Site icon Vistara News

Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Torch Light Parade 2023

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ (Jumboo Savari) ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ (Torch Light Parade 2023) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot) ಚಾಲನೆ ನೀಡಿದರು. ಪೊಲೀಸ್‌ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಮೊದಲು ರಾಷ್ಟ್ರಗೀತೆಯನ್ನು (National Anthem) ನುಡಿಸುವ ಮೂಲಕ ಕವಾಯತು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಳಿ ಬಂದ ಕಿಂಗ್‌ ಪವರ್‌ ಅಶ್ವರೂಢ ಖಡ್ಗಧಾರಿ ಪ್ರಧಾನ ದಳಪತಿ ಕವಾಯತು ವರದಿಯನ್ನು ಅತಿಥಿಗಳಿಗೆ ಸಮರ್ಪಿಸಿದರು. ತರುವಾಯ ನಿಶ್ಚಳ ದಳಗಳ ಪರಿವೀಕ್ಷಣೆಗಾಗಿ ರಾಜ್ಯಪಾಲರನ್ನು ಆಹ್ವಾನಿಸಿದರು.

ಆಹ್ವಾನವನ್ನು ಒಪ್ಪಿ ಅಲಂಕೃತ ತೆರೆದ ವಾಹನವನ್ನು ಹತ್ತಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿವಿಧ ಸೇವಾದಳಗಳ ನಿಶ್ಚಳದಳಗಳ ಪರಿವೀಕ್ಷಣೆಯನ್ನು ನಡೆಸಿದರು. ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಿ. ಅವರು ರಾಜ್ಯಪಾಲರಿಗೆ ವ್ಯಕ್ತಿಪರಿವೀಕ್ಷಕರಾಗಿದ್ದರು.

ಇದಾದ ಬಳಿಕ 21 ಕುಶಾಲತೋಪುಗಳನ್ನು ಮೂರು ಹಂತಗಳಲ್ಲಿ ಸಿಡಿಸಲಾಯಿತು. ನಿಶ್ಚಳದ ದಳ ಅಶ್ವಪಡೆಗಳ ಒಂದೊಂದಾಗಿ ಮೂರು ಕುದುರೆಗಳು ಒಂದು ಸುತ್ತು ಸುತ್ತಿ ಬಂದ ಬಳಿಕ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮತ್ತೊಮ್ಮೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.

18 ತುಕಡಿಗಳಿಂದ ಪ್ರದರ್ಶನ

ಒಟ್ಟು 18 ತುಕಡಿಗಳು ಪ್ರದರ್ಶನ ತೋರಿದವು. ಈ ತುಕಡಿಗಳು ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೂಲಕ ಕೆಲವು ದಿನಗಳಿಂದ ತಾಲೀಮು ನಡೆಸಿವೆ. ಲಯಬದ್ಧ ಸಂಗೀತಕ್ಕೆ ಶಿಸ್ತುಬದ್ಧ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇತ್ತು. ಎದೆ ಸೆಟೆದು ಕೈಬೀಸಿ ಕಾಲನ್ನು ಜೋರಾಗಿ ನೆಲಕ್ಕೆ ಗುದ್ದಿ ಧೂಳೆಬ್ಬಿಸುತ್ತಾ ಆರಕ್ಷಕ ದಳದವರು ವೀರ ನಡಿಗೆ ಸಾಗುತ್ತಿದ್ದರೆ ಸೇರಿದ್ದ ಜನಸ್ತೋಮ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವರಾದ ವೆಂಕಟೇಶ್‌, ಶಿವರಾಜ್‌ ತಂಗಡಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಣ್ತುಂಬಿದ ಲೈಟಿಂಗ್‌

ಧ್ವನಿ ಬೆಳಕಿನ ಸಂಭ್ರಮ ಇದೇ ವೇಳೆ ಅನಾವರಣಗೊಳಿಸಲಾಯಿತು. ಧ್ವನಿ ಮೊದಲೋ ಬೆಳಕೋ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಡಿಎನ್‌ಎ ಸಹಯೋಗದಲ್ಲಿ ಧ್ವನಿ – ಬೆಳಕಿನ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ಮನ ಮುಟ್ಟಿದ ನೃತ್ಯ ರೂಪಕ

