ಬೆಂಗಳೂರು: ನವದೆಹಲಿಯ ಕರ್ತವ್ಯಪಥದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ.
ಇದೇ ವರ್ಷದ ಸೆಪ್ಟೆಂಬರ್ 8 ರಂದು ಲೋಕಾರ್ಪಣೆಗೊಂಡ ಪ್ರತಿಮೆಯನ್ನು ಕನ್ನಡಿಗ, ಮೈಸೂರಿನ ಯುವ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಾಣ ಮಾಡಿದ್ದು ಎನ್ನುವುದೂ ಪ್ರಚಾರವಾಗಿದೆ. ಕಳೆದ ವರ್ಷ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಸುಂದರ ಪ್ರತಿಮೆಯನ್ನು ನಿರ್ಮಿಸಿದವರು ಅರುಣ್ ಯೋಗಿರಾಜ್. ಈ ಪ್ರತಿಮೆಯನ್ನೂ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು.
ಆದರೆ, ನೇತಾಜಿ ಪ್ರತಿಮೆಯನ್ನು ತಾನೇ ನಿರ್ಮಿಸಿದ್ದು ಎಂದು ರಾಜಸ್ಥಾನ ಮೂಲದ ಶಿಲ್ಪಿ ಹೇಳಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸ್ವತಃ ಅರುಣ್ ಯೋಗಿರಾಜ್ ವ್ಯಗ್ರರಾಗಿದ್ದಾರೆ.
ನವದೆಹಲಿಯ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನದವರೆಗಿನ ರಾಜಪಥವನ್ನು ಇತ್ತೀಚೆಗೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಯಿತು. ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮದಿನವಾದ ಜನವರಿ 23ರಂದು ಥ್ರೀಡಿ ಹೋಲೋಗ್ರಾಂ ಪ್ರತಿಮೆಯನ್ನು ಪ್ರಧಾನಿ ಲೋಕಾರ್ಪಣೆ ಮಾಡಿದ್ದರು. ಇದೇ ಸ್ಥಳದಲ್ಲಿ ಕಲ್ಲಿನ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು.
ಅದರಂತೆ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ನೇತೃತ್ವದ ಶಿಲ್ಪಿಗಳ ತಂಡ ಪ್ರತಿಮೆಯನ್ನು ನಿರ್ಮಿಸಿತ್ತು, ಸೆಪ್ಟೆಂಬರ್ 8ರಂದು ಲೋಕಾರ್ಪಣೆಯೂ ಆಗಿತ್ತು. ಆದರೆ ಇದೀಗ ಹೊಸ ವಿವಾದ ಸೃಷ್ಟಿಯಾಗಿದೆ.
ತಾನೇ ಶಿಲ್ಪಿ ಎಂದ ಕುಮಾವತ್
ಆಂಗ್ಲ ದೈನಿಕವೊಂದಕ್ಕೆ ರಾಜಸ್ಥಾನ ಮೂಲದ ಶಿಲ್ಪಿ ನರೇಶ್ ಕುಮಾವತ್ ಸಂದರ್ಶನ ನೀಡಿದ್ದಾರೆ. ʼChiselling a new era’ (ಹೊಸ ಯುಗದ ಕೆತ್ತನೆಯಲ್ಲಿ) ಎಂಬ ಶೀರ್ಷಿಕೆ ನೀಡಲಾಗಿರುವ ಸಂದರ್ಶನದ ಪ್ರಾರಂಭದಲ್ಲಿ ಸಂದರ್ಶಕರು “28 ಅಡಿ ಎತ್ತರದ ಪ್ರತಿಮೆಯನ್ನು ನರೇಶ್ ಕುಮಾವತ್ ವಿನ್ಯಾಸ ಮಾಡಿದರು. ಅವರ ತಂಡವು ಕಲ್ಲಿನಿಂದ ಶಿಲ್ಪ ರಚನೆ ಮಾಡಿತು” ಎಂದು ತಿಳಿಸಿದ್ದಾರೆ.
