Site icon Vistara News

Mysore dasara : ಜಂಬೂ ಸವಾರಿಯಲ್ಲಿ ಗಮನ ಸೆಳೆವ ಆಪರೇಶನ್‌ ಸ್ಪೆಷಲಿಸ್ಟ್ ಆನೆಗಳು! ಇಲ್ಲಿದೆ ಕಿರು ಪರಿಚಯ

Mysore Dasara Elephants and profiles

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು (Mysore dasara) ದಸರಾ ಮಹೋತ್ಸವದ ಅದ್ಧೂರಿ ತೆರೆಗೆ ಅಂತಿಮ ಸಿದ್ಧತೆಗಳು ನಡೆದಿವೆ. ಇನ್ನು ದಸರೆಯ ಕೊನೇ ದಿನ ಗಮನ ಸೆಳೆಯುವುದು ಎಂದರೆ ಜಂಬೂ ಸವಾರಿ (Jumboo Savari) ಆಗಿದೆ. ರಾಜ ಗಾಂಭೀರ್ಯದಿಂದ ಗಜಪಡೆಗಳು ಸಾಗುತ್ತಿದ್ದರೆ ಅವುಗಳನ್ನು ನೋಡುವುದೇ ಒಂದು ಅಂದ – ಚೆಂದ. ಅಂಬಾರಿಯನ್ನು ಎಂದಿನಂತೆ ಕ್ಯಾಪ್ಟನ್‌ ಅಭಿಮನ್ಯು (Captain Abhimanyu) ಹೊರಲಿದ್ದು, ಆತನ ಜತೆಗೆ ಉಳಿದ ಆನೆಗಳು ಹೆಜ್ಜೆ ಹಾಕಲಿವೆ. ಇಲ್ಲಿ ಒಂದು ವೈಶಿಷ್ಟ್ಯವೆಂದರೆ ಇಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಹುತೇಕ ಆನೆಗಳು ಸಾಕಷ್ಟು ಪಳಗಿವೆ. ಇನ್ನು ಅನೇಕ ಕಾಡಾನೆಗಳನ್ನು ಪಳಗಿಸಿವೆ. ಕಾಡಾನೆಗಳ, ಕಾಡುಪ್ರಾಣಿಗಳ ಸೆರೆ ಹಿಡಿಯಲು ನಡೆಸುವ ಆಪರೇಷನ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಗಜರಾಜಗಳು ಜಂಬೂ ಸವಾರಿಯಲ್ಲಿ ಹೆಚ್ಚಿವೆ.

24-10-2023ರ ಮಂಗಳವಾರದಂದು ವಿಜಯದಶಮಿ ನಡೆಯಲಿದೆ. ಅಂದು ಸಂಜೆ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಗಣ್ಯರಿಂದ ಅಂಬಾರಿಯಲ್ಲಿರುವ ಚಾಮುಂಡಿ ತಾಯಿಗೆ (Devi Chamundeshwari) ಪುಷ್ಪಾರ್ಚನೆ ನಡೆಯಲಿದೆ. ನಂತರ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ.

ಇದನ್ನೂ ಓದಿ: Mysore Dasara : ಜಂಬೂ ಸವಾರಿ ಗಜಪಡೆಗೆ ವಿಮೆ; ಜೀವಹಾನಿಯಾದರೆ 50 ಲಕ್ಷ ರೂ. ಇನ್ಶುರೆನ್ಸ್‌

ಗಜಪಡೆಗಳ ಬಗ್ಗೆ ಸಂಕ್ಷಿಪ್ತ ನೋಟ

ಈಗ ಜಂಬೂ ಸವಾರಿಯಲ್ಲಿ ಸಾಗುವ ಪ್ರಮುಖ ಆನೆಗಳ ಸಂಕ್ಷಿಪ್ತ ವಿವರವನ್ನು ನೋಡುವುದಾದರೆ ಒಬ್ಬೊಬ್ಬರ ಹಿನ್ನೆಲೆ ಒಂದೊಂದು ರೀತಿ ಇದೆ. ಕ್ಯಾಪ್ಟನ್‌ ಅಭಿಮನ್ಯು ಕಾಡು ಪ್ರಾಣಿಗಳ ಕಾರ್ಯಾಚರಣೆ ಸ್ಪೆಷಲಿಸ್ಟ್‌ ಆಗಿದ್ದು, ಮೂರು ವರ್ಷಗಳಿಂದ ಚಿನ್ನದ ಅಂಬಾರಿ ಹೊರುತ್ತಾ ಬಂದಿದ್ದಾನೆ. ಅರ್ಜುನ ಸಹ ಚಿನ್ನದ ಅಂಬಾರಿಯನ್ನು ಹಲವು ವರ್ಷ ಹೊತ್ತ ಖ್ಯಾತಿಯನ್ನು ಹೊಂದಿದ್ದಾನೆ. ಧನಂಜಯನಿಗೆ ಇದು ಐದನೇ ದಸರಾವಾದರೆ, ಭೀಮನಿಗೆ ಮೂರನೇ, ಮಹೇಂದ್ರನಿಗಿದು ಎರಡನೇ ದಸರಾ ಆಗಿದೆ. ಈ ಬಾರಿ ನಾಲ್ಕು ಹೊಸ ಮುಖಗಳನ್ನು ಪರಿಚಯಿಸಲಾಗಿದೆ.

