ಮೈಸೂರು: ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (Self harming) ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲೋಕೇಶ್ ಪಿಕ್ ಅಪ್ ಡ್ರಾಪ್ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಹೆಣ್ಣು ಬಾಕನ ಬಲೆಗೆ ಪಿಯುಸಿ ಓದುತ್ತಿದ್ದ ರಿಷಿತಾ ಬಿದ್ದಿದ್ದಳು. ಅಂಕಲ್ ಗಾಳಕ್ಕೆ ಸಿಲುಕಿದ (Physical Abuse) ಬಾಲಕಿಯ ಕುಟುಂಬವು ಮಾನ ಮರ್ಯಾದೆಗೆ ಹೆದರಿ ನಾಶವಾಗಿದೆ. ರಿಷಿತಾ ಕೆಆರ್ ನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೋಗಿ ಬರುವಾಗ ಲೋಕೇಶ್ ಪರಿಚಯವಾಗಿದ್ದ. ರಿಷಿತಾಳಿಗೆ ನಿನ್ನ ತಾತ ನನಗೆ ಗೊತ್ತಿರುವವರು ಎಂದು ಪರಿಚಯ ಮಾಡಿಕೊಂಡು ಊರಿಗೆ ಡ್ರಾಪ್ ಮಾಡುತ್ತಲೇ ಸಲುಗೆ ಬೆಳೆಸಿಕೊಂಡಿದ್ದ.
ಈ ವೇಳೆ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಕರೆದಾಗ ಬರುವಂತೆ ಟಾರ್ಚರ್ ಕೊಟ್ಟಿದ್ದ ಎನ್ನಲಾಗಿದೆ. ಒಂದು ದಿನ ಕಾರಿನಲ್ಲಿ ಬಂದು ಅಡ್ಡಗಟ್ಟಿ ಬಾಲಕಿಗೆ ಬೆದರಿಕೆ ಹಾಕಿದ್ದ. ಈ ವೇಳೆ ಆರೋಪಿಯಿಂದ ಮೊಬೈಲ್ ಕಸಿದುಕೊಂಡು ಕಲ್ಲಿನಿಂದ ಜಜ್ಜಿ ಹಾಕಿದ್ದಳು.
ಬಳಿಕ ನಿನ್ನ ಮೊಮ್ಮಗಳು ನನ್ನ ಮೊಬೈಲ್ ಒಡೆದು ಹಾಕಿದ್ದಾಳೆ ಎಂದು ಮನೆ ಬಾಗಿಲಿಗೆ ಬಂದು ಆರೋಪಿ ಲೋಕೇಶ್ ಗಲಾಟೆ ಮಾಡಿದ್ದ. ಬಳಿಕ ಎಲ್ಲವನ್ನೂ ವಿಚಾರಿಸಿದಾಗ ಮನನೊಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕೆ ನ್ಯಾಯ ಸಿಗಲ್ಲ ಎಂದು ಭಾವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಸಾಂತ್ವನ
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ನಿವಾಸಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿದರು. ಮೃತ ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿದರು. ಮೃತ ಮಹದೇವನಾಯ್ಕ ಪುತ್ರ ಮಂಜುಗೆ ಸಾಂತ್ವನ ಹೇಳಿದರು.
ನಾಲ್ವರಲ್ಲಿ ಅಪ್ರಾಪ್ತೆಯ ತಾತ ಮತ್ತು ತಾಯಿ ಮೃತಪಟ್ಟರೆ, ಬಾಲಕಿ ಹಾಗೂ ಅಜ್ಜಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಗ್ರಾಮದಲ್ಲೇ ಮೃತದೇಹ ಇಟ್ಟುಕೊಂಡಿದ್ದಾರೆ. ದೂರು ಕೊಟ್ಟರೂ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಬೇಕು ಹಾಗೂ ಮೃತ ಕುಟುಂಬಸ್ಥರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು. ಮೃತಪಟ್ಟು ಎರಡು ದಿನವಾದರೂ ಇನ್ನು ಅಂತ್ಯಕ್ರಿಯೆ ಮಾಡಿಲ್ಲ.
