Site icon Vistara News

MP Pratapsimha : ದೇವೇಗೌಡ್ರ ಜತೆ ಬಂದ ಪ್ರತಾಪ್‌ ಸಿಂಹ ಇನ್ನೂ ಮೈಸೂರು ತಲುಪಿಲ್ಲ!

MP Pratapsimha With HD Devegowda in flight

ಮೈಸೂರು: ನೂತನ ಸಂಸತ್‌ ಭವನದಲ್ಲಿ (New parliament building) ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಇಬ್ಬರು ಯುವಕರು ಒಳನುಗ್ಗಿ ಸ್ಮೋಕ್‌ ಕ್ಯಾನಿಸ್ಟರ್‌ ಸ್ಫೋಟ (Smoke canister Blast) ಮಾಡಿದ ಪ್ರಕರಣದಲ್ಲಿ (Security breach in Lokasabha) ಕೆಂಗಣ್ಣಿಗೆ ಗುರಿಯಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರು ಈಗೆಲ್ಲಿದ್ದಾರೆ?

ಸಂಸತ್‌ ದಾಳಿ ಬಳಿಕ ಮಾಧ್ಯಮಗಳ ಜತೆ ಬಹಿರಂಗವಾಗಿ ಏನೂ ಮಾತನಾಡದ, ಯಾವುದೇ ಹೇಳಿಕೆ ನೀಡದ ಪ್ರತಾಪ್‌ ಸಿಂಹ ಅವರು ಶುಕ್ರವಾರ ಸಂಜೆ ವಿಮಾನದಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರು ತಾವು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರೊಂದಿಗೆ (HD Devegowda) ‌ ಪ್ರಯಾಣಿಸಿರುವ ಒಂದು ಚಿತ್ರವನ್ನು ಹಾಕಿ ಟ್ವೀಟ್‌ ಮಾಡಿದ್ದರು. ಮಾಜಿ ಪ್ರಧಾನಿಗಳನ್ನು ಹಿಂದಿನಿಂದಲೂ ಗೌರವದಿಂದ ಕಾಣುತ್ತಿರುವ ಅವರು ಈ ಚಿತ್ರಕ್ಕೆ ರೆಸ್ಪೆಕ್ಟ್‌ ಎಂದು ಕ್ಯಾಪ್ಶನ್‌ ಹಾಕಿದ್ದರು. ದೇವೇಗೌಡರು ಕೂಡಾ ಮನಸಾರೆ ನಕ್ಕ ಈ ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ, ಹಾಗೆ ಬೆಂಗಳೂರಿಗೆ ಬಂದ ಪ್ರತಾಪ್‌ ಸಿಂಹ ಅವರು ಶನಿವಾರ ಬೆಳಗ್ಗಿನ ವರೆಗೂ ಮೈಸೂರಿನ ತಮ್ಮ ನಿವಾಸಕ್ಕೆ ಬಂದಿಲ್ಲ!

ಶುಕ್ರವಾರ ಸಂಜೆ ವಿಮಾನ ನಿಲ್ದಾಣದಿಂದ ಹೊರಗೆ ಬರುವಾಗ ಮಾಧ್ಯಮದವರು ಅವರ ಹೇಳಿಕೆ ಪಡೆಯಲು ಮುಂದಾದಾಗ ಏನೂ ಹೇಳಲು ಬಯಸಲಿಲ್ಲ ಪ್ರತಾಪ್‌ ಸಿಂಹ. ಕೊನೆಗೆ ಕೆಲವು ಪತ್ರಕರ್ತರು ಅವರನ್ನು ಬೆನ್ನಟ್ಟಿಕೊಂಡು ಹೋದಾಗ ʻದಯವಿಟ್ಟು ಚೇಸ್‌ ಮಾಡಬೇಡಿ ಬ್ರದರ್‌ʼ ಎಂದು ಮನವಿ ಮಾಡಿಕೊಂಡು ಬಳಿಕ ಕಾರು ಹತ್ತಿ ಹೋಗಿದ್ದರು. ಆದರೆ, ಅವರು ಇನ್ನೂ ಮೈಸೂರು ತಲುಪಿಲ್ಲ. ಹೀಗಾಗಿ ವಿಜಯನಗರದಲ್ಲಿರುವ ನಿವಾಸ ಖಾಲಿ ಖಾಲಿಯಾಗಿದೆ. ಈಗ ಮೈಸೂರಿಗೂ ಬಂದಿಲ್ಲ, ಎಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ಅವರು ಬೆಂಗಳೂರಿನಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ.

