Site icon Vistara News

Mysore Dasara : ಪತಿ ಯದುವೀರ್‌ ಪೂಜಾ ಕಾರ್ಯವನ್ನು ಅರಮನೆ ಬಾಲ್ಕನಿಯಿಂದ ವಿಡಿಯೊ ಮಾಡಿದ ತ್ರಿಷಿಕಾ!

Ayudha pooja in Palace

ಮೈಸೂರು: ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ (Mysore dasara) ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ (Navratri Celebrations) 9ನೇ ದಿನವಾದ ಸೋಮವಾರ (ಅಕ್ಟೋಬರ್‌ 23) ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕವಾಗಿ ಆಯುಧ ಪೂಜೆ (Ayudha Puja) ನೆರವೇರಿಸಿದರು. ಈ ವೇಳೆ ಪತ್ನಿ, ರಾಣಿ ತ್ರಿಷಿಕಾ ಕುಮಾರಿ (Trishika Kumari Singh) ಅವರು ಅರಮನೆ ಬಾಲ್ಕನಿಯಲ್ಲಿ ನಿಂತು ಪತಿಯ ಪೂಜಾ ಕೈಂಕರ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಈ ವೇಳೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ (Pramoda Devi wadeyar) ಹಾಗೂ ಪುತ್ರ ಆದ್ಯವೀರ್‌ ಒಡೆಯರ್‌ ಸಹ ಅರಮನೆ ಗ್ಯಾಲರಿಯ ಮೂಲಕ ಪೂಜಾ ಕೈಂಕರ್ಯವನ್ನು ವೀಕ್ಷಿಸಿದರು. ಅತ್ತ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆ ಸವಾರಿ ತೊಟ್ಟಿಯಲ್ಲಿ ಪೂಜೆ ಸಲ್ಲಿಸಿದರು. ಪಟ್ಟದಕುದುರೆ, ಪಟ್ಟದಾನೆ, ಪಟ್ಟದ ಹಸುಗಳಿಗೆ ಮೊದಲ ಪೂಜೆ ಸಲ್ಲಿಸಿದ ತರುವಾಯ ರಾಜಮನೆತನದ ಆಯುಧಗಳಿಗೆ ಪೂಜೆ ಸಲ್ಲಿಸಿದರು.

ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಅವರಿಗೆ ವಿಡಿಯೊ ತೋರಿಸುತ್ತಿರುವ ರಾಣಿ ತ್ರಿಷಿಕಾ

ಈ ಎಲ್ಲ ದೃಶ್ಯಗಳನ್ನು ರಾಣಿ ತ್ರಿಷಿಕಾ ಸೇರಿದಂತೆ ರಾಜಮನೆತನದ ಹಲವರು ಬಾಲ್ಕನಿಯಲ್ಲಿ ನಿಂತು ವೀಕ್ಷಣೆ ಮಾಡಿದರು. ಈ ವೇಳೆ ಪುತ್ರ ಆದ್ಯವೀರ್‌ ಬಳಿ ತ್ರಿಷಿಕಾ ಕೆಲವು ಆಚರಣೆಯನ್ನು ವೀಕ್ಷಿಸುವಂತೆ ಹೇಳುತ್ತಿರುವುದು ಸಹ ಕಂಡು ಬಂತು.

ಕಾರು, ಫಿರಂಗಿ ಸಹಿತ ಆಯುಧಗಳಿಗೆ ಪೂಜೆ

ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಕುದುರೆ, ಹಸು, ವಾಹನಗಳಿಗೂ ಯದುವೀರ್ ಒಡೆಯರ್ ಅವರು ಪೂಜೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆಯೊಳಗೆ ಪಟ್ಟದ ಆನೆ, ಹಸು, ಕುದುರೆಯನ್ನು ಪೂಜೆಗಾಗಿ ಶೃಂಗರಿಸಿ ಸಿದ್ಧತೆ ಮಾಡಿಡಲಾಗಿತ್ತು. ಇನ್ನು ಅರಮನೆಯ 10 ಪಿರಂಗಿಗಳಿಗೂ ಪೂಜೆ ಸಲ್ಲಿಸಲಾಗಿದೆ. ಇನ್ನು ಯಧುವೀರ್‌ ಒಡೆಯರ್‌ ಅವರು ಬಳಕೆ ಮಾಡುವ ಕಾರುಗಳ ಸಹಿತ ರಾಜ ಮನೆತನದ ಕಾರುಗಳಿಗೂ ಯದುವೀರ್‌ ಒಡೆಯರ್‌ ಅವರು ಪೂಜೆ ಸಲ್ಲಿಸಿದ್ದಾರೆ.

ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನ

ಆಯುಧ ಪೂಜೆ ಹಿನ್ನೆಲೆಯಲ್ಲಿ ಮುಂಜಾನೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಜತೆಗೆ ಪಟ್ಟದ ಕತ್ತಿಯನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತರಲಾಗಿತ್ತು. ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ಅರಮನೆಗೆ ಕೊಂಡೊಯ್ಯಲಾಯಿತು. ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ತರಲಾಯಿತು.

ಪ್ರತಿ ವರ್ಷದಂತೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಚಂಡಿಕಾ ಹೋಮ ನಡೆಯಿತು. ನಾಡು ಸುಭಿಕ್ಷವಾಗಿರಲಿ, ಮಳೆ – ಬೆಳೆ ಉತ್ತಮವಾಗಿ ಆಗಲಿ ಎಂದು ಮಹಾರಾಜ ಯದುವೀರ್‌ ಒಡೆಯರ್‌ ಅವರು ಪ್ರಾರ್ಥಿಸಿದರು.

ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡ ತ್ರಿಷಿಕಾ

ಯದುವೀರ್‌ಗೆ ಗೌರವ ವಂದನೆ

ಮಹಾರಾಜ ಯದುವೀರ್ ಒಡೆಯರ್‌ ಅವರು ಖಾಸಾ ಆಯುಧಗಳಿಗೆ ಪೂಜೆ ಮುಗಿಸಿ ಕಲ್ಯಾಣ ಮಂಟಪದಿಂದ ಸವಾರಿ ತೊಟ್ಟಿಗೆ ಆಗಮಿಸಿದರು. ಈ ವೇಳೆ ಕಾಯೋ ಶ್ರೀ ಗೌರಿ ಎನ್ನುವ ಮೈಸೂರು ಸಂಸ್ಥಾನ ಗೀತೆಯನ್ನು ಪೊಲೀಸ್ ಬ್ಯಾಂಡ್‍ನವರು ನುಡಿಸಿದ್ದಾರೆ. ಯದುವೀರ್ ಅವರು ಈ ವೇಳೆ ಗೌರವ ವಂದನೆಯನ್ನು ಸ್ವೀಕರಿಸಿದರು.

ಪಟ್ಟದ ಆನೆ ಧನಂಜಯ, ನಿಶಾನೆ ಆನೆ ಅರ್ಜುನ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆ ಸೇರಿದಂತೆ ಸಾಲಾಗಿ ನಿಲ್ಲಿಸಲಾಗಿದ್ದ ರಾಜವಂಶಸ್ಥರು ಬಳಸುವ ವಾಹನಗಳಿಗೆ ಯದುವೀರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಪೂಜಾ ವಿಧಿವಿಧಾನ ಮುಗಿಸಿದರು.

Exit mobile version