ಮೈಸೂರು/ಕೊಪ್ಪಳ: ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದೆ. ಮೈಸೂರಿನ ಹೊರ ವಲಯದ ರಿಂಗ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಚಂದ್ರು ಮತ್ತು ಪ್ರೇಮಾ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.
ಮೈಸೂರಿನ ಕೂರ್ಗಳ್ಳಿ ಗ್ರಾಮದ ನಿವಾಸಿಯಾದ ಈ ದಂಪತಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್ ಬೈಕ್‌ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕೆಳಗೆ ಬಿದ್ದ ದಂಪತಿ ಗಂಭೀರ ಗಾಯಗೊಂಡಿದ್ದಾರೆ. ಚಂದ್ರು ಅವರು ಗಂಭೀರ ಗಾಯಗೊಂಡರೆ, ಸಣ್ಣ-ಪುಟ್ಟ ಗಾಯದಿಂದ ಪ್ರೇಮಾ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ರಸ್ತೆ ಪೂರ್ತಿ ರಕ್ತಸಿಕ್ತವಾಗಿತ್ತು. ಸ್ಥಳಕ್ಕೆ ವಿವಿ ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Self Harming : ಆನೇಕಲ್ ಸರ್ಕಾರಿ ಆಸ್ಪತ್ರೆ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಕೊಪ್ಪಳದಲ್ಲಿ ಅಪರಿಚಿತ ವಾಹನಕ್ಕೆ ಎಎಸ್‌ಐ ಸಾವು
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯನಿರತ ಎಎಸ್ಐ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಒಣಬಳ್ಳಾರಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ನಡೆದಿದೆ. ರಾಮಣ್ಣ(55) ಮೃತ ದುರ್ದೈವಿ.
ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಣ್ಣ ಅವರು ಹೆದ್ದಾರಿ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಿಂದ ರಾಮಣ್ಣ ಮೃತಪಟ್ಟಿದ್ದಾರೆ. ಮುನಿರಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತ ಮಾಡಿ ಪರಾರಿ ಆಗಿರುವವರಿಗಾಗಿ ಹುಡುಕಾಟ ನಡೆದಿದೆ.
ಬ್ರೇಕ್ ಫೇಲ್ ಆಗಿ ಹೊಲಕ್ಕೆ ನುಗ್ಗಿದ ಬಸ್
ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್‌ವೊಂದು ಹೊಲಕ್ಕೆ ನುಗ್ಗಿದೆ. ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಬಳಿ ಘಟನೆ ನಡೆದಿದೆ. ಧಾರವಾಡದಿಂದ ಕರಡಿಗುಡ್ಡದ ಗ್ರಾಮಕ್ಕೆ ಹೊರಟಿದ್ದ ಬಸ್‌ನ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಪಾತಕ್ಕೆ ಬಿದ್ದ ಲಾರಿ, ಚಾಲಕ ಗ್ರೇಟ್ ಎಸ್ಕೇಪ್
ಚಿಕ್ಕಮಗಳೂರಿನಲ್ಲಿ ಲಾರಿ ಚಾಲಕರೊಬ್ಬರು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಲಾರಿ ಪ್ರಪಾತಕ್ಕೆ ಬಿದ್ದರೂ ಅದೃಷ್ಟವಶಾತ್ ಚಾಲಕ ಬದುಕುಳಿದಿದ್ದಾರೆ. ನಿರಂತರ ಮಳೆಗೆ ನೆಮ್ಮಾರು ಸಮೀಪದ ರಸ್ತೆ ಕುಸಿದು, ಲಾರಿಯೊಂದು ಸುಮಾರು 50 ಅಡಿ ಆಳದಲ್ಲಿ ಬಿದ್ದಿದೆ. ಲಾರಿ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ಶೃಂಗೇರಿ ನೆಮ್ಮಾರು ಬಳಿ ರಸ್ತೆ ಕುಸಿದ ಪರಿಣಾಮ ಲಾರಿಯು ಪ್ರಪಾತಕ್ಕೆ ಬಿದ್ದಿದೆ. ನೆಮ್ಮಾರು ವ್ಯಾಪ್ತಿಯ ಹೊಸದೇವರಹಡ್ಳು ಸಮೀಪದಲ್ಲಿ ಘಟನೆ ನಡೆದಿದೆ.
ಕರೆಂಟ್ ಶಾಕ್‌ಗೆ ಕೋತಿಗಳು ಸಾವು
ವಿದ್ಯುತ್ ಸ್ಪರ್ಸ್‌ದಿಂದ ಕೋತಿಗಳು ಮೃತಪಟ್ಟಿರುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಎರಡು ಕೋತಿಗಳು ಸಾವನ್ನಪ್ಪಿವೆ. ಇತ್ತ ಗ್ರಾಮಸ್ಥರು ಕೋತಿಗಳಿಗೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನಡೆಸಿದರು. ಇದಕ್ಕೂ ಮೊದಲು ಆಟೋದಲ್ಲಿ ಮೆರವಣಿಗೆ ಮಾಡಿ ಜೈ ಭಜರಂಗಿ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಬಳಿಕ ಹಳೇ ಕುಂದುವಾಡದಲ್ಲಿ ಅಂತ್ಯಕ್ರಿಯೆ ನಡೆಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