ಎಲ್ಲರ ಕೆಂಗಣ್ಣಿಗೆ ಗುರಿಯಾದ ಪ್ರತಾಪ್‌ ಸಿಂಹ

ಲೋಕಸಭೆಯಲ್ಲಿ ದಾಂಧಲೆ ನಡೆಸಿದ ಪ್ರಮುಖ ದಾಳಿಕೋರ ಸಾಗರ್‌ ಶರ್ಮನಿಗೆ ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಲೋಕಸಭೆಯ ಗ್ಯಾಲರಿ ಪ್ರವೇಶದ ಪಾಸ್‌ ನೀಡಲಾಗಿದ್ದು ಬೆಳಕಿಗೆ ಬಂದ ಬಳಿಕ ಸಂಸದರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೈಸೂರು ನಿವಾಸಿಯಾಗಿರುವ ಮನೋರಂಜನ್‌ ಎಂಬ ಇನ್ನೊಬ್ಬ ದಾಳಿಕೋರನ ತಂದೆಯ ಪರಿಚಯದ ಆಧಾರದಲ್ಲಿ ಸಂಸದರ ಕಚೇರಿಯಿಂದ ಈ ಪಾಸ್‌ ನೀಡಲಾಗಿತ್ತು. ಆದರೆ, ಸಾಗರ್‌ ಶರ್ಮ ಅದನ್ನು ದುರುಪಯೋಗ ಮಾಡಿಕೊಂಡಿದ್ದ. ಭದ್ರತಾ ಲೋಪಕ್ಕೆ ಸಂಸದ ಪ್ರತಾಪ್‌ ಸಿಂಹ ಅವರೇ ಹೊಣೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಮಾತ್ರವಲ್ಲ, ಪ್ರತಾಪ್‌ ಸಿಂಹ ಅವರನ್ನು ಸಂಸದನ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸುತ್ತಿವೆ. ಈ ವಿದ್ಯಮಾನಗಳು ಬಿಜೆಪಿಗೆ ಭಾರಿ ಮುಜುಗರವನ್ನು ಉಂಟು ಮಾಡಿವೆ.

ಇದನ್ನೂ ಓದಿ: Security Breach in Lok Sabha: ಬಾಗಲಕೋಟೆಯಲ್ಲಿ ಮನೋರಂಜನ್ ಸ್ನೇಹಿತ ದೆಹಲಿ ಪೊಲೀಸರ ವಶಕ್ಕೆ

ಈ ಘಟನಾವಳಿ ಬಗ್ಗೆ ಪ್ರತಾಪ್‌ಸಿಂಹ ಸಾರ್ವಜನಿಕವಾಗಿ ಮಾತನಾಡಿಲ್ಲ. ಆದರೆ, ಸ್ಪೀಕರ್‌ ಹಾಗೂ ಲೋಕಸಭಾ ಸಚಿವಾಲಯಕ್ಕೆ ಅವರು ವಿವರಣೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದರು.

ಈ ನಡುವೆ ಮೈಸೂರಿನಲ್ಲಿ ಮನೋರಂಜನ್‌ ಕುಟುಂಬದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮನೋರಂಜನ್‌ಗೆ ಆಪ್ತನಾಗಿದ್ದ ಸೆಲೂನ್‌ ಅಂಗಡಿ ಮಾಲೀಕ ಸೂರಪ್ಪನ ವಿಚಾರಣೆಯೂ ನಡೆಯುತ್ತಿದೆ. ಆರಂಭದಲ್ಲಿ ಸೂರಪ್ಪ ತನಗೆ ಮನೋರಂಜನ್‌ ಗೊತ್ತೇ ಇಲ್ಲ ಎಂದು ಹೇಳಿದ್ದ. ಆದರೆ, ಆತನ ಜತೆಗೆ ನಡೆದ ಹಣಕಾಸಿನ ವ್ಯವಹಾರಗಳ ಸುಳಿವು ಸಿಕ್ಕಾಗ ಹೌದು ಎಂದು ಒಪ್ಪಿಕೊಂಡಿದ್ದ.

Exit mobile version