ತಂದೆ ಬಳಿಕ ಮಗಳು ಮೃತ್ಯು
ಮಲೆಮಹದೇಶ್ವರ ಬೆಟ್ಟದಲ್ಲಿ (MM Hills) ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (Self Harming) ಯತ್ನಿಸಿದ ಪ್ರಕರಣಕ್ಕೆ (Physical Abuse) ಸಂಬಂಧಿಸಿದ್ದಂತೆ ಮೊನ್ನೆ ಶನಿವಾರ ತಂದೆ ಮಹಾದೇವನಾಯಕ (65) ಮೃತಪಟ್ಟಿದ್ದರು. ಇಂದು ಸೋಮವಾರ (ಜೂ.10) ಚಿಕಿತ್ಸೆ ಫಲಕಾರಿಯಾಗದೆ ಅವರ ಮಗಳು ಲೀಲಾವತಿ (45 ) ಮೃತಪಟ್ಟಿದ್ದಾರೆ. ಲೀಲಾವತಿಗೆ ಮೂರು ದಿನಗಳಿಂದ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕ್ರಿಮಿ ನಾಶಕ ಸೇವಿಸಿದ ತೀವ್ರತೆಗೆ ಮೃತಪಟ್ಟಿದ್ದಾರೆ.
ಲೀಲಾವತಿ ಅವರ ಮಗಳು ರಿಷೀತಾಳ ನಗ್ನ ಫೋಟೊ ತೋರಿಸಿ ಕಾಮುಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ತಂದೆ-ಮಗಳು ಮೃತಪಟ್ಟರೆ, ಅಜ್ಜಿ- ಮೊಮ್ಮಗಳ ಸ್ಥಿತಿ ಗಂಭೀರವಾಗಿದ್ದು, ಇಬ್ಬರಿಗೂ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬಾಲಕಿಯ ಡೆತ್‌ನೋಟ್ ಪತ್ತೆ
ಮಹಾದೇವನಾಯಕ ಹಾಗೂ ಗೌರಮ್ಮ ದಂಪತಿಯ ಮಗಳು ಲೀಲಾವತಿ ಹಾಗೂ ಈಕೆ ಮಗಳು ರಿಷಿತಾ ಈ ನಾಲ್ವರು ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಕಾಮ ಕ್ರಿಮಿ ಲೋಕೇಶ್ ಕೊಟ್ಟ ಟಾರ್ಚರ್‌ಗೆ ಬೇಸತ್ತು ಇಡೀ ಕುಟುಂಬ ಕ್ರಿಮಿ ನಾಶಕ ಸೇವಿಸಿದ್ದರು. ಅಪ್ರಾಪ್ತೆ ಬರೆದಿಟ್ಟ ಡೆತ್‌ನೋಟ್ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಡೆತ್‌ನೋಟ್‌ನಲ್ಲಿ ಆರೋಪಿ ಲೋಕೇಶ್ ಕೊಟ್ಟ ಹಿಂಸೆಯನ್ನು ಎಳೆ ಎಳೆಯಾಗಿ ಬರೆದಿಟ್ಟಿದ್ದಾಳೆ. ಲೋಕೇಶ್ ಎಲ್ಲಾ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಠಿಯಿಂದ ನೋಡುತ್ತಾನೆ. ನನ್ನನ್ನು ಸಹ ಲೋಕೇಶ್ ಕೆಟ್ಟ ದೃಷ್ಠಿಯಿಂದ ನೋಡಿದ್ದ. ನಮ್ಮ ಕುಟುಂಬದ ಮಾನ ಮರ್ಯಾದೆ ಕಳೆದು ಹಾಕಿದ್ದಾನೆ. ಲೋಕೇಶ್‌ನನ್ನು ಸುಮ್ಮನೆ ಬಿಡಬೇಡಿ, ಆತನನ್ನ ಸುಮ್ಮನೆ ಬಿಟ್ಟರೆ ನನ್ನಂತ ಎಷ್ಟೋ ಹೆಣ್ಣು ಮಕ್ಕಳ ಜೀವ ಹಾಳಾಗುತ್ತೆ ಎಂದು ತನಗೆ ಆದ ಅಪಮಾನ ಹಾಗೂ ಮಾನಸಿಕ ಹಿಂಸೆಯ ಕುರಿತು ಬರೆದಿಟ್ಟಿದ್ದಾಳೆ.
ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಈ ವಿಷಯ ತಿಳಿಯುತ್ತಿದ್ದ ಆಕ್ರೋಶಗೊಂಡ ಚಂದಗಾಲು ಗ್ರಾಮಸ್ಥರು ಮಹದೇವನಾಯಕರ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಕೆ.ಆರ್.ನಗರ ಮುಖ್ಯರಸ್ತೆಯಲ್ಲಿ ಶವ ಇಟ್ಟು ಪ್ರತಿಭಟಿಸಿ, ಆರೋಪಿಗೆ ಉಗ್ರ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು. ನಿರ್ಲಕ್ಷ್ಯ ವಹಿಸಿದ ಪೊಲೀಸರ ಮೇಲೂ ಕಠಿಣ ಕ್ರಮ ಆಗಬೇಕೆಂದರು. ರಸ್ತೆ ತಡೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