Site icon Vistara News

Parliament Election : ಯದುವೀರ್‌ ಒಡೆಯರ್‌ ಸ್ಪರ್ಧೆಗೆ ಒಪ್ಪಿಸಿದ್ದು ಹೇಗೆ? ಪತ್ನಿ ಪಾತ್ರ ಏನು?

Parliament Election Yaduveer trishika Kumari

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Mysore Constituency) ಬಿಜೆಪಿ ಅಭ್ಯರ್ಥಿಯಾಗಿ ರಾಜಮನೆತನದ ಯದುವೀರ್‌ ಒಡೆಯರ್‌ (Yaduveer Odeyar) ಅವರನ್ನು ಕಣಕ್ಕಿಳಿಸಲು (Parliament Election) ಬಿಜೆಪಿ ಅಣಿಯಾಗಿದೆ. ಹಾಲಿ ಸಂಸದರಾಗಿರುವ ಪ್ರತಾಪ್‌ ಸಿಂಹ (MP Pratap Simha) ಅವರನ್ನು ಬದಿಗಿಟ್ಟು ರಾಜರನ್ನು ಕಣಕ್ಕಿಳಿಸುವ ಬಿಜೆಪಿ ಪ್ರಯತ್ನ ಫಲಿಸಿದ್ದು ಹೇಗೆ ಎಂಬುದು ಒಂದು ಇಂಟ್ರೆಸ್ಟಿಂಗ್‌ ಸ್ಟೋರಿ.

ನಿಜವೆಂದರೆ, ಯದುವೀರ್‌ ಒಡೆಯರ್‌ ಅವರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಹುಟ್ಟಿಕೊಂಡಿದ್ದು ಈಗೇನೂ ಅಲ್ಲ. ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೇ ಮೈಸೂರಿನ ಅರಮನೆಗೆ ಬಂದಿದ್ದಾಗ ಈ ಪ್ರಸ್ತಾಪ ಮಾಡಿದ್ದರು ಎನ್ನಲಾಗಿದೆ. ಮುಂದೆ ಅಮಿತ್‌ ಶಾ ಅವರ ಮೂಲಕ ಚರ್ಚೆ ನಡೆದಿತ್ತು. ಆದರೆ, ಈ ಪ್ರಸ್ತಾಪಕ್ಕೆ ಯದುವೀರ್‌ ಅವರು ಒಪ್ಪಿರಲಿಲ್ಲ. ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರು ಕೂಡಾ ಈ ರಾಜಕೀಯ ಬೇಡ ಎಂದೇ ಹೇಳಿದ್ದರು.

ಮೋದಿ, ಅಮಿತ್ ಶಾ ಮೊದಲಾದ ನಾಯಕರೇ ಅರಮನೆ ಬಾಗಿಲಿಗೆ ಬಂದು ಪಕ್ಷಕ್ಕೆ ಆಹ್ವಾನಿಸಿದ್ದರೂ ಒಪ್ಪದ ಯದುವೀರ್‌ ಅವರನ್ನು ಬಿಜೆಪಿ ನಾಯಕರು ಬೇರೊಂದು ರೂಟ್‌ನಲ್ಲಿ ಹಿಡಿದು ಹಾಕಿದ್ದಾರೆ. ಅದು ಪತ್ನಿ ತ್ರಿಷಿಕಾ ಕುಮಾರಿ (Trishika Kumari) ರೂಟ್‌.

ಹೌದು ರಾಜಕೀಯ ಬೇಡ, ಚುನಾವಣಾ ಸ್ಪರ್ಧೆ ಬೇಡ ಎನ್ನುತ್ತಿದ್ದ ಯದುವೀರ್‌ ಅವರನ್ನು ಬಿಜೆಪಿ ಪತ್ನಿ ತೃಷಿಕಾ ಕುಮಾರಿ ಅವರ ಮೂಲಕ ಮನವೊಲಿಸಿದೆ ಎನ್ನಲಾಗಿದೆ. ಈ ಮನವೊಲಿಕೆಗೆ ಬಳಕೆಯಾಗಿದ್ದು ರಾಜ್ಯಸಭಾ ಸದಸ್ಯ ಹರ್ಷವರ್ಧನ್‌!

