ಮೈಸೂರು: ಮೈಸೂರಿನಲ್ಲೊಂದು ಅಮಾನುಷ ಕೃತ್ಯ ನಡೆದಿದೆ. ತಂದೆಯೇ ತನ್ನ ಒಂದೂವರೆ ವರ್ಷದ ಹಸುಗೂಸನ್ನು ಕೆರೆಗೆಸೆದು ಕೊಲೆ (Murder case, Father kills child) ಮಾಡಿದ್ದಾನೆ.
ಈತನ ಪತ್ನಿ ಮೂರನೇ ಹೆರಿಗೆಯ ನಂತರ ತೀರಿಕೊಂಡಿದ್ದಾರೆ. ತನ್ನ ಇನ್ನಿಬ್ಬರು ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ತಾಯಿಯ ಬಳಿ ಬಿಟ್ಟಿದ್ದ ಈ ಪಾತಕಿ, ಮೂರನೇ ಮಗುವನ್ನು ಕೊಲೆ ಮಾಡಿದ್ದಾನೆ.
ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಂದ ಪಾಪಿ ತಂದೆಯ ಹೆಸರು ಗಣೇಶ್. ಪಿರಿಯಾಪಟ್ಟಣ ತಾಲೂಕು ಮಾಕೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ದೊಡ್ಡಸನ್ನೆ ಗ್ರಾಮದಲ್ಲಿ ಗಣೇಶ್- ಲಕ್ಷ್ಮಿ ದಂಪತಿ ವಾಸವಿದ್ದರು. ದಂಪತಿಗೆ ಮೂರು ಮಕ್ಕಳಿದ್ದರು. ಗಣೇಶ್ ಪತ್ನಿ ಲಕ್ಷ್ಮಿ ಮೂರನೇ ಮಗುವಿನ ಹೆರಿಗೆ ವೇಳೆ ಸಾವನ್ನಪ್ಪಿದ್ದರು.
ಈ ಹಿಂದಿನ ಎರಡು ಹೆಣ್ಣು ಮಕ್ಕಳನ್ನು ತನ್ನಿಂದ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಈತ ಪತ್ನಿಯ ತಾಯಿ ಅಂಜನಮ್ಮ ಬಳಿ ಬಿಟ್ಟುಬಿಟ್ಟಿದ್ದ. ಗಂಡು ಮಗು ನನಗೆ ಬೇಕು, ಕೊಡುವುದಿಲ್ಲ ಎಂದು ಹೇಳಿ ತನ್ನೊಂದಿಗೆ ಕರೆತಂದಿದ್ದ ಗಣೇಶ್.
ಲಕ್ಷ್ಮಿ ಮೃತಳಾದ ಬಳಿಕ ಗಣೇಶ್ ಮಗುವಿನ ಜತೆ ಊರಿಗೆ ಬಂದು ತನ್ನ ತಾಯಿಯ ಜತೆ ವಾಸವಾಗಿದ್ದ. ಮಗುವಿನ ಆರೈಕೆಯನ್ನು ತಾಯಿಯ ಹೆಗಲಿಗೆ ಹೊರಿಸಿದ್ದ. ನಾಲ್ಕು ದಿನಗಳ ಹಿಂದೆ ತಾಯಿಯ ಜತೆಗೂ ಜಗಳವಾಡಿಕೊಂಡು ಮಗುವನ್ನು ತೆಗೆದುಕೊಂಡು ಹೋಗಿದ್ದ ಈತ ಬಳಿಕ ಶಿಶುವನ್ನು ಕೆರೆಯಲ್ಲಿ ಬಿಸಾಡಿ ಕೊಲೆ ಮಾಡಿದ್ದ. ಈ ಸಂಬಂಧ ಗಣೇಶ್ ಅತ್ತೆ ಅಂಜನಮ್ಮ ಅವರಿಂದ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನನ್ನು ಕೊಂದು ಚರಂಡಿಗೆಸೆದು ದೂರು ನೀಡಿದಳು!
