Site icon Vistara News

Operation Tiger : ಮಹಿಳೆ ಸಹಿತ ಇಬ್ಬರ ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್?

Operation Tiger in Nanjanagudu

ಮೈಸೂರು: ನವೆಂಬರ್‌ 25ರಂದು ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದ ರೈತ ಮಹಿಳೆ ರತ್ನಮ್ಮ (55) ಸೇರಿದಂತೆ ಒಂದೇ ತಿಂಗಳಲ್ಲಿ ಇಬ್ಬರು ದನಗಾಹಿಗಳನ್ನು ಬಲಿ ಪಡೆದ ನರಹಂತಕ ಹುಲಿಯನ್ನು (Killer Tiger) ಕೊನೆಗೂ ಸೆರೆ ಹಿಡಿಯಲಾಗಿದೆ (Tiger Captured). ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ನಡೆಸುತ್ತಿದ್ದ ಕಾರ್ಯಾಚರಣೆ (Operation Tiger) ಕೊನೆಗೂ ಸೋಮವಾರ ರಾತ್ರಿ 1.30ರ ಸುಮಾರಿಗೆ ಯಶಸ್ವಿಯಾಗಿದ್ದು, ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.

ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಹುಲಿ ಸೆರೆಯಾಗಿದೆ. ಗ್ರಾಮ ಹೊರವಲಯದಲ್ಲಿ ಹಸುವಿನ ಮಾಂಸವನ್ನು ಇಡಲಾಗಿತ್ತು. ಮತ್ತು ಅದರ ಬರುವಿಕೆಗಾಗಿ ಕಳೆದ ಕೆಲವು ದಿನಗಳಿಂದ ಕಾವಲು ಕಾಯಲಾಗುತ್ತಿತ್ತು. ಸೋಮವಾರ ರಾತ್ರಿ ಆಗಮಿಸಿದ ಹುಲಿ ಮಾಂಸಕ್ಕೆ ಬಾಯಿ ಹಾಕುತ್ತಿದ್ದಂತೆಯೇ ದೂರದಿಂದಲೇ ಅದಕ್ಕೆ ಅರಿವಳಿಕೆ ಔಷಧವನ್ನು ಶೂಟ್‌ ಮಾಡಲಾಯಿತು. ಹೊಡೆತ ತಿಂದ ಹುಲಿ ಸುಮಾರು ಒಂದು ಕಿಮೀ ದೂರದವರೆಗೆ ಸಾಗಿ ಕುಸಿದು ಬಿದ್ದಿದೆ. ಬಳಿಕ ಅದನ್ನು ಬೋನಿಗೆ ಹಾಕಿ ಸಾಗಿಸಲಾಗಿದೆ.

ಮೇ 25ರಂದು ಮಧ್ಯಾಹ್ನ ರತ್ನಮ್ಮ ಅವರು ದನ ಮೇಯಿಸಲು ಕಾಡಂಚಿಗೆ ತೆರಳಿದ್ದರು. ಈ ವೇಳೆ ಬಳ್ಳೂರು ಗ್ರಾಮದ ಹುಂಡಿಯಲ್ಲಿ ಹುಲಿ ಅವರ ಮೇಲೆ ಎರಗಿ ಕೊಂದು ಹಾಕಿತ್ತು. ಮಾತ್ರವಲ್ಲ, ಅವರ ದೇಹದ ಎಡಭಾಗವನ್ನು ತಿಂದು ಹಾಕಿತ್ತು. ಅದಕ್ಕಿಂತ ಮೊದಲು ಇಲ್ಲಿ ಹುಲಿ ಎರಡು ಬಾರಿ ದಾಳಿ ಮಾಡಿತ್ತು. ಒಮ್ಮೆ ಇನ್ನೊಬ್ಬ ದನಗಾಹಿಯನ್ನು ಕೊಂದು ಹಾಕಿತ್ತು.

ಹುಲಿಯನ್ನು ಹಿಡಿಯಲು ಬೋನನ್ನು ಸಿದ್ಧಪಡಿಸಲಾಗಿರುವುದು.

ಈ ಘಟನೆ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಇದಾದ ಬಳಿಕ ಅರಣ್ಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಬೇಟೆಗೆ ಶುರು ಮಾಡಿದ್ದರು. ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 200 ಸಿಬ್ಬಂದಿಗಳನ್ನು ಸೇರಿಸಿಕೊಂಡು ಕಾರ್ಯಾಚರಣೆ ಆರಂಭವಾಗಿತ್ತು.

