Site icon Vistara News

Mysore Dasara : ರೋಮಾಂಚನ ಮೂಡಿಸಿದ ಜಟ್ಟಿ ಕಾಳಗ; ಕೆಲವೇ ಸೆಕೆಂಡ್‌ಗಳಲಿ ರಕ್ತ ಚಿಮ್ಮಿಸಿದ ಜಟ್ಟಿಗಳು

Vajra musti kalaga in mysore dasara

ಮೈಸೂರು: ಮೈಸೂರು ದಸರಾ ಉತ್ಸವದ (Mysore dasara) ಕೊನೇ ದಿನ ಸಾಂಸ್ಕೃತಿಕ ನಗರಿ ಮತ್ತಷ್ಟು ಕಳೆಗಟ್ಟಿದೆ. ವಿಜಯ ದಶಮಿಯ ಜಂಬೂಸವಾರಿ ಉತ್ಸವಕ್ಕೆ ಮುನ್ನ ಅರಮನೆಯ ವಿಧಿವಿಧಾನಗಳಲ್ಲಿ ಒಂದಾಗಿರುವ ವಜ್ರಮುಷ್ಟಿ (Vajramushti) ಜಟ್ಟಿ ಕಾಳಗವು ನೋಡುಗರನ್ನು ರೋಮಾಂಚನಗೊಳಿಸಿತು. ಚನ್ನಪ್ಪಟ್ಟಣದ ಪ್ರವೀಣ್ ಜಟ್ಟಿ ಮತ್ತು ಮೈಸೂರು ಪ್ರದೀಪ್ ಜಟ್ಟಿ ನಡುವೆ ಹಾಗೂ ಬೆಂಗಳೂರಿನ ಪ್ರಮೋದ್ ಜಟ್ಟಿ ಹಾಗೂ ಚಾಮರಾಜನಗರದ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆದಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ ರಕ್ತ ಚಿಮ್ಮುವ ಮೂಲಕ ವಜ್ರಮುಷ್ಠಿ ಕಾಳಗಕ್ಕೆ ತೆರೆಬಿದ್ದಿತು. ಸೇರಿದ್ದವರಲ್ಲಿ ಜಯದ ಉದ್ಘೋಷ ಮೊಳಗಿತು.

ಚನ್ನಪಟ್ಟಣದ ಪ್ರವೀಣ್‌ ಜಟ್ಟಿ ಅವರು 13 ಸೆಕೆಂಡ್‌ನಲ್ಲಿ ಎದುರಾಳಿಯ ರಕ್ತ ಚಿಮ್ಮಿಸುವ ಮೂಲಕ ವೀರತ್ವವನ್ನು ಪ್ರದರ್ಶನ ಮಾಡಿದರು. ಆದರೆ, ಈ ಬಾರಿ ಕೆಲವು ನಿಮಿಷಗಳ ಕಾಲ ಜಟ್ಟಿ ಕಾಳಗ ನಡೆಯುತ್ತದೆ ಎಂದು ಸುತ್ತಲೂ ವೀಕ್ಷಿಸುತ್ತಿದ್ದವರಿಗೆ ಮಾತ್ರ ತೀವ್ರ ನಿರಾಸೆಯಾಯಿತು.

ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಟ್ಟಿ ಹಾಗೂ ಜಟ್ಟಿಗಳಿಗೆ ಪೂಜೆ ಸಲ್ಲಿಸುವ ಮೂಲಕ ವಜ್ರಮುಷ್ಟಿ ಕಾಳಗಕ್ಕೆ ಚಾಲನೆ ನೀಡಿದರು. ಚಾಲನೆ ನೀಡುತ್ತಿದ್ದಂತೆ ಪ್ರವೀಣ್ ಜಟ್ಟಿ ಮತ್ತು ಪ್ರದೀಪ್ ಜಟ್ಟಿ ಹಾಗೂ ಪ್ರಮೋದ್ ಜಟ್ಟಿ ಮತ್ತು ವೆಂಕಟೇಶ್ ಜಟ್ಟಿ ಭಾರಿ ವೀರಾವೇಶದಿಂದ ಹೋರಾಟವನ್ನು ಪ್ರಾರಂಭಿಸಿದರು. ನೋಡುಗರು ಸಹ ಉಸಿರನ್ನು ಬಿಗಿ ಹಿಡಿದು ಕಾಯುತ್ತಿದ್ದರು. ಆದರೆ, ಕೇವಲ 13 ಸೆಕೆಂಡ್‌ ಆಗುತ್ತಿದ್ದಂತೆ ಚನ್ನಪಟ್ಟಣದ ಪ್ರವೀಣ್‌ ಜಟ್ಟಿ ಅವರು ತಮ್ಮ ಎದುರಾಳಿ ಪ್ರದೀಪ್ ಜಟ್ಟಿ ಅವರ ತಲೆಯಿಂದ ರಕ್ತವನ್ನು ಚಿಮ್ಮಿಸಿದರು. ಹೀಗಾಗಿ ಕೆಲವೇ ಸೆಕೆಂಡ್‌ಗಳಲ್ಲಿ ವಜ್ರಮುಷ್ಠಿ ಕಾಳಗವು ಸಮಾಪ್ತಿಯಾಯಿತು.

ಗ್ಯಾಲರಿಯಿಂದ ವೀಕ್ಷಣೆ

ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಹಾಗೂ ರಾಣಿ ತ್ರಿಷಿಕಾ ಕುಮಾರಿ ಒಡೆಯರ್‌, ಯುವ ರಾಜ ಆದ್ಯವೀರ್‌ ಒಡೆಯರ್‌ ಮತ್ತು ಕುಟುಂಬದವರು ಕುಸ್ತಿ ಕಾಳಗವನ್ನು ಅರಮನೆಯ ಗ್ಯಾಲರಿ ಮೂಲಕ ವೀಕ್ಷಿಸಿದರು.

ಜಟ್ಟಿಗಳ ಕೈಯಲ್ಲಿರುತ್ತದೆ ಮುಳ್ಳಿನ ಆಯುಧ

ಈ ಜಟ್ಟಿಗಳು ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿರುತ್ತಾರೆ. ಇಬ್ಬರೂ ಜಟ್ಟಿಗಳು ಕೈಯಲ್ಲಿ ʼವಜ್ರಮುಷ್ಟಿʼ ಎಂದು ಕರೆಯಲಾಗುವ ಆಯುಧವನ್ನು ಧರಿಸಿಕೊಂಡಿರುತ್ತಾರೆ. ಇದೊಂದು ಸಣ್ಣ ಮುಳ್ಳುಗಳಿರುವ ಉಪಕರಣ. ಇದರಿಂದ ಪರಸ್ಪರ ಪ್ರಹಾರ ಮಾಡಿಕೊಳ್ಳುತ್ತಾರೆ.

Exit mobile version