ಮೈಸೂರು: ಶತ್ರುವಿನ ಮೇಲಿನ ದ್ವೇಷದಿಂದ, ಆತನನ್ನು ಜೈಲಿಗೆ ಕಳಿಸಲೆಂದು ಸಂಚು ಹೂಡಿ ಸ್ನೇಹಿತನನ್ನೇ ಕೊಲೆಗೈದ (Murder Case) ಆಸಾಮಿಯನ್ನು ಪೊಲೀಸರು ಹಿಡಿದು ಒಳಗೆ ಹಾಕಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ (Mysore news) ನೇರಳೆಹುಂಡಿ ಗ್ರಾಮದಲ್ಲಿ ನಡೆದ ಯುವಕನ ಕೊಲೆಯ (crime news) ತನಿಖೆಯಲ್ಲಿ ಈ ಅನಿರೀಕ್ಷಿತ ತಿರುವು ದೊರೆತಿದೆ. ನೇರಳೆಹುಂಡಿ ಗ್ರಾಮದಲ್ಲಿ ಭಾನುಪ್ರಕಾಶ್ ಎಂಬ ಯುವಕನ ಕೊಲೆ ಆಗಿತ್ತು. ವಿವಾಹಿತೆಯೊಬ್ಬರಿಗೆ ಮೆಸೇಜ್ ಹಾಗೂ ಫೋನ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಯುವಕನ ಮೇಲೆ ಆ ಗೃಹಿಣಿಯ ಕುಟುಂಬದವರು ಗಲಾಟೆ ಮಾಡಿದ್ದರು. ನಂತರ ರಾಜಿ ಪಂಚಾಯಿತಿಯಲ್ಲಿ ಪ್ರಕರಣ ಮುಗಿಸಲಾಗಿತ್ತು.
ಮರುದಿನ ಯುವಕನ ಶವ ನಾಲೆಯ ಬಳಿ ಪತ್ತೆಯಾಗಿದ್ದು, ಗೃಹಿಣಿಯ ಕಡೆಯವರು ಕೊಲೆ ಮಾಡಿರಬಹುದು ಎಂಬ ಶಂಕೆ ಮೂಡಿತ್ತು. ಈ ಪ್ರಕರಣ ಸಂಬಂಧ, ಗಲಾಟೆ ಮಾಡಿದ್ದ 6 ಮಂದಿ ವಶಕ್ಕೆ ಪಡೆದು ವಿಚಾರಿಸಲಾಗಿತ್ತು.
ಈ ಪ್ರಕರಣಕ್ಕೆ ಇದೀಗ ರೋಚಕ ತಿರುವು ದೊರೆತಿದೆ. ಕೊಲೆ ಮಾಡಿದವನು ಭಾನುಪ್ರಕಾಶ್‌ನ ಸ್ನೇಹಿತನಾದ ದಿನೇಶ್ ಎಂಬಾತ ಎಂಬುದು ಗೊತ್ತಾಗಿದೆ. ದಿನೇಶ್‌ಗೂ ಗೃಹಿಣಿಯ ಗಂಡ ಎನ್.ಪ್ರಕಾಶ್ ಎಂಬಾತನ ಮೇಲೆ ಹಳೆಯ ದ್ವೇಷವಿತ್ತು. ಹೀಗಾಗಿ ಈತ ತಾನೇ ಕೊಲೆ ಮಾಡಿ, ಎನ್.ಪ್ರಕಾಶ್ ಈ ಆರೋಪದಲ್ಲಿ ಜೈಲಿಗೆ ಹೋಗುತ್ತಾನೆ ಎಂದು ಊಹಿಸಿದ್ದ.
ಹೀಗಾಗಿ ಹಳೆ ದ್ವೇಷ ತೀರಿಸಿಕೊಳ್ಳಲು ದಿನೇಶ್ ಮತ್ತು ಆತನ ಗೆಳೆಯ ಭೀಮ ಜತೆ ಸೇರಿ ಭಾನುಪ್ರಕಾಶ್ ಕತ್ತು ಸೀಳಿ ಕೊಲೆ ಮಾಡಿದ್ದರು. ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು ಡ್ಯಾಗರ್ ಕಬಿನಿ ನದಿಗೆ ಬಿಸಾಕಿದ್ದರು. ಕೊಲೆಯಾದ ಜಾಗದ ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿ ದಿನೇಶ್ ಹಾಗೂ ಎನ್.ಪ್ರಕಾಶ್ ನಡುವೆ ಇದ್ದು ಹಳೆ ದ್ವೇಷ ಕಾರಣವೆಂಬುದು ಸ್ಪಷ್ಟವಾಗಿದೆ. ಇಬ್ಬರ ದ್ವೇಷದಲ್ಲಿ ಭಾನುಪ್ರಕಾಶ್ ಜೀವ ಕಳೆದುಕೊಂಡಿದ್ದಾನೆ. ಅಂತರಸಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Murder Case: ವಿವಾಹಿತೆಗೆ ಮೆಸೇಜ್ ಕಳಿಸಿದ ಯುವಕನ ಕೊಚ್ಚಿ ಕೊಲೆ