ಮೈಸೂರು: ಅಂತರಾಷ್ಟ್ರೀಯ ಯೋಗ ದಿನವನ್ನು ಅಚ್ಚುಕಟ್ಟಾಗಿ ಏರ್ಪಡಿಸುವ ಮೂಲಕ ಯೋಗ ನಗರಿ ಮೈಸೂರು ಜಗತ್ತಿನ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಅವರೇ ಕೇಂದ್ರ ಬಿಂದುವಾಗಿದ್ದರು. ಈ ಕಾರ್ಯಕ್ರಮವನ್ನು ಒಂದಿಷ್ಟೂ ಗೊಂದಲವಾಗದಂತೆ ಅಚ್ಚುಕಟ್ಟಾಗಿ ಆಯೋಜಿಸಿದ ಎಲ್ಲರಿಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೃತಜ್ಞತೆ ಹೇಳಿದ್ದಾರೆ.
ಇದನ್ನೂ ಓದಿ | ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ 10 ಯೋಗ ಸತ್ಯಗಳು
ಮಂಗಳವಾರ ಬೆಳಗ್ಗೆ ಸುಮಾರು 1 ಗಂಟೆ 15 ನಿಮಿಷಗಳ ಕಾಲ ನಡೆದ ಯೋಗ ಕಾರ್ಯಕ್ರಮದಲ್ಲಿ 15 ಸಾವಿರ ಜನ ಪಾಲ್ಗೊಂಡಿದ್ದರು.14 ಸಾವಿರ ಜನರಿಗೆ ಕ್ಯೂ ಆರ್ ಕೋಡ್ ಟಿಕೆಟ್ ಜನರೇಟ್ ಮಾಡಲಾಗಿತ್ತು. ಬೆಂಗಳೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳು ಹಾಗೂ ದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗದಿಂದ ಕೂಡ ಯೋಗ ಪಟುಗಳು ಆಗಮಿಸಿದ್ದರು. ವಿಶೇಷ ಎಂದರೆ ವಿಶೇಷಚೇತನರು, ತೃತೀಯ ಲಿಂಗಿಗಳು, ಪೌರ ಕಾರ್ಮಿಕರು, ಶಿಕ್ಷಕರು ಸೇರಿದಂತೆ 51 ವಿವಿಧ ವರ್ಗದವರು ಪ್ರಧಾನಿ ಜತೆ ಯೋಗ ಮಾಡಿದ್ದರು.
ಪ್ರಧಾನಿಯವರ ಎಲ್ಲ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲಾ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದು, ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಚತೆ, ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರೂಪಿಸುವಲ್ಲಿ ,ಭದ್ರತಾ ದೃಷ್ಟಿಯಿಂದ ಕರ್ನಾಟಕ ಪೊಲೀಸ್, ಕಾರ್ಯಕ್ರಮ ಆಯೋಜಿಸುವಲ್ಲಿ ಆಯುಷ್ ಇಲಾಖೆ ಶ್ರಮವಹಿಸಿ ಕೆಲಸ ಮಾಡಿದೆ ಎಂದು ಸೋಮಶೇಖರ್ ಪತ್ರಿಕಾಗೋಷ್ಠಿಯಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ | Yoga Day 2022 | ಯೋಗ ದಿನಂದು ವಿವಿಧ ಮಠಾಧೀಶರಿಂದಲೂ ಯೋಗ ಪ್ರದರ್ಶನ