ಹುಲಿಯ ಜಾಡನ್ನು ಪತ್ತೆ ಹಚ್ಚುವ ಕೆಲಸ, ಅದರ ಚಲನವಲನಗಳ ಮೇಲೆ ಕಣ್ಣಿಡುವ ಕೆಲಸ ನಡೆಯಿತು. ಡ್ರೋನ್‌ಗಳನ್ನು ಬಳಸಿ ಆ ಪ್ರದೇಶದ ಎಲ್ಲ ಕಡೆ ಜಾಲಾಡಲಾಯಿತು. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹೆಡಿಯಾಳ ಅರಣ್ಯ ವಲಯದಲ್ಲಿ ಭಾರಿ ಹುಡುಕಾಟವೇ ನಡೆಯಿತು. ಇದಕ್ಕೆ ಪಾರ್ಥ, ರೋಹಿತ್‌ ಮತ್ತು ಹಿರಣ್ಯ ಎಂಬ ಆನೆಗಳ ಬಳಕೆಯೂ ನಡೆಯಿತು. ಗ್ರಾಮದ ಹಲವು ಕಡೆಗಳಲ್ಲಿ ಬೋನುಗಳನ್ನು ಇರಿಸಲಾಗಿತ್ತು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಧಿಕಾರಿ ಕುಮಾರ್ ಪುಷ್ಕರ್ ಅವರೇ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.

ಕೊನೆಗೂ ಹುಲಿಯ ಜಾಡು ಸಿಕ್ಕಿತು!

ನವೆಂಬರ್‌ 25ರಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಹುಲಿಯನ್ನು ಹೇಗಾದರೂ ಹಿಡಿಯಲೇಬೇಕು ಎಂಬ ಶಪಥ ತೊಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಹುಲಿಯ ಜಾಡುಗಳನ್ನು ಹಿಡಿದಾಗ ಅದು ಒಂದು ನಿರ್ದಿಷ್ಟ ಪ್ರದೇಶಕ್ಕೆ ಬರುತ್ತದೆ ಎನ್ನುವುದರ ಸುಳಿವು ಸಿಕ್ಕಿತು.

ಹುಲಿಯ ಜಾಡು ಹಿಡಿಯಲು ಡ್ರೋನ್‌ ಕೂಡಾ ಬಳಸಲಾಗಿತ್ತು.

ಅರಣ್ಯಾಧಿಕಾರಿಗಳು ಆ ಭಾಗದ ಕೆಲವು ಕಡೆ ಬೋನುಗಳನ್ನು ಇಟ್ಟರು. ಆದರೆ, ಅವುಗಳು ಬೋನುಗಳು ಎಂದು ಗೊತ್ತಾಗದಂತೆ ಅವುಗಳಿಗೆ ಬಳಿಗಳನ್ನು ಸುತ್ತಿದರು. ಇತ್ತ ಒಂದು ನಿರ್ದಿಷ್ಟ ಜಾಗದಲ್ಲಿ ಹಸುವಿನ ಮಾಂಸವನ್ನು ಹಾಕಲಾಗಿತ್ತು.

ಹುಲಿ ಕಾರ್ಯಾಚರಣೆಗೆ ಆನೆಗಳನ್ನೂ ಬಳಸಲಾಗಿತ್ತು.

ಹುಲಿ ಈ ಮಾಂಸವನ್ನು ವಾಸನೆ ಆಧರಿಸಿ ಇಲ್ಲಿಗೆ ಬಂದರೆ ಅದರ ಮೇಲೆ ಅರಿವಳಿಕೆ ಶೂಟ್‌ ಮಾಡಲು ಅನುಕೂಲವಾಗುವಂತೆ ಬೋವಿನಲ್ಲಿ ವ್ಯವಸ್ಥೆ ಸಜ್ಜುಗೊಳಿಸಿ ಇಡಲಾಗಿತ್ತು. ಆದರೆ, ಹುಲಿಗೆ ಯಾವ ಸಂಶಯವೂ ಬಾರದಂತೆ ಈ ವಾಹನವನ್ನು ಕೂಡಾ ಬಳ್ಳಿಗಳಿಂದ ಮುಚ್ಚಲಾಗಿತ್ತು. ಅಲ್ಲಿ ಮನುಷ್ಯರ ಚಲನವಲನದ ಯಾವ ಸುಳಿವೂ ಸಿಗದಂತೆ ಮುನ್ನೆಚ್ಚರಿಕೆ ವಹಿಸಿ ಕಾಯಲಾಗುತ್ತಿತ್ತು. ಡ್ರೋನ್‌ ಸೇರಿದಂತೆ ಬೇರೆ ಕ್ಯಾಮೆರಾಗಳು ಕೂಡಾ ಮರೆಯಲ್ಲಿ ಸಜ್ಜಾಗಿದ್ದವು.

