ಮೈಸೂರು : ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತನೆಯ ಮೂರ್ತಿಗೆ (Ram lalla Statue) ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ ಎಂದು ರಾಮಮಂದಿರ ಟ್ರಸ್ಟ್ (Rama Mandir Trust) ಮೂಲಗಳಿಂದ ತಿಳಿದುಬಂದಿದೆ.
ದೇಶದ ಮೂವರು ಪ್ರಮುಖ ಶಿಲ್ಪಿಗಳಾದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ರಾಮಲಲ್ಲಾ ಮೂರ್ತಿಯನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೂವರೂ ಶಿಲ್ಪಿಗಳು ತಮ್ಮ ಕಲ್ಪನೆಯ ರಾಮ ಲಲ್ಲಾನ ಮೂರ್ತಿಯನ್ನು ನಿರ್ಮಿಸಿ ಸಮರ್ಪಿಸಿದ್ದಾರೆ. ಇವುಗಳ ಪೈಕಿ ಯಾವುದನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿ ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರ ನಡುವೆ ಮತದಾನ ನಡೆದು ಮೈಸೂರಿನ ಶಿಲ್ಪಿ ಯೋಗಿರಾಜ್ ಅವರ ಮೂರ್ತಿಯನ್ನು ಆಯ್ಕೆ ಮಾಡಲಾಯಿತು ಎಂದು ತಿಳಿದುಬಂದಿದೆ.
ಮೈಸೂರಿನ ಯೋಗಿ ಮನೆಯಲ್ಲಿ ಸಂಭ್ರಮ
ಶಿಲ್ಪಿ ಯೋಗಿರಾಜ್ ಅವರು ತಯಾರಿಸಿದ ಮೂರ್ತಿ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕುಟುಂಬದಲ್ಲಿ ಭಾರಿ ಸಂಭ್ರಮಕ್ಕೆ ಕಾರಣವಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಹೆಂಡತಿ ವಿಜೇತ ಅವರಂತೂ ತುಂಬು ಖುಷಿಯಿಂದ ಮಾತನಾಡಿ, ನಮ್ಮ ಮೂರ್ತಿಯೇ ಆಯ್ಕೆ ಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ನನ್ನ ಪತಿಯವರು ಕಳೆದ ಆರು ತಿಂಗಳಿನಿಂದ ಮನೆಗೆ ಬಂದಿಲ್ಲ. ಪುಟ್ಟ ಮಗುವಿದೆ ನಮಗೆ. ಆದರೆ ಅವರು ರಾಮಲಲ್ಲಾನ ಮೂರ್ತಿಯನ್ನೇ ಮಗುವೆಂದು ಭಾವಿಸಿ ಕೆಲಸ ಮಾಡಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡರು.
ಮಗ ಕೆತ್ತನೆ ಮಾಡಿದ ಶಿಲ್ಪವೆ ಆಯ್ಕೆಯಾಗುತ್ತೆ ಎಂಬ ನಂಬಿಕೆ ಇತ್ತು. ನನಗಂತೂ ಬಹಳ ಖುಷಿಯಾಗಿದೆ. ಈ ಸಂದರ್ಭದಲ್ಲಿ ನನ್ನ ಪತಿ ಇಲ್ಲದಿರುವುದು ಬೇಸರ ತಂದಿದೆ. ಅವರು ಇದ್ದಿದ್ದರೆ ಮಗನ ಸಾಧನೆಗೆ ತುಂಬಾ ಖುಷಿ ಪಡುತ್ತಿದ್ದರು ಎಂದು ಅರುಣ್ ಯೋಗಿರಾಜ್ ಅವರ ತಾಯಿ ಹೇಳಿದ್ದಾರೆ.
Sculpted numerous murthi over more than two decades and this one is still one of my favourite pic.twitter.com/GOWBZToVk0
— Arun Yogiraj (@yogiraj_arun) September 3, 2023
ಎಚ್.ಡಿ ಕೋಟೆಯ ಕೃಷ್ಣ ಶಿಲೆ ಬಳಸಿ ಮಾಡಿದ ಮೂರ್ತಿ
ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಕಲ್ಲು ಬಳಕೆ ಮಾಡಲಾಗಿದೆ ಎಂದು ಶಿಲ್ಪಿ ಸೂರ್ಯ ಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ: Ayodhya Ram Mandir: ಮೇಲೇಳುತ್ತಿರುವ ಭವ್ಯ ಮಂದಿರದ ಹಿಂದಿದೆ ಎಷ್ಟೊಂದು ಕಾಯುವಿಕೆ!
ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಈ ನಡುವೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾನ ಕಲ್ಲಿನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ಈಗ ಅದೇ ಮೂರ್ತಿ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆಗುತ್ತದೆ ಎಂಬ ಸುದ್ದಿ ಇನ್ನಷ್ಟು ಖುಷಿ ನೀಡುತ್ತಿದೆ ಎಂದಿದ್ದಾರೆ.