ಬೆಂಗಳೂರು: ಸಂಪಿಗೆಹಳ್ಳಿಯಲ್ಲಿ ನಡೆದ ಬಿಹಾರಿ ಶಕೀಲ್ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪತ್ನಿಯೇ ತನ್ನ ಅಕ್ಕನ ಜತೆ ಸೇರಿ ಕೊಲೆ ಮಾಡಿರುವುದು ಬಯಲಾಗಿದೆ. ಈಕೆ ಗಂಡನ ಹತ್ಯೆ ಮಾಡಿ ಆತ ಕಾಣೆಯಾಗಿದ್ದಾನೆಂದು ಸ್ಟೇಷನ್‌ಗೆ ಬಂದು ದೂರು ನೀಡಿದ್ದಳು.
ಶಕೀಲ್ ಅಕ್ತಾರ್ ಎಂಬುದು ಕೊಲೆಯಾದಾತನ ಹೆಸರು. ಈತನ ಎರಡನೇ ಪತ್ನಿ ನಜೀರ್ ಖಾಟುನ್ (೨೫) ಹಾಗೂ ಆಕೆಯ ಅಕ್ಕ ಕಾಶ್ಮೀರಿ(೨೮) ಬಂಧಿತ ಆರೋಪಿಗಳು. ಸಂಪಿಗೆಹಳ್ಳಿಯ ಶಕೀಲ್ ನಿವಾಸದಲ್ಲಿ ಕೊಲೆ ನಡೆದಿತ್ತು. ಇಂದೇ ತಿಂಗಳ 9ರಂದು ರಾತ್ರಿ ಆರೋಪಿಗಳು ಬಿಹಾರಿ ಶಕೀಲ್‌ನ ಹತ್ಯೆ ಮಾಡಿದ್ದರು.
ಅಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಪಾತಕಿಗಳು, ಯಾರ ಗಮನಕ್ಕೂ ಬಾರದ ರೀತಿ ಕೊಲೆಗೆ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಮಂಚದ ಮೇಲೆ ಮಲಗಿದ್ದ ಶಕೀಲ್ ಎದೆ ಮೇಲೆ ಕುಳಿತ ಎರಡನೇ ಪತ್ನಿ ನಜೀರ್, ಆತನ ಕತ್ತು ಹಿಸುಕಿದ್ದಳು. ನಾದಿನಿ ಕಾಶ್ಮೀರಿ ಆತನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.
ಮಂಚದ ಮೇಲಿಂದ ಕೆಳಗೆ ಬಿದ್ದರೂ ಬಿಡದೆ ಕತ್ತು ಹಿಸುಕಿ ಇಬ್ಬರೂ ಕೊಲೆ ಮಾಡಿದ್ದರು. ಹತ್ಯೆ ಬಳಿಕ ಬೆಡ್ ಶೀಟ್‌ನಲ್ಲಿ ಶವವನ್ನು ಕಟ್ಟಿ, ಮಧ್ಯರಾತ್ರಿ ಭಾರಿ ಮಳೆಯ ನಡುವೆ ಶವ ಸಾಗಿಸಿ ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಪಿಟ್‌ಗೆ ಹಾಕಿ ಬಂದಿದ್ದರು. ಎರಡು ದಿನ ಬಿಟ್ಟು, ಗಂಡ ಕಾಣೆಯಾಗಿದ್ದಾನೆಂದು ಆಕೆಯೇ ಠಾಣೆಗೆ ಬಂದು ದೂರು ನೀಡಿದ್ದಳು.
ಅ.15ರಂದು ಕೆಟ್ಟವಾಸನೆ ಬರುತ್ತಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಪಿಟ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡಿದ್ದ ಸಂಪಿಗೇಹಳ್ಳಿ ಪೊಲೀಸರು ಸಹೋದರಿಯರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Soumya Vishwanathan: ಒಂದು ಟ್ಯಾಟೂ ಪತ್ರಕರ್ತೆ ಕೊಲೆಯ ಕೇಸ್ ಭೇದಿಸಿತು; ಸಿನಿಮೀಯ ಕತೆ ಇದು!