ಸಂದರ್ಶನದ ಮುಂದುವರಿದ ಭಾಗದಲ್ಲಿ ಈ ಕುರಿತು ಸ್ವತಃ ನರೇಶ್ ಕುಮಾವತ್ ಮಾತನಾಡಿದ್ದು, “ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ (ಎನ್‌ಜಿಎಂಎ) ವತಿಯಿಂದ ನನಗೆ ಆಹ್ವಾನ ನೀಡಲಾಗಿತ್ತು. ನೇತಾಜಿ ಅವರ ಪ್ರತಿಮೆ ನಿರ್ಮಾಣಕ್ಕೆ ಕೆಲವೊಂದು ವಿನ್ಯಾಸಗಳನ್ನು ಅವರು ನನ್ನಿಂದ ಬಯಸಿದ್ದರು. ನಾವು ಆರು ತಿಂಗಳು ಈ ಕಾರ್ಯದಲ್ಲಿ ತೊಡಗಿದೆವು. ನೇತಾಜಿ ಅವರ ಕುಟುಂಬವನ್ನೂ ಸಂಪರ್ಕಿಸಿ ವಿನ್ಯಾಸ ಮಾಡಿದೆವು. ಅಂತಿಮವಾಗಿ, ನೇತಾಜಿ ಅವರು ಸಲ್ಯೂಟ್ ಮಾಡುತ್ತಿರುವ ವಿನ್ಯಾಸವನ್ನು ಸರ್ಕಾರ ಆಯ್ಕೆ ಮಾಡಿತು. ತೆಲಂಗಾಣದ ಖಮ್ಮಂನಿಂದ ಕಪ್ಪು ಶಿಲೆಯನ್ನು ಆಯ್ಕೆ ಮಾಡಿ, 50 ಕುಶಲಕರ್ಮಿಗಳು ಶ್ರಮವಹಿಸಿ ಈ ಪ್ರತಿಮೆ ನಿರ್ಮಿಸಿದರು” ಎಂದು ಹೇಳಿಕೊಂಡಿದ್ದಾರೆ.
ಅರುಣ್ ಯೋಗಿರಾಜ್ ಬೇಸರ
ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂದರ್ಶನವನ್ನು ಉಲ್ಲೇಖಿಸಿ ಅರುಣ್ ಯೋಗಿರಾಜ್ ಟ್ವೀಟ್ ಮಾಡಿದ್ದಾರೆ. ಈ ಪತ್ರಿಕೆಯಿಂದ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ರೂಪಿಸಿದ್ದು ನಾನೇ ಹೊರತು ಇಲ್ಲಿ ತಿಳಿಸಿದಂತೆ ಬೇರೆಯವರಲ್ಲ. ಬೇರೆಯವರ ಸಾಧನೆಯನ್ನು ಬೇರೆ ಯಾರೂ ತಮ್ಮದೆಂದು ಹೇಳಿಕೊಳ್ಳಬಾರದು. ನರೇಶ್ ಕುಮಾವತ್ ಅವರ ವಿನ್ಯಾಸವನ್ನು ನಾನು ಎಂದಿಗೂ ನೋಡಿಯೇ ಇಲ್ಲ. ಈ ಲೇಖನವನ್ನು ನೋಡಲು ನೋವು ಹಾಗೂ ಬೇಸರವಾಗುತ್ತದೆ ಎಂದಿದ್ದಾರೆ. ಹಾಗಾದರೆ ಇಲ್ಲಿ ಸುಳ್ಳು ಹೇಳುತ್ತಿರುವವರು ಯಾರು? ಎಂಬ ಒಬ್ಬರ ಪ್ರಶ್ನೆಗೆ ʼಇಬ್ಬರೂʼ ಎಂದು ಅರುಣ್ ಯೋಗಿರಾಜ್ ಉತ್ತರಿಸಿದ್ದಾರೆ.
ಅರುಣ್ ಯೋಗಿರಾಜ್ ಮಾತ್ರ ಉಲ್ಲೇಖ
ನೇತಾಜಿ ಪ್ರತಿಮೆ ಲೋಕಾರ್ಪಣೆ ನಂತರದಲ್ಲಿ ಸ್ವತಃ ಮೋದಿ ಅವರನ್ನು ಭೇಟಿ ಮಾಡಿದ್ದ ಅರುಣ್ ಯೋಗಿರಾಜ್, ನೇತಾಜಿ ಅವರ ಸಣ್ಣ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಕುರಿತು ಕೇಂದ್ರ ಪ್ರಸಾರ ಸಚಿವಾಲಯ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಕೇವಲ ಅರುಣ್ ಯೋಗಿರಾಜ್ ಹೆಸರು ಇದೆ.
ಕೇಂದ್ರ ಸಂಸ್ಕೃತಿ ಸಚಿವಾಲಯ ಬಿಡುಗಡೆ ಮಾಡಿರುವ ವಿಡಿಯೋದಲ್ಲಿಯೂ ಅರುಣ್ ಯೋಗಿರಾಜ್ ಅವರಿಗೆ ಮಾತ್ರವೇ ಶ್ರೇಯವನ್ನು ನೀಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾಡಿರುವ ಟ್ವೀಟ್‌ನಲ್ಲಿ “ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ನೇತೃತ್ವದ ತಂಡ ಅತ್ಯಂತ ಸುಂದರವಾಗಿ ಕೆತ್ತನೆ ಮಾಡಿ ನಿರ್ಮಿಸಿದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯ ನಿರ್ಮಾಣ ಕಾರ್ಯದ ಒಂದು ಸಣ್ಣ ಝಲಕ್” ಎಂದಿದ್ದಾರೆ.