ದನದ ಮಾಂಸ ಇಟ್ಟು ಕಾಯುವ ಕಾರ್ಯಾಚರಣೆಯ ರಿಹರ್ಸಲ್

ಮಧ್ಯರಾತ್ರಿ 1.05ಕ್ಕೆ ಆಗಮಿಸಿದ ಹುಲಿ

ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಹುಲಿ ಕಾರ್ಯಾಚರಣೆ ನಡೆದಿತ್ತು. ರಾತ್ರಿ 1.05ರ ಹೊತ್ತಿಗೆ ಹುಲಿ ಆ ಭಾಗಕ್ಕೆ ಬಂದಿತ್ತು. ಅದು ಮಾಂಸದ ಬಳಿಗೆ ಹೋಗುತ್ತಿದ್ದಂತೆಯೇ ಸ್ವಲ್ಪವೇ ದೂರದಲ್ಲಿ ಮರೆಯಲ್ಲಿ ಬೋನಿನಲ್ಲಿ ಕುಳಿತಿದ್ದ ಬಂಡೀಪುರ ವೈದ್ಯಾಧಿಕಾರಿ ಡಾ.ವಾಸಿಂ ಅವರು ಅಲ್ಲಿಂದಲೇ ಅರಿವಳಿಕೆ ಮದ್ದು ಶೂಟ್ ಮಾಡಿದಾಗ ಮಧ್ಯ ರಾತ್ರಿ 1.15 ಆಗಿತ್ತು.

ಬಳ್ಳಿಗಳಿಂದ ಮುಚ್ಚಿದ ಬೋನಿನಿಂದ ಹುಲಿಯ ಮೇಲೆ ಅರಿವಳಿಕೆ ಶೂಟ್

ವೈದ್ಯಾಧಿಕಾರಿಗಳ ಅರಿವಳಿಕೆ ಶೂಟ್‌ನಿಂದ ವಿಚಲಿತವಾದ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ಆದರೆ, ಅದಕ್ಕೆ ಹೆಚ್ಚು ದೂರ ಹೋಗುವುದು ಸಾಧ್ಯವಾಗಿಲ್ಲ. ಹಾಗಂತ ಅದು ಹೋದ ಭಾಗಕ್ಕೆ ಒಮ್ಮೆಗೇ ನುಗ್ಗುವುದು ಕೂಡಾ ಸಾಧುವಾಗಿರಲಿಲ್ಲ. ಹಾಗಾಗಿ ಎಲ್ಲ ಪರಿಸ್ಥಿತಿಗಳನ್ನು ವಿಶ್ಲೇಷಿಸಿ ಕೊನೆಗೆ ಹುಲಿ ಹೋದ ಜಾಡನ್ನು ಅನುಸರಿಸಿದಾಗ ಸುಮಾರು ಒಂದು ಕಿ.ಮೀ. ದೂರದಲ್ಲಿ ಹುಲಿ ಬಿದ್ದಿರುವುದು ಕಂಡಿತು.‌

ಇದನ್ನೂ ಓದಿ: Tiger Attack: ಮಹಿಳೆಯ ಅರ್ಧ ದೇಹವನ್ನೇ ತಿಂದ ನರಭಕ್ಷಕ; ಮೈಸೂರಲ್ಲಿ ಹುಲಿ ದಾಳಿಗೆ ಮತ್ತೆ ಬಲಿ

ಬಳಿಕ ಅದನ್ನು ಬಲೆ ಹಾಕಿ ದಿಗ್ಬಂಧಿಸಲಾಯಿತು. ಪ್ರಜ್ಞೆ ತಪ್ಪಿದ್ದ ಹುಲಿಯನ್ನು ಬಳಿಕ ಸುಮಾರು 3 ಗಂಟೆಯ ಹೊತ್ತಿಗೆ ಗ್ರಾಮಸ್ಥರಿಗೆ ತೋರಿಸಲಾಯಿತು. ಹುಲಿಯನ್ನು ರಾತ್ರಿಯೇ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್‌ ಮಾಡಲಾಯಿತು. ಹುಲಿಯ ಆರೋಗ್ಯ ತಪಾಸಣೆಯ ಬಳಿಕ ಅರಣ್ಯ‌ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.

Exit mobile version