Site icon Vistara News

Murder case : ಬಾಳೆತೋಟದಲ್ಲಿತ್ತು ದಲಿತ ಮಹಿಳೆ ಶವ; ಕಾಲ್ಕಿತ್ತ ಮಾಲೀಕ, ಅತ್ಯಾಚಾರ ಶಂಕೆ

Murder case

ಮೈಸೂರು: ಬಾಳೆ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಶಶಿಕಲಾ (38) ಮೃತ ದುರ್ದೈವಿ.

ಗಟ್ಟವಾಡಿ ಗ್ರಾಮದ ನಂಜುಂಡಪ್ಪ @ ಸಿದ್ದಲಿಂಗಪ್ಪ ಎಂಬುವರ ಬಾಳೆ ತೋಟದಲ್ಲಿ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡು, ಕಾರಿನ ಮ್ಯಾಟ್ ಸೇರಿ ಹಲವು ವಸ್ತುಗಳು ಸಿಕ್ಕಿವೆ. ಖಾಸಗಿ ಕಂಪನಿಯಲ್ಲಿ ಶಶಿಕಲಾ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ ಬರುತ್ತಿದ್ದರು.

ಇದನ್ನೂ ಓದಿ: Road Accident : ಮಡಿಕೇರಿಯಲ್ಲಿ ಕಾರು-ಬಸ್‌ ಡಿಕ್ಕಿ; ಅಶ್ವಮೇಧದ ಎದುರು ಛಿದ್ರಗೊಂಡ ಕಾರು

ಆದರೆ ನಿನ್ನೆ ಶುಕ್ರವಾರ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಫೋನ್ ಮಾಡಿದ ನಂಜುಂಡಪ್ಪ ತನ್ನ ಬಾಳೆ ತೋಟದಲ್ಲಿ ಶಶಿಕಲಾ ನೇಣು ಹಾಕಿಕೊಂಡಿದ್ದಾಳೆ ಎಂದು ವಿಷಯ ತಿಳಿಸಿದ್ದ. ಬಳಿಕ ಬಾಳೆ ತೋಟದ ಮಾಲೀಕ ನಂಜುಂಡಪ್ಪ ಗ್ರಾಮದಿಂದ ನಾಪತ್ತೆಯಾಗಿದ್ದಾನೆ.

ಹೀಗಾಗಿ ಮೃತಳ ಸಹೋದರ ಮಹದೇವಯ್ಯ ನಂಜುಂಡಪ್ಪ ವಿರುದ್ಧ ದೂರು ನೀಡಿದ್ದಾರೆ. ಸ್ಥಳಕ್ಕೆ ನಂಜನಗೂಡು ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನ್ಯ ವರ್ಗದ ವ್ಯಕ್ತಿ ದಲಿತ ಮಹಿಳೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸಂಘಟಕರ ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆರೋಪಿ ಹಾಗೂ ಮಹಿಳೆ ಪರಸ್ಪರ ಅನ್ಯ ವರ್ಗದವರು ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version