Site icon Vistara News

Non veg food Row : ನಾನ್‌ ವೆಜ್‌ ತಿಂದು ಸುತ್ತೂರು ಗದ್ದುಗೆ ಭೇಟಿ; ಸಿದ್ದರಾಮಯ್ಯ ಸುತ್ತ ಮತ್ತೆ ವಿವಾದ

Non veg food row Siddaramaiah

ಬೆಂಗಳೂರು: ಮಾಂಸದ ಊಟ ಮಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಆಪಾದನೆಯಿಂದ ವಿವಾದಕ್ಕೆ (Non veg Food Row) ಒಳಗಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಇದೀಗ ಅಂಥಹುದೇ ಒಂದು ವಿವಾದ ಸುತ್ತಿಕೊಂಡಿದೆ. ಅವರು ಮತ್ತು ಇತರ ಕಾಂಗ್ರೆಸ್‌ ನಾಯಕರು ಮಾಂಸಾಹಾರ ಸೇವನೆ ಮಾಡಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದ ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ, ಸುತ್ತೂರು ಜಗದ್ಗುರುಗಳ ಗದ್ದುಗೆ ಭೇಟಿ ಮಾಡಿದ್ದಾರೆ. ಇದು ಆಕ್ಷೇಪಾರ್ಹ ಎಂದು ಬಿಜೆಪಿ ಹೇಳಿದೆ.

ಸಿಎಂ ಸಿದ್ದರಾಮಯ್ಯ ಅವರು ಬುಧವಾರ ದಿಲ್ಲಿಯಲ್ಲಿ ನಡೆದ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಮಧ್ಯಾಹ್ನ ಮಾಂಸದ ಊಟ ಮಾಡಿ ವಿಮಾನದಲ್ಲಿ ಬಂದು ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಹೀಗೆ ಮಾಂಸದೂಟ ಮಾಡಿದ ಬೆನ್ನಿಗೇ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಿದ್ದು, ಗದ್ದುಗೆ ಭೇಟಿ ಮಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಇದನ್ನೂ ಓದಿ : Parashurama Theme Park: ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಸಿಐಡಿ ತನಿಖೆಗೆ; ಸಿಎಂ ಆದೇಶ

Non veg food Row : ಮಾಂಸ ತಿಂದು ಸುತ್ತೂರಿನ ಪವಿತ್ರ ಗದ್ದುಗೆ ಭೇಟಿ ನಿಜಕ್ಕೂ ದುರಂತ ಎಂದ ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ನಾಯಕರು ಬುಧವಾರ ಮಧ್ಯಾಹ್ನ ದೆಹಲಿಯಲ್ಲಿ ಮಾಂಸಾಹಾರ ಸೇವಿಸಿ ರಾತ್ರಿ ಸುತ್ತೂರು ಜಗದ್ಗುರುಗಳ ಗದ್ದುಗೆಗೆ ಭೇಟಿ ಕೊಟ್ಟ ಕುರಿತಂತೆ ಗುರುವಾರ ಎಚ್‌. ಗೊಲ್ಲರ ಹಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಪ್ರಶ್ನಿಸಿದಾಗ, ಇದು ಖಂಡನೀಯ ಸಂಗತಿ ಎಂದರು.

‘ಇದು ಬಹಳ ದುರದೃಷ್ಟಕರ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅವರ ನಡವಳಿಕೆಯನ್ನು ಸಮಾಜ, ಪ್ರತಿಯೊಬ್ಬರೂ ಗಮನಿಸುತ್ತಾರೆ. ಈ ಘಟನೆ ನಿಜವಾಗಿಯೂ ಖಂಡನೀಯ. ಅದರಲ್ಲೂ ಸುತ್ತೂರಿನ ಪವಿತ್ರ ಗದ್ದುಗೆಗೆ ಭೇಟಿ ಕೊಟ್ಟದ್ದು ನಿಜವಾಗಲೂ ಒಂದು ದುರಂತ’ ಎಂದು ವಿಜಯೇಂದ್ರ ಹೇಳಿದರು.