ರಾಜ್ಯಸಭಾ ಸದಸ್ಯರಾಗಿರುವ ಹರ್ಷವರ್ಧನ್‌ ಅವರು ಯದುವೀರ್‌ ಒಡೆಯರ್‌ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್‌ ಅವರ ಸಂಬಂಧಿ ಮತ್ತು ಕುಟುಂಬದ ಆತ್ಮೀಯರು. ಬಿಜೆಪಿ ಅವರ ಮೂಲಕ ತ್ರಿಷಿಕಾ ಕುಟುಂಬವನ್ನು ಸಂಪರ್ಕಿಸಿ ಮೊದಲು ಅವರನ್ನು ಮನವೊಲಿಸಿದೆ. ಬಳಿಕ ಅವರು ಯದುವೀರ್‌ ಅವರನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇದೆಲ್ಲ ಮಾತುಕತೆಗಳು ನಡೆದಾಗ ರಾಜ ಮಾತೆ ಪ್ರಮೋದಾ ದೇವಿ ಒಡೆಯರ್‌ ಅವರು ಧಾರ್ಮಿಕ ಪ್ರವಾಸದಲ್ಲಿದ್ದರು. ಅವರನ್ನು ಮಾರ್ಗ ಮಧ್ಯೆಯೇ ಮಾತುಕತೆ ನಡೆಸಿ ಒಪ್ಪಿಗೆ ಪಡೆಯಲಾಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ : MP Pratap Simha : ಮಹಾರಾಜರ ಬಗ್ಗೆ ಲಘುವಾಗಿ ಮಾತಾಡ್ಬೇಡಿ; ಪ್ರತಾಪ್‌ಗೆ ವಿರೋಧಿ ಬಣದ ಎಚ್ಚರಿಕೆ

ಒಂದು ಟಿಕೆಟ್ ಕೊಟ್ಟು ಹತ್ತಾರು ಲಾಭದ ನಿರೀಕ್ಷೆ

ಯದುವೀರ್ ಕಣಕ್ಕಿಳಿಸುವ ಮೂಲಕ ಸಾಕಷ್ಟು ಲಾಭಗಳನ್ನು ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಬಿಜೆಪಿಗಿದೆ.

  1. ಬಿಜೆಪಿಗೆ ಮತ್ತೊಂದು ರಾಜವಂಶ ಸೇರ್ಪಡೆ: ಈಗಾಗಲೇ ದೇಶದ ಹಲವು ರಾಜಮನೆತನಗಳು ಬಿಜೆಪಿ ಜತೆಗಿವೆ. ಮೈಸೂರು ಮನೆತನ ಸೇರ್ಪಡೆ ಮೂಲಕ ಪಕ್ಷದ ಘನತೆ ಹೆಚ್ಚಳ.
  2. ಭಾವನಾತ್ಮಕ ಬಂಧ: ಮೈಸೂರು ರಾಜಮನೆತನದ ಬಗ್ಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿತ್ರದುರ್ಗ ಹೀಗೆ ಅನೇಕ ಕ್ಷೇತ್ರಗಳ ಜನರಿಗೆ ಗೌರವ ಇದೆ, ಈ ಗೌರವ ಮತವಾಗಿ ಪರಿವರ್ತನೆಯಾಗುವ ಆಶಾಭಾವನೆ.
  3. ಜಾತಿ ಲೆಕ್ಕಾಚಾರ: ಯದುವೀರ್ ಅಭ್ಯರ್ಥಿಯಾದ್ರೆ ಮೈಸೂರು- ಕೊಡಗು ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಮೇಲೆ ಎಲೆಕ್ಷನ್ ನಡೆಯೋದೇ ಇಲ್ಲ. ಕ್ಷೇತ್ರದಲ್ಲಿ ಅರಸು ಸಮುದಾಯದ ಗರಿಷ್ಠ 50 ಸಾವಿರ ಮತದಾರರು ಇರಬಹುದು, ಆದರೆ ಬಿಹಾರ ಸೇರಿದಂತೆ ಅನೇಕ ಕ್ಷೇತ್ರಗಳ ಯಾದವ, ಗೊಲ್ಲ ಸಮುದಾಯದ ಮತ ಸೆಳೆಯಲು ಅನುಕೂಲ.
  4. ಯದುವೀರ್ ವರ್ಚಸ್ಸು: ಯದುವೀರ್ ಸ್ಪುರದ್ರುಪಿ ಯುವಕ, ಹೊಸಮುಖಕ್ಕೆ ಮಣೆ ಹಾಕಿದ ಪ್ರಯೋಗ ಮಾಡಿದಂತೆ ಆಗುತ್ತದೆ.
  5. ಸಿದ್ದರಾಮಯ್ಯ ಬಾಯಿಗೆ ಬೀಗ: ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಟೀಕಿಸೋದು ಮಾಮೂಲು. ಯದುವೀರ್ ಅಭ್ಯರ್ಥಿಯಾದ್ರೆ ತಮ್ಮ ತವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನೇ ಎಚ್ಚರಿಕೆಯಿಂದ ಸಂಭೋದಿಸಬೇಕು.
Exit mobile version