ಮೈಸೂರು: ಮುಡಾದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ (MUDA Scam) ಅಧಿಕಾರಿಗಳ ಕಳ್ಳಾಟ ಬಗೆದಷ್ಟೂ ಹೊರಗೆ ಬರುತ್ತಿದೆ. ಇನ್ನೊಂದು ವಿಚಿತ್ರ ಪ್ರಕರಣ ಬಯಲಿಗೆ ಬಂದಿದ್ದು, ಇಲ್ಲದ ವ್ಯಕ್ತಿಯನ್ನು ಸೃಷ್ಟಿಸಿ ಆ ಹೆಸರಿನಲ್ಲಿ ಅಧಿಕಾರಿಗಳು ಬದಲಿ ನಿವೇಶನ (MUDA Site) ಪಡೆದರೇ ಎಂಬ ಅನುಮಾನ ಮೂಡಿದೆ.
ಅಧಿಕಾರಿಗಳ ಪ್ರಕಾರ 8ನೇ ವಯಸ್ಸಿನಲ್ಲೇ ಭೂಮಿ ಕಳೆದುಕೊಂಡ ಮಾಲೀಕ, ತನ್ನ 68ನೇ ವರ್ಷದಲ್ಲಿ ಬದಲಿ ನಿವೇಶನಕ್ಕಾಗಿ ಮುಡಾಗೆ ಅರ್ಜಿ ಸಲ್ಲಿಸಿದ್ದಾನೆ. ಮೈಸೂರಿನ ಅಬ್ದುಲ್ ವಾಹಿದ್ ಎಂಬವರಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, 1962ರಲ್ಲಿ ಭೂಮಿ ಅಬ್ದುಲ್ ವಾಹಿದ್ ಕಳೆದುಕೊಂಡಿದ್ದಾರಂತೆ. ಈತನಿಗೆ ಸೇರಿದ ಬೆಲವತ್ತ ಗ್ರಾಮದ ಸರ್ವೆ ನಂ.21ರ 4.39 ಎಕರೆ ಭೂಮಿ ಮುಡಾ ವಶಪಡಿಸಿಕೊಂಡಿತ್ತು.
ಹೀಗಾಗಿ ಅಬ್ದುಲ್ ವಾಹಿದ್ ಹೆಸರಿನಲ್ಲಿ ಬದಲಿ ನಿವೇಶನಕ್ಕಾಗಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ವೇಳೆ, 7-8 ವಯಸ್ಸಿನ ವ್ಯಕ್ತಿ RTC ಹೊಂದಿರಲು ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇದನ್ನು ಮುಡಾ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ನ್ಯಾಯಮೂರ್ತಿಗಳು ಬದಲಾಗುತ್ತಿದ್ದಂತೆ ವ್ಯಕ್ತಿ ರಿಟ್ ಅರ್ಜಿ ವಾಪಸ್ಸು ಪಡೆದಿದ್ದಾರೆ. ನಂತರ 28-02-2023ರಂದು ಮುಡಾದಿಂದಲೇ ಆದೇಶ ಮಾಡಿಸಿಕೊಂಡು 55,260 ಚದರ ಅಡಿ ಬದಲಿ ನಿವೇಶ ಪಡೆದಿದ್ದಾರೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಪ್ರಕರಣದಲ್ಲಿ ಮೂಡಿರುವ ಅನುಮಾನಗಳು
1) ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದರೂ ಅಧಿಕಾರಿಗಳು ಏಕೆ ತನಿಖೆ ಮಾಡಲಿಲ್ಲ?
2) ಒಬ್ಬ ವ್ಯಕ್ತಿಗೆ 7-8ನೇ ವಯಸ್ಸಿನಲ್ಲೆ RTC ಇರಲು ಸಾಧ್ಯವಾ?
3) ಮೈನರ್ ಆಗಿದ್ದು ಆರ್‌ಟಿಸಿ ಇದ್ದಿದ್ದರೆ ಜಂಟಿ ಹೆಸರು ಯಾರಾದರೂ ಇರಬೇಕಲ್ವಾ?
4) RTC ಇದ್ದರೂ 68ನೇ ವಯಸ್ಸಿನ ವರೆಗೆ ಯಾಕಾಗಿ ಪರಿಹಾರ ಪಡೆದಿಲ್ಲ/ ಪರಿಹಾರಕ್ಕೆ ಅರ್ಜಿ ಹಾಕಿಲ್ಲ?
5) ಆಧಾರ್ ಕಾರ್ಡ್‌ನಲ್ಲಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಅಂತ ವಿಳಾಸವಿದೆ. ಉದಯಗಿರಿ ಪೋಸ್ಟ್ ಎಂದು ನಮೂದಾಗಿದ್ದರೂ ಯಾಕಾಗಿ ಪರಿಶೀಲನೆ ಮಾಡಿಲ್ಲ?
ಯಾರು ಬೇಕಾದರೂ ಬಯ್ಯಲಿ, ನೀರು ಬೆಲೆ ಏರಿಕೆ ಮಾಡೋನೇ ನಾನು: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡಲೇಬೇಕಿದೆ. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಸುವವನೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ ಸಭೆ ಮತ್ತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಇಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಈ ವಿಷಯ ಇಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಾಗರಿಕರಿಗೆ ಎಷ್ಟು ಮಾಡಿದರೂ ಅಷ್ಟೆ, ಅವರಿಗೆ ಉಪಕಾರ ಸ್ಮರಣೆ ಇಲ್ಲ. ಬೈತಾರೆ, ಕಾಮೆಂಟ್ ಮಾಡ್ತಾರೆ, ವಾಟ್ಸ್ಯಾಪ್‌ನಲ್ಲಿ ಹಾಕ್ತಾರೆ. ನಂತರ ಮರೆತು ಬಿಡ್ತಾರೆ. ನೀರು ಕೊಟ್ಟರೆ ತಗೋತಾರೆ ಅಷ್ಟೆ. ಕೆಲವರು ದುಡ್ಡು ಕಟ್ಟುವವರು ಕಟ್ಟುತ್ತಾರೆ, ಕೆಲವರು ಕಟ್ಟಲ್ಲ. ಮೀಡಿಯಾದವರಾದರೂ ಬೈಯಲಿ, ಜನರಾದರೂ ಬಯ್ಯಲಿ, ವಿರೋಧ ಪಕ್ಷದವರಾದರೂ ವಿರೋಧ ಮಾಡಲಿ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ನೀರಿನ ದರ ಸಾಕಷ್ಟು ವರ್ಷದಿಂದ ಏರಿಸಿಲ್ಲ. 1.40 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಮೇಕೆದಾಟು ಯೋಜನೆ ಬಗ್ಗೆ ನನಗೆ ಭರವಸೆ ಇದ್ದು, ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯೂ ಇದ್ದು ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ. ಎತ್ತಿನ ಹೊಳೆ ಯೋಜನೆಯೂ ಒಂದು ಹಂತದಲ್ಲಿ ಇದೆ. ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀನಲ್ಲಿ ಯಾರೂ ಬೋರ್‌ವೆಲ್ ಕೊರೆಯುವಂತಿಲ್ಲ. ಯಾರೂ ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ರಾಜ್ಯಪಾಲರು ಸಹಿ ಹಾಕಿದ್ದಾರೆ, ಹೊಸ ಕಾನೂನು ಬಂದಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್