ಕ್ಯಾಪ್ಟನ್‌ ಅಭಿಮನ್ಯು

2012ರಿಂದ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಭಾಗವಹಿಸುತ್ತಿದ್ದಾನೆ. 2015ರವರೆಗೂ ಅಭಿಮನ್ಯು ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುತ್ತಿದ್ದ. ಕಳೆದ 3 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುತ್ತಿದ್ದಾನೆ. ಈತ ಆಪರೇಷನ್‌ ಸ್ಪೆಷಲಿಸ್ಟ್‌ ಆಗಿದ್ದು, ಮದವೇರಿದ ಸುಮಾರು 200 ಆನೆಗಳು ಹಾಗೂ ನಾಡಿಗೆ ಬರುವ ಸುಮಾರು 30ರಿಂದ 40 ಹುಲಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.

ಅರ್ಜುನ

ಅರ್ಜುನ ಸೆರೆ ಸಿಕ್ಕ ಆನೆಯಾಗಿದೆ. ಇವನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಸುಮಾರು 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಅರ್ಜುನ 2012ರಿಂದ 2019ರವರೆಗೆ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸಿದ್ದ.

ಧನಂಜಯ

ಧನಂಜಯನನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯದ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾ ಬಂದಿದೆ. ಕಳೆದ 4 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾ ಬರುತ್ತಿದೆ.

ಮಹೇಂದ್ರ

2022ರ ಶ್ರೀರಂಗಪಟ್ಟಣ ದಸರಾದಲ್ಲಿ ಮೊದಲ ಬಾರಿ ಅಂಬಾರಿಯನ್ನು ಹೊತ್ತಿರುವ ಖ್ಯಾತಿಯನ್ನು ಮಹೇಂದ್ರ ಹೊಂದಿದ್ದಾನೆ. ಕಾಡಾನೆ ಮತ್ತು ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾ ಬಂದಿರುವ ಮಹೇಂದ್ರ, ಈಗ ಎರಡನೆಯ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

ಇದನ್ನೂ ಓದಿ: Mysore Dasara : ಅ. 24ಕ್ಕೆ ಮೈಸೂರು ದಸರೆಗೆ ತೆರೆ; ಕಣ್ಮನ ಸೆಳೆಯಲಿವೆ ಜಂಬೂ ಸವಾರಿ, ಪಂಜಿನ ಕವಾಯತು

ಭೀಮ

ಭೀಮ ಸಹ ಸೆರೆ ಸಿಕ್ಕ ಆನೆಯಾಗಿದ್ದಾನೆ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲ್ಪಟ್ಟಿದ್ದ. ಈಗ ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದಾನೆ. ದಸರಾ ಮಹೋತ್ಸವದಲ್ಲಿ 2012ರಿಂದ ಭಾಗವಹಿಸುತ್ತಾ ಬಂದಿದ್ದರೂ ಇದು 3ನೇ ಬಾರಿಯಾಗಿದೆ.

ಗೋಪಿ

ಗೋಪಿ ಸಹ ಸೆರೆಹಿಡಿಯಲ್ಪಟ್ಟಿದ್ದಾನೆ. 1990ರಲ್ಲಿ ಹಾಸನದ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, 12ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2015ರಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದೆ.

ನಾಲ್ಕು ಆನೆಗಳಿಗೆ ಇದೇ ಮೊದಲ ದಸರಾ!

ಕಂಜನ್, ಲಕ್ಷ್ಮೀ, ರೋಹಿತ್‌, ಹಿರಣ್ಯರಿಗೆ ಇದು ಮೊದಲ ದಸರಾ ಆಗಿದೆ. ಅರ್ಜುನ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದ್ದರೆ, ರೋಹಿತ್ ಅತ್ಯಂತ ಕಿರಿಯ ವಯಸ್ಸಿನ ಆನೆಯಾಗಿದೆ. ಅಲ್ಲದೆ, ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿರುವ ಖ್ಯಾತಿಯನ್ನು ಹೊಂದಿದೆ. ಇದರ ಜತೆ ಜತೆಗೆ ಕಂಜನ್, ಲಕ್ಷ್ಮಿ, ಹಿರಣ್ಯ ಆನೆಗಳಿಗೂ ಇದೇ ಮೊದಲ ದಸರಾ ಜಂಬೂ ಸವಾರಿಯಾಗಿದೆ.

