ಮೈಸೂರು: ಬೆಳ್ಳಿಯ ಆಸೆಗಾಗಿ ತನಗೆ ಕೆಲಸ ಕೊಡಿಸಿದ ಸ್ನೇಹಿತನನ್ನೇ ಕೊಂದು ಹಾಕಿದ ರಾಜಸ್ಥಾನ ಮೂಲದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ 27ರಂದು ಗೋವಿಂದ ಎಂಬ ಮೂವತ್ತು ವರ್ಷದ ಕಾರ್ಮಿಕನ ಕೊಲೆಯಾಗಿತ್ತು. ಆತನ ಜತೆಗಿದ್ದ ಅರ್ಜುನ್ ಕುಮಾರ್ ಎಂಬಾತ ಈ ಕೊಲೆ ಮಾಡಿದ್ದ ಎಂದು ಪೊಲೀಸರು ಸ್ಪಷ್ಟಪಡಿಸಿಕೊಂಡಿದ್ದರು. ಯಾಕೆಂದರೆ ಆತ ಸುಮಾರು 14 ಕೆಜಿ ಬೆಳ್ಳಿಯನ್ನು ಈ ವೇಳೆ ಅಪಹರಿಸಿ ಪರಾರಿಯಾಗಿದ್ದ,.
ಆಗಿದ್ದೇನು?
ಮೈಸೂರಿನ ಬೇರುಮಲ್ ಜೈನ್ ಎಂಬವರು ಸುಮತಿನಾಥ ಜೈನ ಮಂದಿರಕ್ಕೆ ಬೆಳ್ಳಿ ಕೆಲಸ ಮಾಡಲು ಗೋವಿಂದ ಎಂಬಾತನನ್ನು ನೇಮಿಸಿದ್ದರು. ಈ ನಡುವೆ ಗೋವಿಂದ ತನ್ನ ಪರಿಚಿತನೇ ಆಗಿದ್ದ ಅರ್ಜುನ್ ಕುಮಾರ್ (28) ಎಂಬಾತನನ್ನು ತನ್ನ ಕೆಲಸಕ್ಕೆ ಸಹಾಯಕನಾಗಿ ಕರೆಸಿಕೊಂಡಿದ್ದ. ಈ ನಡುವೆ, ಮಂದಿರದ ಕೆಲಸಕ್ಕೆ ಬೇರುಮಲ್ ಜೈನ್ ಅವರು 14 ಕೆಜಿ ಬೆಳ್ಳಿಯನ್ನು ನೀಡಿದ್ದರು.
ಹಳ್ಳದಕೇರಿಯ ಬಳಿ ಉಳಿದುಕೊಂಡಿದ್ದ ಇಬ್ಬರೂ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಈ ನಡುವೆ ಬೆಳ್ಳಿಯ ಮೇಲೆ ಕಣ್ಣಿಟ್ಟಿದ್ದ ಅರ್ಜುನ್ ಕುಮಾರ್ ಏಪ್ರಿಲ್ 27ರಂದು ಗೋವಿಂದನನ್ನು ಕೊಲೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಜತೆ ತಲೆಮರೆಸಿಕೊಂಡಿದ್ದ. ಈ ಸಂಬಂಧ ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಅರ್ಜುನ್ ಕುಮಾರ್‌ನನ್ನು ಬಂದಿಸಿ 8 ಲಕ್ಷ ರೂ. ಮೌಲ್ಯದ 12 ಕೆ.ಜಿ. ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ –