Site icon Vistara News

Mysore Dasara : ಅರಮನೆಯಲ್ಲಿ ವಿಜಯದಶಮಿಗೆ ತೆರೆ, ಕಂಕಣ ಬಿಚ್ಚಿದ ಯದುವೀರ್‌; ಶೀಘ್ರ ಜಂಬೂ ಸವಾರಿ ಶುರು

Yaduveer Krishnadatta Chamaraja Wadiyar banni pooje

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ ಈಗ ಅಂತಿಮ ಘಟಕ್ಕೆ ಬಂದಿದೆ. ಅತ್ತ ವಜ್ರ ಮುಷ್ಠಿ ಕಾಳಗ ನಡೆಯುತ್ತಿದ್ದಂತೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ವಿಜಯ ಯಾತ್ರೆ (Vijaya Yatra) ನಡೆಸಿದ್ದಲ್ಲದೆ, ಬನ್ನಿ ಪೂಜೆಯನ್ನೂ (Banni Puja) ನೆರವೇರಿಸಿದರು. ಅಲ್ಲದೆ, ಕಂಕಣವನ್ನು ವಿಸರ್ಜನೆ ಮಾಡುವ ಮೂಲಕ ರಾಜಮನೆತನದ ವಿಜಯದಶಮಿ ಆಚರಣೆಗೆ (Vijayadashami Celebrations) ತೆರೆಬಿದ್ದಿದೆ.

ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಜತೆ ಯದುವೀರ್‌ ಅವರು ಮೆರವಣಿಗೆ ಹೊರಟರು. ಇದಕ್ಕಿಂತ ಮೊದಲು ಪಂಚಲೋಹದ ಪಲ್ಲಕ್ಕಿಗೆ ಪೂಜೆ ನೆರವೇರಿಸಿದರು. ಅಲ್ಲಿಂದ ಅರಮನೆ ಅಂಗಳದಲ್ಲಿರುವ ಭುವನೇಶ್ವರಿ ದೇವಸ್ಥಾನದಲ್ಲಿ ಪೂಜೆ‌ ಸಲ್ಲಿಸಿ, ದೇವಸ್ಥಾನದ ಒಳ ಆವರಣದಲ್ಲಿ ಇರುವ ಶಮಿ ವೃಕ್ಷಕ್ಕೆ ಪೂಜೆ‌ ಸಲ್ಲಿಸಿದರು.

Mysore Dasara Chamundi devi reaches Palace in a procession

ಭುವನೇಶ್ವರಿ ಮಂಟಪದಲ್ಲಿರುವ ಬನ್ನಿ ಮರಕ್ಕೆ ಶಾಸ್ತ್ರೋಕ್ತವಾಗಿ ಯದುವೀರ್‌ ಪೂಜೆ ಸಲ್ಲಿಸಿದರು. ಪಟ್ಟದ ಕತ್ತಿ ಹಿಡಿದು ವಿಜಯದಶಮಿ ಮೆರವಣಿಗೆ ಮಾಡಿದ ಅವರು ಬನ್ನಿಮರಕ್ಕೆ ಪದ್ಧತಿಯಂತೆ ಪೂಜೆಯನ್ನು ನೆರವೇರಿಸಿದರು.

Mysore Dasara Chamundi devi reaches Palace in a procession

ಪೂಜೆ ಬಳಿಕ ಅರಮನೆ ವಾಪಸ್ ಆದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣ ವಿಸರ್ಜನೆ‌ ಮಾಡಿದರು. ಆ ಮೂಲಕ ರಾಜ ಮನೆತನದ ವಿಜಯದಶಮಿ ಮುಕ್ತಾಯವಾಯಿತು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ನಂದಿ ಪೂಜೆ ನೆರವೇರಿದ ಬಳಿಕ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ.

Mysore Dasara Chamundi devi reaches Palace in a procession

ಅರಮನೆಯಲ್ಲಿ ಉತ್ತರ ಪೂಜೆ

ಇದಕ್ಕೂ ಮೊದಲು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಉತ್ತರ ಪೂಜೆಯನ್ನು ನೆರವೇರಿಸಿದರು. ಅರಮನೆ ಕಲ್ಯಾಣ ಮಂಟಪದಲ್ಲಿ ಈ ಉತ್ತರ ಪೂಜೆ ನಡೆಸಿದ್ದು, ರಾಜಪರಂಪರೆಯ ಪಟ್ಟದ ಕತ್ತಿ ಮೂಲಕ ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.

ಈ ವೇಳೆ ರಾಜ ಪುರೋಹಿತರಿಂದ ವೇದ ಘೋಷ‌ಗಳು ಮೊಳಗಿದವು. ನಾದ ಸ್ವರದ ಹಿಮ್ಮೇಳದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಲಾಗುತ್ತಿದೆ. ರಾಜ ಪೋಷಾಕಿನಲ್ಲಿ ಪರಿವಾರದವರು ಆಸೀನರಾಗಿದ್ದರು. ರಾಜ ಮಾತೆ ಪ್ರಮೋದಾ ದೇವಿ ಒಡೆಯರ್‌, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ, ರಾಣಿ ತ್ರಿಷಿಕಾ ಹಾಗೂ ಪುತ್ರ ಆದ್ಯವೀರ್‌ ಸೇರಿದಂತೆ ಹಲವಾರು ಮಂದಿ ಉತ್ತರ ಪೂಜೆಯನ್ನು ವೀಕ್ಷಿಸಿದರು.

Mysore Dasara Chamundi devi reaches Palace in a procession

ಮೆರವಣಿಗೆ ಮೂಲಕ ಅರಮನೆ ತಲುಪಿದ ತಾಯಿ ಚಾಮುಂಡಿ

ಇನ್ನು ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.

ಹಸಿರು ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

Mysore Dasara Chamundi devi reaches Palace in a procession

ಗಮನ ಸೆಳೆದ ನಾದಸ್ವರ, ವೇದಘೋಷಗಳು

ಮೆರವಣಿಗೆ ಮಾರ್ಗದುದ್ದಕ್ಕೂ ನಾದಸ್ವರ, ಪೊಲೀಸ್‌ ಬ್ಯಾಂಡ್‌, ಅಶ್ವದಳ, ಭಜನಾ ದಳ ಹಾಗೂ ವೇದಘೋಷಗಳು ಮೊಳಗಿದವು. ಮೆರವಣಿಗೆ ಉದ್ದಕ್ಕೂ ಕಲಾ ತಂಡಗಳು ಮೆರುಗನ್ನು ತಂದವು. ಕಂಸಾಳೆ ನೃತ್ಯ ಸೇರಿದಂತೆ ನಾದಸ್ವರಗಳು ಮೆರವಣಿಗೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಜಯಮಾರ್ತಾಂಡ ದ್ವಾರ ಮುಖಾಂತರ ಅರಮನೆ ಪ್ರವೇಶ ಮಾಡಿದ ಉತ್ಸವ ಮೂರ್ತಿಯನ್ನು ಪೂರ್ಣಕುಂಭ ಹೊತ್ತ ಮಹಿಳೆಯರು ಬರಮಾಡಿಕೊಂಡರು. ಈ ವೇಳೆ ಮೈಸೂರು ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.

ರಾಜವಂಶಸ್ಥರಿಗೆ ಉತ್ಸವ ಮೂರ್ತಿ ಹಸ್ತಾಂತರ

ಬೆಳ್ಳಿ ರಥದ ಮೂಲಕ ಅರಮನೆಯನ್ನು ಪ್ರವೇಶ ಮಾಡಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಜಿಲ್ಲಾಡಳಿತವು ರಾಜವಂಶಸ್ಥರಿಗೆ ಹಸ್ತಾಂತರ ಮಾಡಿತು. ಇನ್ನು ದಸರೆಯ ಕೊನೇ ದಿನ ಆಗಿದ್ದರಿಂದ ಭಾರಿ ಜನಸ್ತೋಮವೇ ಸೇರಿದೆ.

ಇದನ್ನೂ ಓದಿ: Mysore Dasara : ಮೆರವಣಿಗೆ ಮೂಲಕ ಅರಮನೆ ತಲುಪಿದ ತಾಯಿ ಚಾಮುಂಡಿ; ಜಂಬೂ ಸವಾರಿಗೆ ಕ್ಷಣಗಣನೆ

ನಂದಿ ಪೂಜೆಯೊಂದಿಗೆ ಜಂಬೂ ಸವಾರಿಗೆ ಚಾಲನೆ

ಮಧ್ಯಾಹ್ನ 1.46 ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಪೂಜೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಡಿಸಿಎಂ‌ ಡಿ.ಕೆ.ಶಿವಕುಮಾರ್ ಹಾಗೂ ಉದ್ಘಾಟಕ ಹಂಸಲೇಖ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ. ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ಈ ಪೂಜೆ ನಡೆಯಲಿದೆ. ನಂತರ ತೆರೆದ ವಾಹನದಲ್ಲಿ ಅರಮನೆ ಮುಂಭಾಗ ಬರಲಿರುವ ಸಿಎಂ ಹಾಗೂ ಸಚಿವರಿಂದ ಜಂಬೂ ಮೆರವಣಿಗೆಗೆ ಚಾಲನೆ ದೊರೆಯಲಿದೆ.

Exit mobile version