಅವರು, ಬೆಂಗಳೂರು ಅರಮನೆಯ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಟ್ಟುಕೊಡುವ ವಿಚಾರ ಕಾನೂನಾತ್ಮಕವಾಗಿ ನಡೆಯುತ್ತದೆ ಎಂದರು
ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು 'ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ' ಕಾರ್ಯಕ್ರಮದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ. pic.twitter.com/9PXmF1svoi
— Pratap Simha (Modi Ka Parivar) (@mepratap) March 18, 2024
ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದವರಿಗೂ ದ್ರೋಹ ಮಾಡಲ್ಲ ಎಂದ ಪ್ರತಾಪ್ ಸಿಂಹ
ಯದುವೀರ್ ಒಡೆಯರ್ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ನಾವು ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕು. ಇದು ತುಂಬಾ ದೊಡ್ಡ ಕ್ಷೇತ್ರ. ಕಡಕೊಳದಿಂದ ಕರ್ಕಿವರೆಗೆ 200 ಕಿ.ಮೀ. ಹೋಗಬೇಕು. ಜನರನ್ನು ತಲುಪಲು ಮಾಧ್ಯಮ ಮುಖ್ಯ ಎಂದರು.
ಇದನ್ನೂ ಓದಿ : MP Pratap Simha : ಕೈ ಶಾಸಕ ತನ್ವೀರ್ ಸೇಠ್‌ಗೆ ಅಣ್ಣಾ ಎಂದ ಪ್ರತಾಪ್; ಹೌಹಾರಿದ ನೆಟ್ಟಿಗರು!
ಅದರ ಜತೆಗೇ, ʻʻನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದವರಿಗೂ ದ್ರೋಹ ಮಾಡಲ್ಲ. ನಾನು ಯದುವೀರ್ ಅಭ್ಯರ್ಥಿ ಆಗೋದಕ್ಕೂ ಮುಂಚೆ ಕೆಲ ಪ್ರಶ್ನೆ ಕೇಳಿದ್ದೆ. ರಾಜ ಅಥವಾ ರಾಜಕಾರಣಿ ಎರಡು ಪಾತ್ರ ನಿರ್ವಹಿಸಲು ಆಗುತ್ತಾ ಅಂತ ಕೇಳಿದ್ದೆ. ಅದಕ್ಕೆ ಯದುವೀರ್ ಈಗ ಉತ್ತರ ಕೊಟ್ಟಿದ್ದಾರೆ.”” ಎಂದು ಪ್ರತಾಪ್ ಹೇಳಿದರು. ಸಂವಾದ ವೇದಿಕೆಯಲ್ಲಿ ಯದುವೀರ್ ಮತ್ತು ಪ್ರತಾಪ್ ಸಿಂಹ ಅಕ್ಕಪಕ್ಕವೇ ಕೂತಿದ್ದರು.