ಇದನ್ನೂ ಓದಿ: Mysore Dasara : ಅಂತಿಮ ಘಟ್ಟದತ್ತ ಮೈಸೂರು ದಸರಾ; ಅ. 23 – 24ರ ಅರಮನೆ ಕಾರ್ಯಕ್ರಮಗಳಿವು

ಜಂಬೂ ಸವಾರಿಯ ಗಜಪಡೆಗಳು – ವಯಸ್ಸು – ಆನೆ ಶಿಬಿರ – ಎತ್ತರ ಮತ್ತು ತೂಕ

1) ಅಭಿಮನ್ಯ – 57 ವರ್ಷ- ಮತ್ತಿಗೋಡು ಆನೆ ಶಿಬಿರ – 274 ಮೀ ಎತ್ತರ – 4,700ರಿಂದ 5,000 ಕೆಜಿ
2) ವಿಜಯ – 63 ವರ್ಷ – ದುಬಾರೆ ಆನೆ ಶಿಬಿರ – 244ಮೀ ಎತ್ತರ – 3,250ರಿಂದ 3,500 ಕೆಜಿ
3) ವರಲಕ್ಷ್ಮಿ – 67 ವರ್ಷ – ಭೀಮನಕಟ್ಟೆ ಆನೆ ಶಿಬಿರ – 236ಮೀ ಎತ್ತರ – 3,300ರಿಂದ 3,500 ಕೆಜಿ


4) ಅರ್ಜುನ – 65 ವರ್ಷ – ಬಳ್ಳೆ ಆನೆ ಶಿಬಿರ – 288ಮೀ ಎತ್ತರ, 5,800ರಿಂದ 6,000 ಕೆಜಿ
5) ಧನಂಜಯ – 43 ವರ್ಷ – ದುಬಾರೆ ಆನೆ ಶಿಬಿರ – 280 ಮೀ. ಎತ್ತರ – 4,000ರಿಂದ 4,200 ಕೆಜಿ
6) ಮಹೇಂದ್ರ – 40 ವರ್ಷ – ಮತ್ತಿಗೋಡು ಆನೆ ಶಿಬಿರ – 275ಮೀ ಎತ್ತರ – 3,800ರಿಂದ 4,000 ಕೆಜಿ


7) ಭೀಮ – 23 ವರ್ಷ – ಮತ್ತಿಗೋಡು ಆನೆ ಶಿಬಿರ – 285 ಮೀ ಎತ್ತರ – 3,800ರಿಂದ 4,000 ಕೆಜಿ
8) ಗೋಪಿ – 41 ವರ್ಷ – ದುಬಾರೆ ಆನೆ ಶಿಬಿರ – 286 ಮೀ ಎತ್ತರ – 3,700ರಿಂದ 3,800 ಕೆಜಿ
9) ಪ್ರಶಾಂತ್ – 50 ವರ್ಷ – ದುಬಾರೆ ಆನೆ ಶಿಬಿರ – 300 ಮೀ ಎತ್ತರ – 4000ರಿಂದ 4,200 ಕೆಜಿ

10) ಸುಗ್ರೀವ – 41 ವರ್ಷ – ದುಬಾರೆ ಆನೆ ಶಿಬಿರ – 277ಮೀ ಎತ್ತರ – 4,000ರಿಂದ 4,100 ಕೆಜಿ
11) ಕಂಜನ್ – 24 ವರ್ಷ – ದುಬಾರೆ ಆನೆ ಶಿಬಿರ – 262ಮೀ ಎತ್ತರ – 3,700ರಿಂದ 3,900 ಕೆಜಿ
12) ರೋಹಿತ್ – 21 ವರ್ಷ – ರಾಮಾಪುರ ಆನೆ ಶಿಬಿರ – 270 ಮೀ ಎತ್ತರ – 2,900ರಿಂದ 3,000 ಕೆಜಿ
13) ಲಕ್ಷ್ಮಿ – 52 ವರ್ಷ, ದೊಡ್ಡಹರವೆ ಆನೆ ಶಿಬಿರ – 252 ಮೀ. ಎತ್ತರ – 3,000ರಿಂದ 3,200 ಕೆಜಿ
14) ಹಿರಣ್ಯ – 46 ವರ್ಷ, ರಾಮಾಪುರ ಆನೆ ಶಿಬಿರ – 250ಮೀ ಎತ್ತರ – 3,000ರಿಂದ 3,200 ಕೆಜಿ

Exit mobile version