ಡಿಎನ್‌ಎ ಸಮೂಹದ ಮೂಲಕ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಜರಂಗಿ ಮೋಹನ್‌ ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಈ ವೇಳೆ ಐಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಲಾಯಿತು. ಜತೆಗೆ ಶಂಕರ್‌ ನಾಗ್‌ ಅಭಿನಯದ ಗೀತಾ ಸಿನಿಮಾದ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ರವಿಚಂದ್ರನ್‌ ಅಭಿನಯದ ಮಲ್ಲ ಸಿನಿಮಾದ “ಕರುನಾಡೇ ಕೈ ಚಾಚಿದೆ ನೋಡೇ..” ಹಾಡುಗಳಿಗೆ ಹೆಜ್ಜೆ ಹಾಕಲಾಯಿತು. ಬಳಿಕ ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾದ “ಪೈಲ್ವಾನ್‌” ಹಾಡಿನಗೆ ಮಲ್ಲಕಂಭ ಸಾಹಸ ಪ್ರದರ್ಶನವನ್ನು ಮಾಡುವ ಮೂಲಕ ಡ್ಯಾನ್ಸ್‌ ಮಾಡಲಾಯಿತು. ಇದಲ್ಲದೆ, ಶಿವರಾಜ್‌ಕುಮಾರ್‌ ಅಭಿನಯದ ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ ಹಾಗೂ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಸಿನಿಮಾದ “ಡಾನ್ಸ್‌ ವಿಥ್‌ ಅಪ್ಪು” ಹಾಡಿಗೂ ಹೆಜ್ಜೆ ಹಾಕಲಾಯಿತು. ಕೊನೆಯಲ್ಲಿ ಡಾ. ರಾಜಕುಮಾರ್‌ ಅಭಿನಯದ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡು ನೋಡುಗರ ಮನ ಗೆಲ್ಲುವಲ್ಲಿ ಯಶ ಕಂಡಿತು.

ಗಮನ ಸೆಳೆದ ಸಾಹಸ ಪ್ರದರ್ಶನ

ಕೊನೆಯಲ್ಲಿ ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು. ಒಂದೊಂದು ರೀತಿಯ ವಿಶಿಷ್ಟ ಸಾಹಸ ಪ್ರದರ್ಶನಗಳಿಗೂ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.

ನೂರಾರು ಜನ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು. ಇದೇ ವೇಳೆ ವೆಲ್‌ ಕಮ್‌ ಟು ಮೈಸೂರು ದಸರಾ, ಫೇರ್‌ ವೆಲ್‌ ಟು ದಸರಾ, ಸಿ ಯು ದಸರಾ ಇನ್ 2024 ಎಂಬಿತ್ಯಾದಿ ಸಂದೇಶಗಳು ಕಂಡು ಬಂದವು.

ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ

ಜೋಶ್‌ ಹೆಚ್ಚಿಸಿದ ಪೊಲೀಸ್‌ ಬ್ಯಾಂಡ್‌

ಈ ಮಧ್ಯೆ ಪೊಲೀಸ್‌ ಬ್ಯಾಂಡ್‌ನವರು ಪೊಲೀಸ್‌ ಹಾಗೂ ಸೈನಿಕ ಗೀತೆಗಳನ್ನು ಪ್ರಸ್ತುತಿಪಡಿಸಿದರು. “ಸಾರೇ ಜಹಾಸೇ ಅಚ್ಚಾ” ಸೇರಿದಂತೆ ಇನ್ನೂ ಹಲವು ಗೀತೆಯನ್ನು ಪೊಲೀಸ್‌ ಬ್ಯಾಂಡ್‌ನವರು ನುಡಿಸಿ ಗಮನ ಸೆಳೆದರು. ಸೇರಿದ್ದವರಿಗೆಲ್ಲರಿಗೂ ಒಮ್ಮೆ ದೇಶಭಕ್ತಿ ಗೀತೆಯ ಬೀಟ್‌ಗಳು ಜೋಶ್‌ ಅನ್ನು ಹೆಚ್ಚಿಸುತ್ತಿದ್ದವು.

Exit mobile version