ಯಾಕೆ ಪದೇಪದೆ ಇಂಥ ಘಟನೆ ನಡೆಯುತ್ತದೆ ಎಂದು ಅವರೇ ಉತ್ತರಿಸಬೇಕು. ಒಂದು ಕಡೆ ಭಾಷಣ ಮಾಡಿದ ಮುಖ್ಯಮಂತ್ರಿಯವರು ಅಣ್ಣ ಬಸವಣ್ಣನನ್ನು ನೆನಪು ಮಾಡಿಕೊಳ್ಳುತ್ತಾರೆ. ಅಂದರೆ, ಅವರ ನಡೆಗೂ ನುಡಿಗೂ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲ ಭಕ್ತರ ಭಾವನೆಗೆ ಧಕ್ಕೆ ಬರುವಂತೆ ಮುಖ್ಯಮಂತ್ರಿಗಳು ನಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Non veg food Row : ಮಾಂಸ ತಿಂದು ಗದ್ದುಗೆ ಭೇಟಿ ಮಾಡಬಾರದಿತ್ತು ಎಂದ ಶಾಸಕ ಶ್ರೀವತ್ಸ

ಸಿಎಂ ಸಿದ್ದರಾಮಯ್ಯ ಮತ್ತು ಇತರ ನಾಯಕರು ಸುತ್ತೂರು ಗದ್ದುಗೆಗೆ ಭೇಟಿ ನೀಡಿದ್ದು ಸರಿಯಲ್ಲ ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿದ್ದಾರೆ.

ʻʻಸಿದ್ದರಾಮಯ್ಯ ಅವರು ಆಗಾಗ ಈ ರೀತಿ ಅಪಚಾರ ಮಾಡುತ್ತಿರುತ್ತಾರೆ. ಧರ್ಮಸ್ಥಳದ ಮಂಜುನಾಥ ದರ್ಶನ ವಿಚಾರದಲ್ಲೂ ಅಪಚಾರ ಮಾಡಿದರು. ಆಗ ಮಾಂಸ ತಿಂದು ದೇವರ ದರ್ಶನ ಮಾಡಬಾರದಾ ಎಂದು ಕೇಳಿದ್ದರು. ಸುತ್ತೂರಿನ ಗದ್ದುಗೆ ಬಹಳ ಪವಿತ್ರವಾದ ಸ್ಥಳ. ಈ‌ ಬಾರಿ 25 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಶ್ರೀಗಳ ಗದ್ದುಗೆಗೆ ಈ ರೀತಿ ಮಾಡುತ್ತಿರುವುದು ದೊಡ್ಡ ಅಪಚಾರʼʼ ಎಂದು ಶ್ರೀವತ್ಸ ಹೇಳಿದರು.

ʻʻಮಾಂಸ ತಿಂದು ಗದ್ದುಗೆ ಪೂಜೆ ಮಾಡಿರುವುದು ಖಂಡನೀಯ. ಸಿದ್ದರಾಮಯ್ಯರು ಉಡಾಫೆಯಿಂದ ಈ ರೀತಿ ಮಾಡಿದ್ದಾರೆ. ನಾನು ಯಾವ ಕಾರ್ಯಕ್ರಮಕ್ಕೆ ಹೋಗುತ್ತೇನೆ ಅನ್ನೋದರ ಬಗ್ಗೆ ಅರಿವಿರಬೇಕುʼʼ ಎಂದಿದ್ದಾರೆ ಶಾಸಕ ಶ್ರೀವತ್ಸ.

ಮಾಡಿದ್ದು ಸರಿಯಲ್ಲ, ನಾನೇನೂ ಹೇಳಲ್ಲ ಎಂದ ಬಿ.ಎಸ್‌. ಯಡಿಯೂರಪ್ಪ

ಕಾಂಗ್ರೆಸ್‌ ನಾಯಕರು ಮಾಂಸ ತಿಂದು ಸುತ್ತೂರು ಮಠಕ್ಕೆ ಹೋದ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ. ಅದೆಲ್ಲ ಅವರವರಿಗೆ ಸಂಬಂಧ ಪಟ್ಟಿದ್ದು. ಆ ರೀತಿ ಮಾಡಿದ್ದು ಸರಿಯಲ್ಲʼʼ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Exit mobile version